ವಿಶ್ವಕಪ್ ಚರಣದ ತನ್ನ ಕೊನೆಯ ಪಂದ್ಯವಾಡಲು ಭಾರತ ತಂಡ ಉದ್ಯಾನ ನಗರಿ ಬೆಂಗಳೂರಿಗೆ ಸೋಮವಾರ ಸಂಜೆ ಬಂದಿಳಿದಿದ್ದು ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ.
ಕಳೆದ ಭಾನುವಾರ ಕೊಲ್ಕತ್ತಾದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾದ ವಿರುದ್ಧ 234 ರನ್ ಗಳ ಅಂತರದಲ್ಲಿ ಗೆದ್ದು ಅಜೇಯವಾಗಿ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಪಡೆಗೆ ನವೆಂಬರ್ 12 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆದರ್ಲೆಂಡ್ ವಿರುದ್ಧ ತನ್ನ ಕೊನೆಯ ಪಂದ್ಯವಾಡಲಿದೆ.
ತಾನಾಡಿದ 7 ಪಂದ್ಯಗಳಲ್ಲಿ 2 ರಲ್ಲಿ ಗೆಲುವು ಸಾಧಿಸಿ 8 ನೇ ಸ್ಥಾನದಲ್ಲಿರುವ ಡಚ್ ಪಡೆ ಬಲಿಷ್ಠ ಭಾರತ ವಿರುದ್ಧ ಯಾವ ರೀತಿ ಉತ್ತರ ನೀಡಲಿದೆ ಎಂಬುದು ಕಾದು ನೋಡಬೇಕಿದೆ, ಈಗಾಗಲೇ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿದ್ದು ತಂಡವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.
ಭಾರತ ತಂಡ ತಾನಾಡಿದ ಎಲ್ಲಾ ಪಂದ್ಯಗಳಲ್ಲೂ ಅಧ್ಬುತ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಹಿತ ಆಲ್ ರೌಂಡರ್ ಆಟವಾಡಿರುವ ತಂಡ ಎಲ್ಲಾ ತಂಡಗಳ ಎದುರು ಅಧಿಕಾರಯುತ ಗೆಲುವು ಸಾಧಿಸಿದೆ.
ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ಶುಭ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದು ಮಧ್ಯಮ ಕ್ರಮಾಂಕದ ಆಟಗಾರರಾದ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕನ್ನಡಿಗ ವಿಕೆಟ್ ಕೀಪರ್ ಕೆ.ಎಲ್ . ರಾಹುಲ್ ತಂಡದ ಶಕ್ತಿಯಾಗಿದ್ದಾರೆ.
ಬೌಲಿಂಗ್ ವಿಭಾಗ ಭರ್ಜರಿ ಪ್ರದರ್ಶನ ನೀಡುತ್ತಿದ್ದು ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಸಿರಾಜ್ ಉತ್ತಮ ಲಯದಲ್ಲಿದ್ದಾರೆ ಹಾಗೆಯೇ ಸ್ಪಿನ್ನರ್ ಗಳಾದ ರವೀಂದ್ರ ಜಡೇಜಾ ಹಾಗೂ ಕುಲದೀಪ್ ಯಾದವ್ ತಮ್ಮ ಕೈ ಚಳಕದ ಮೂಲಕ ಎದುರಾಳಿ ತಂಡಗಳನ್ನು ಕಾಡುತ್ತಿರುವುದು ಸ್ಮರಿಸಬಹುದಾಗಿದೆ.