ದೀಪಾವಳಿ ಹಬ್ಬದ ಸಡಗರದಲ್ಲಿ ಮಿಂದೆದ್ದಿದ್ದ ಬೆಂಗಳೂರಿಗರಿಗೆ ಭಾರತದ ಕ್ರಿಕೆಟ್ ತಂಡ ನೆದರ್ಲೆಂಡ್ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ 160 ರನ್ ಗಳ ಜಯಭೇರಿ ಬಾರಿಸಿ ಸಂಭ್ರಮವನ್ನು ದುಪ್ಪಟ್ಟು ಗೊಳಿಸಿದರು.
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು, ಉತ್ತಮ ಲಯದಲ್ಲಿದ್ದ ನಾಯಕ ರೋಹಿತ್ ಶರ್ಮಾ (61) ಹಾಗೂ ಯುವ ಆಟಗಾರ ಶುಭ್ಮನ್ ಗಿಲ್ (51) ರನ್ ಗಳಿಸಿ ಶತಕದ ಜೊತೆಯಾಟ ನಡೆಸಿದರು.
ನಂತರ ಬಂದ ಅನುಭವಿ ಆಟಗಾರ ವಿರಾಟ್ ಕೋಹ್ಲಿ (51) ರನ್ ಗಳಿಸಿದರೆ, ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ 10 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ (128*) ಹಾಗೂ ಕನ್ನಡಿಗ, ವಿಕೆಟ್ ಕೀಪರ್ ಕೆ.ಎಲ್ . ರಾಹುಲ್ 11 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ (102) ರನ್ ಗಳಿಸಿ ವಿಶ್ವಕಪ್ ನಲ್ಲಿ ಅತಿವೇಗದ ಶತಕ ಸಿಡಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು ಹಾಗೂ ತಂಡದ ಮೊತ್ತವನ್ನು 410 ರ ಗಡಿ ದಾಟಿಸಿದರು .
ನೆದರ್ಲೆಂಡ್ ಪರವಾಗಿ ಲ್ಯಾಡ್ ಎರಡು ವಿಕೆಟ್, ಮಿಕೆರೆನ್ ಹಾಗೂ ಮಿರ್ವೆ ತಲಾ ಒಂದು ವಿಕೆಟ್ ಪಡೆದರೆ ವ್ಯಾನ್ ಬೇಕ್ 107 ರನ್ ನೀಡಿ ಒಂದೂ ವಿಕೆಟ್ ಪಡೆಯದೆ ದುಬಾರಿಯಾದರು.
ಬೃಹತ್ ಮೊತ್ತ ಬೆನ್ನತ್ತಿದ್ದ ಡಚ್ಚರಿಗೆ ವೇಗಿ ಮೊಹಮ್ಮದ್ ಸಿರಾಜ್ ಮೊದಲ ಆಘಾತ ನೀಡಿದರು, ಆರಂಭಿಕ ಆಟಗಾರ ಬೆರ್ಸಿ(4) ರನ್ ಗಳಿಸಿ ಔಟಾದರು, ಅನುಭವಿ ಆಟಗಾರ ಮ್ಯಾಕ್ಸ್ ಓಡೌಡ್ (30), ಆಕ್ರಮನ್ (35), ಸೈಬ್ರಾಡ್ (45) ಹಾಗೂ ತೇಜ್ ನಿಡುಮಾನುರು (54) ರನ್ ಗಳಿಸಿದರೂ ಸಹ ಗುರಿ ತಲುಪಲಾಗದೆ 250 ರನ್ ಗಳಿಸಿ ಆಲೌಟ್ ಆದರು.
ಈ ಮೂಲಕ ಭಾರತ 160 ರನ್ ಜಯ ಸಾಧಿಸಿತು, ಭಾರತದ ಪರವಾಗಿ ವೇಗಿ ಜಸ್ಪ್ರಿತ್ ಬುಮ್ರಾ , ಮೊಹಮ್ಮದ್ ಸಿರಾಜ್, ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ತಲಾ ಎರಡು ವಿಕೆಟ್ ಕಬಳಿಸಿದರೆ ಬ್ಯಾಟ್ಸ್ಮನಗಳಾದ ನಾಯಕ ರೋಹಿತ್ ಶರ್ಮಾ ಹಾಗೂ ಹಿರಿಯ ಆಟಗಾರ ವಿರಾಟ್ ಕೋಹ್ಲಿ ತಲಾ ಒಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಭಾರತ 9 ಬೌಲರ್ ಗಳು ಬೌಲಿಂಗ್ ಮಾಡಿದ್ದು ವಿಶೇಷವಾಗಿತ್ತು.