ಕೊಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮೂರು ವಿಕೆಟ್ ಗಳ ರೋಚಕ ಜಯದೊಂದಿಗೆ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸೀಸ್ ಫೈನಲ್ ತಲುಪಿತು.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾದ ತಂಡದ ನಾಯಕ ತೆಂಬು ಬವುಮಾ ಬ್ಯಾಟಿಂಗ್ ಆಯ್ದುಕೊಂಡರು, ಆದರೆ ಅವರ ನಿರ್ಧಾರ ತಲೆಕೆಳಗಾಯಿತು, ನಾಯಕ ಬವುಮಾ (0) ಹಾಗೂ ಆರಂಭಿಕ ಆಟಗಾರ ಕ್ವಿಂಟಾನ್ ಡಿ ಕಾಕ್ (3) ಅವರನ್ನು ಕ್ರಮವಾಗಿ ಮಿಚೆಲ್ ಸ್ಟ್ರಾಕ್ ಹಾಗೂ ಜೋಷ್ ಹೆಜಲ್ವುಡ್ ವಿಕೆಟ್ ಪಡೆದರು.
ನಂತರ ಬಂದ ವ್ಯಾನ್ ಡರ್ ಡುಸೇನ್ (6) ಹಾಗೂ ಮಾಕ್ರಮ್ (10) ಹೆಚ್ಚು ಹೊತ್ತು ನಿಲ್ಲಲಿಲ್ಲ, ಆದರೆ ಆಸೀಸ್ ವೇಗಿಗಳ ವಿರುದ್ಧ ತಾಳ್ಮೆಯಿಂದ ಆಡಿದ ಮಧ್ಯಮ ಕ್ರಮಾಂಕದ ಆಟಗಾರ ಕ್ಲಾಸನ್ (47) ಹಾಗೂ ಮಿಲ್ಲರ್ (101)ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು.
ಆಸ್ಟ್ರೇಲಿಯಾದ ಪರವಾಗಿ ಮಿಚೆಲ್ ಸ್ಟ್ರಾಕ್ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ತಲಾ ಮೂರು ವಿಕೆಟ್ ಕಬಳಿಸಿದರೆ, ಜೋಷ್ ಹೆಜಲ್ವುಡ್ ಹಾಗೂ ಟ್ರಾವಿಸ್ ಹೆಡ್ ತಲಾ ಎರಡು ವಿಕೆಟ್ ಪಡೆದು 212 ರನ್ ಗೆ ಆಲೌಟ್ ಮಾಡಿದರು.
ಸಾಧಾರಣ ಗುರಿ ಬೆನ್ನತ್ತಿದ್ದ ಆಸೀಸ್ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ (29) ಹಾಗೂ ಟ್ರಾವಿಸ್ ಹೆಡ್ (69) ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು, ಆದರೆ ಕ್ರಮವಾಗಿ ಮಾಕ್ರಮ್ ಹಾಗೂ ಕೇಶವ್ ಮಹಾರಾಜ್ ಅವರಿಗೆ ವಿಕೆಟ್ ಒಪ್ಪಿಸಿದರು.
ಅಲ್ ರೌಂಡರ್ ಮಿಚೆಲ್ ಮಾಷ್೯ (0) ಅವರನ್ನು ರಬಾಡ ಪೆವಿಲಿಯನ್ ಗೆ ಕಳಿಸಿದರು, ಆಸ್ಟ್ರೇಲಿಯಾ ತಂಡದ ಭರವಸೆಯ ಆಲ್ ರೌಂಡರ್ ಗ್ಲೇನ್ ಮ್ಯಾಕ್ಸ್ವಲ್ (1) ಸ್ಪಿನ್ನರ್ ಶಂಸಿಗೆ ವಿಕೆಟ್ ಒಪ್ಪಿಸಿದರು.
ಕೆಳ ಕ್ರಮಾಂಕದ ಆಟಗಾರರಾದ ಜೋಷ್ ಇಂಗ್ಲಿಷ್ (28), ಸ್ಟಾಕ್೯ (16), ಪ್ಯಾಟ್ ಕಮ್ಮಿನ್ಸ್ (14) ರನ್ ಗಳಿಸಿ ತಂಡವನ್ನು ಜಯದ ದಡ ಸೇರಿಸಿದರು, ದಕ್ಷಿಣ ಆಫ್ರಿಕಾದ ಪರವಾಗಿ ಕ್ವಾಟ್ಜಿ ಮತ್ತು ಶಂಶಿ ತಲಾ ಎರಡು ವಿಕೆಟ್ ಪಡೆದರು. ಅದ್ಭುತವಾಗಿ ಬ್ಯಾಟಿಂಗ್ ಮಾಡಿದ ಹೆಡ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.