
ದೆಹಲಿ ವಾಯು ಮಾಲಿನ್ಯ……
ನಮ್ಮ ನಗರ ಯಾವಾಗ ?……
ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ ?
ಯಮುನಾ ನದಿಯ ತಟದ ಸುಂದರ ನಗರ – ದೆಹಲಿ……..
ವಿಶಾಲ ರಸ್ತೆಗಳ ಬೃಹತ್ ಕಟ್ಟಡಗಳ ಭವ್ಯ ನಗರ – ದೆಹಲಿ…..
ಐತಿಹಾಸಿಕ ಮಹತ್ವದ ಅದ್ಭುತ ನಗರ – ದೆಹಲಿ……..
ವಿಶ್ವದ ಅತಿಮುಖ್ಯ ನಗರಗಳಲ್ಲಿ ಒಂದು – ದೆಹಲಿ……
ಭಾರತದ ರಾಜಧಾನಿ – ದೆಹಲಿ…..
ಭಾರತದ ಆಡಳಿತದ ಶಕ್ತಿ ಕೇಂದ್ರ – ದೆಹಲಿ……..
ಭಾರತ ರಾಜಕೀಯ ಮಹತ್ವದ ವ್ಯಕ್ತಿಗಳು ವಾಸವಾಗಿರುವ ಮತ್ತು ಆಡಳಿತ ನಡೆಸಿರುವ ಮತ್ತು ನಡೆಸುತ್ತಿರುವ ನಗರ – ದೆಹಲಿ……
ಅಂತಹ ದೆಹಲಿಯೇ ಈ ಕ್ಷಣದಲ್ಲಿ ವಾಸಿಸಲು ಯೋಗ್ಯವಲ್ಲದ ನಗರವಾಗಿದೆ. ಗಾಳಿಯಲ್ಲಿ ಧೂಳಿನ ಕಣಗಳು ಈಗಾಗಲೇ ಅಪಾಯಕಾರಿ ಹಂತ ತಲುಪಿಯಾಗಿದೆ. ಆಸ್ಪತ್ರೆಗಳು ಗಿಜಿಗುಡುತ್ತಿವೆ.
ಶ್ರೀಮಂತರು ಹೇಗೋ ಹವಾನಿಯಂತ್ರಿತ ವ್ಯವಸ್ಥೆ, ಆಮ್ಲಜನಕದ ಹಾಸಿಗೆ, ವಾಯು ಶುದ್ದೀಕರಣ ಯಂತ್ರ ಉಪಯೋಗಿಸಿ ಒಂದಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಾರೆ. ಬಡವರ ಗತಿ !!!!!……
ಅಭಿವೃದ್ಧಿ ಎಂದರೆ ಜನರ ಜೀವನಮಟ್ಟ ಸುಧಾರಣೆ, ಅವರ ಆರೋಗ್ಯ ಶಿಕ್ಷಣ ಮುಂತಾದ ಮೂಲಭೂತ ಅವಶ್ಯಕತೆಗಳ ಪೂರೈಕೆ, ಅವರ ನೆಮ್ಮದಿಯ ಮಟ್ಟ ಉತ್ತಮ ಪಡಿಸುವ ಕಾರ್ಯಗಳು ಎಂದು ಅರ್ಥ. ಆದರೆ ಈಗ ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ನಾವು ಚಲಿಸುತ್ತಿದ್ದೇವೆ. ಮುಂದೆ……..
ಇದು ಕೇವಲ ದೆಹಲಿಯ ವಿಷಯವಲ್ಲ. ಭಾರತದ ಪ್ರಮುಖ ನಗರಗಳಲ್ಲಿ ಈ ವಾಯುಮಾಲಿನ್ಯ ಅಪಾಯಕಾರಿ ಹಂತ ದಾಟಿಯಾಗಿದೆ. ಕಾನ್ಪುರ, ಲಕ್ನೋ, ಮುಂಬಯಿ, ಕೋಲ್ಕತಾ, ಚೆನೈ, ಹೈದರಾಬಾದ್, ಭೂಪಾಲ್, ಪುಣೆ, ಬೆಂಗಳೂರು ಮುಂತಾದ ಎಲ್ಲಾ ನಗರಗಳು ವಿಷಯುಕ್ತವಾಗಿ ವಾಸಿಸಲು ಅಯೋಗ್ಯವಾಗುವ ಪರಿಸ್ಥಿತಿ ಉದ್ಭವಿಸಿದೆ.
ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದು. ಆಧುನಿಕ ಸಮಾಜ ಇರುವುದೇ ಹೀಗೆ. ಜನಸಂಖ್ಯೆ ಹೆಚ್ಚಳ ಮತ್ತು ಮನುಷ್ಯನ ಅಗತ್ಯಗಳ ವಿಸ್ತರಣೆಗೆ ಇದು ಅವಶ್ಯ ಮತ್ತು ಅನಿವಾರ್ಯ. ಇದಕ್ಕಾಗಿ ನಾವು ಬೆಲೆ ತೆರಲೇ ಬೇಕು. ಚೀನಾ ಸೇರಿದಂತೆ ಜಗತ್ತಿನ ಕೆಲವು ರಾಷ್ಟ್ರಗಳು ಈ ಸಮಸ್ಯೆ ಎದುರಿಸುತ್ತಿವೆ. ಪರಿಸ್ಥಿತಿಯನ್ನು Adjust ಮಾಡಿಕೊಂಡು ಮುಂದುವರಿಯಲೇ ಬೇಕು. ಬಲಿಷ್ಠರು ಉಳಿಯುತ್ತಾರೆ ದುರ್ಬಲರು ಅಳಿಯುತ್ತಾರೆ ಎಂಬ ಡಾರ್ವಿನ್‌ನ ವಿಕಾಸವಾದಕ್ಕೆ ತಕ್ಕಂತೆ ಇದು ನಡೆಯುತ್ತಿದೆ ಎಂದು ಸಮರ್ಥಿಸಿ ಅನುಭವಿಸುವುದೇ ನಮಗೆ ಉಳಿದಿರುವ ಮಾರ್ಗವೇ ?
ಪರ್ಯಾಯ ಇಲ್ಲವೇ ?
ಖಂಡಿತ ಇದೆ ಮತ್ತು ಇರಲೇ ಬೇಕು.
ಜನಸಂಖ್ಯೆಯ ನಿಯಂತ್ರಣದಿಂದ ಹಿಡಿದು ಪ್ರಕೃತಿಯ ರಕ್ಷಣೆಯವರೆಗೆ ಪದರ ಪದರಗಳಲ್ಲಿ, ವಿವಿಧ ಹಂತಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ ಇದನ್ನು ಅತ್ಯಂತ ತುರ್ತು ಅಗತ್ಯ ಎಂದು ಪರಿಗಣಿಸಿ ಅನುಷ್ಠಾನಕ್ಕೆ ತರಬೇಕಾಗಿದೆ. ಸರ್ಕಾರ ತನ್ನ ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ಪುನರ್ ಪರಿಶೀಲಿಸಬೇಕಾಗಿದೆ.
ಗಾಳಿ ನೀರು ಆಹಾರದ ಶುದ್ಧತೆ ಕಾಪಾಡುವುದು ತನ್ನ ಪ್ರಪ್ರಥಮ ಆದ್ಯತೆಯಾಗಬೇಕಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮವಲಯ, ಧಾರ್ಮಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮುಖ್ಯವಾಗಿ ಪರಿಸರ ರಕ್ಷಣೆಯನ್ನೇ ಒಂದು ಜವಾಬ್ದಾರಿ ಕೆಲಸ ಎಂದು ಪ್ರತಿನಿತ್ಯದ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕಿದೆ. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಿದೆ.
ಯಾವುದೇ ಧರ್ಮದ ಹಬ್ಬಗಳಿರಲಿ, ಸಂಪ್ರದಾಯಗಳಿರಲಿ, ಆಚರಣೆಗಳಿರಲಿ ಪರಿಸರ ಮಾಲಿನ್ಯ ಮಾಡುವುದನ್ನು ಸಂಪೂರ್ಣ ನಿಷೇಧ ಮಾಡಬೇಕಿದೆ ಮತ್ತು ಶಿಕ್ಷಾರ್ಹ ಅಪರಾಧ ಎಂದು ಘೋಷಿಸಬೇಕಿದೆ. ರಸ್ತೆ ನಿರ್ಮಾಣ, ಕಟ್ಟಡಗಳ ನಿರ್ಮಾಣ, ಕೈಗಾರಿಕಾ ಉತ್ಪಾದನೆ, ಕೃಷಿ ಚಟುವಟಿಕೆ ಎಲ್ಲದರಲ್ಲೂ ಪರಿಸರಕ್ಕೆ ಹಾನಿ ಉಂಟು ಮಾಡುವ ಯಾವುದೇ ವಿಧಾನವನ್ನು ಬದಲಾಯಿಸಿಕೊಳ್ಳಬೇಕಿದೆ.
ಇದನ್ನು ಒಂದು ಸಮೂಹ ಸನ್ನಿಯಾಗಿ ವಾತಾವರಣ ರಕ್ಷಣೆಯ ತುರ್ತು ಪರಿಸ್ಥಿತಿ ಘೋಷಿಸಬೇಕಿದೆ. ಎಷ್ಟು ಸಾಧ್ಯವೋ ಅಷ್ಟು ಗಿಡಮರಗಳನ್ನು ಎಲ್ಲಾ ಕಡೆಯು ಬೆಳೆಸಬೇಕಿದೆ. ಇದಕ್ಕಾಗಿಯೇ ಒಂದು ಸ್ವತಂತ್ರ ಮತ್ತು ಬೃಹತ್ ಇಲಾಖೆಯನ್ನು ಸ್ಥಾಪಿಸಬೇಕಿದೆ. ಅದು ಈಗಾಗಲೇ ಅಸ್ತಿತ್ವದಲ್ಲಿರುವ ಇದಕ್ಕೆ ಸಂಬಂಧಿಸಿದ ಇಲಾಖೆಗಳನ್ನು ನಿಯಂತ್ರಣಕ್ಕೆ ಪಡೆದು ಮೇಲ್ವಿಚಾರಣೆ ಮಾಡಬೇಕಿದೆ.
ಹಳ್ಳಿಯಿಂದ ದಿಲ್ಲಿಯವರೆಗೆ,
ಮಗುವಿನಿಂದ ಮುದುಕರವರೆಗೆ,
ಭಿಕ್ಷುಕರಿಂದ ಆಗರ್ಭ ಶ್ರೀಮಂತರವರೆಗೆ,
ಅವಿದ್ಯಾವಂತರಿಂದ ಪಂಡಿತರವರೆಗೆ,
ಎಲ್ಲರಿಗೂ ನೇರ ಜವಾಬ್ದಾರಿ ವಹಿಸಬೇಕಿದೆ. ಏಕೆಂದರೆ,
” ಆರೋಗ್ಯವೇ ಭಾಗ್ಯ ಅನಾರೋಗ್ಯವೇ ನರಕ ”
ಎಷ್ಟೇ ದುಡ್ಡು ಐಶ್ವರ್ಯ ಇದ್ದರೂ ವಾಸಿಸಲು ಯೋಗ್ಯವಾದ ವಾತಾವರಣ ಇಲ್ಲದಿದ್ದರೆ ಪ್ರಯೋಜನವೇನು. ವಿಷಪೂರಿತ ಅಸಹ್ಯ ಪರಿಸರದಲ್ಲಿ ವಾಸಿಸುತ್ತಾ ಆಸ್ಪತ್ರೆಗೆ ಅಲೆಯುವುದು ನರಕಕ್ಕೆ ಸಮಾನ. ಎಲ್ಲರೂ ಈ ನಿಟ್ಟಿನಲ್ಲಿ ಯೋಚಿಸುವಂತಾಗಲಿ ಎಂದು ಆಶಿಸುತ್ತಾ…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ