ಭಾರತದ ಬಿಗಿ ಬೌಲಿಂಗ್ ಪ್ರದರ್ಶನದ ಮುಂದೆ ಮಂಡಿಯೂರಿದ ಲಂಕಾ ತಂಡ. ವೇಗಿಗಳಾದ ಬುಮ್ರಾ, ಸಿರಾಜ್ ಹಾಗೂ ಮೊಹಮ್ಮದ್ ಶಮಿ ಅವರ ಬೆಂಕಿ ಬೌಲಿಂಗ್ ದಾಳಿಗೆ ಶ್ರೀಲಂಕಾ ದಹನವಾಯಿತು.
ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರೋಹಿತ್ ಪಡೆ ಸತತ ಏಳನೇ ಗೆಲುವು ದಾಖಲಿಸುವ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಹಾಗೂ ಸೆಮಿಫೈನಲ್ ಪ್ರವೇಶ ಖಚಿತಪಡಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತು, ನಾಯಕ ರೋಹಿತ್ ಶರ್ಮಾ (4) ರನ್ ಗಳಿಸಿ ಔಟಾದರು, ನಂತರ ಒಂದಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್(92) ಹಾಗೂ ಅನುಭವಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (88) ರನ್ ಗಳಿಸುವ ಮೂಲಕ 190 ರನ್ ಜೊತೆಯಾಟಕ್ಕೆ ಲಂಕಾ ಬೌಲಿಂಗ್ ಪಡೆ ಮಂಕಾಗಿತ್ತು.
ನಂತರ ಬಂದ ಮದ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್ (82) ಹಾಗೂ ಕನ್ನಡಿಗ ಕೆ.ಎಲ್ . ರಾಹುಲ್ (21) ರನ್ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ (35) ರನ್ ಗಳಿಸಿ ತಂಡದ ಮೊತ್ತವನ್ನು 350 ರ ಗಡಿ ದಾಟಿಸಿದರು.
ಶ್ರೀಲಂಕಾದ ಪರವಾಗಿ ಮಧುಶಂಕ 5 ವಿಕೆಟ್ ಪಡೆದು ಮಿಂಚಿದರೆ , ಮತ್ತೊಬ್ಬ ವೇಗಿ ಚಮೀರಾ ಒಂದು ವಿಕೆಟ್ ಪಡೆದರು, ಬೃಹತ್ ಮೊತ್ತವನ್ನು ಬೆನ್ನಟ್ಟಿದ ಲಂಕಾ ತಂಡ ಆರಂಭಿಕ ಆಘಾತ ಎದುರಿಸಿತು.
ಆರಂಭಿಕ ಆಟಗಾರರಾದ ಪಥುಮ್ ನಿಶಾಂಕ (0) ಹಾಗೂ ಕರುಣರತ್ನೆ (0) ಕ್ರಮವಾಗಿ ಬುಮ್ರಾ ಹಾಗೂ ಸಿರಾಜ್ ಎಲ್ ಸಿಡಬ್ಲ್ಯೂ ಬಲೆಗೆ ಕೆಡವಿದರು, ನಾಯಕ ಕುಶಾಲ್ ಮೆಂಡಿಸ್ (1), ಮದ್ಯಮ ಕ್ರಮಾಂಕದ ಆಟಗಾರರಾದ ಸಮರವಿಕ್ರಮ (0) ಹಾಗೂ ಅಸಲಂಕ (1) ಮೊಹಮ್ಮದ್ ಶಮಿ ಹಾಗೂ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.
ಒಂದು ಹಂತದಲ್ಲಿ ಮೂರು ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದ್ದ ಲಂಕಾ 29 ರನ್ ಗಳಿಸಿ 8 ವಿಕೆಟ್ ಕಳೆದುಕೊಂಡಿತು.
ಭಾರತದ ಪರವಾಗಿ ವೇಗಿಗಳಾದ ಮೊಹಮ್ಮದ್ ಶಮಿ (5) ವಿಕೆಟ್, ಮೊಹಮ್ಮದ್ ಸಿರಾಜ್ (3) ಹಾಗೂ ಜಸ್ಪ್ರಿತ್ ಬುಮ್ರಾ ಹಾಗೂ ರವೀಂದ್ರ ಜಡೇಜಾ ತಲಾ ಒಂದು ವಿಕೆಟ್ ಪಡೆದು ಮಿಂಚಿದರು.
18 ರನ್ ನೀಡಿ 5 ವಿಕೆಟ್ ಗೊಂಚಲು ಪಡೆದ ಮೊಹಮ್ಮದ್ ಶಮಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೌರವಕ್ಕೆ ಪಾತ್ರರಾದರು.