ಈ ಸುಂದರವಾದ ಹಾವಿನ ಹೆಸರು ವೇರಿಗೆಟೆಡ್ ಕುಕ್ರಿ (Variegated kukri). ಹೆಸರೆ ಸೂಚಿಸುವಂತೆ ವಿವಿಧ ವರ್ಣದಿಂದ ಕೂಡಿದ ಕುಕ್ರಿ ಹಾವು. ವಿಷರಹಿತವಾದ ಈ ಹಾವು ಹಗಲು ರಾತ್ರಿ ಎರಡೂ ಸಮಯ ಚಟುವಟಿಕೆಯಿಂದಿರುತ್ತದೆ. ಹೆಚ್ಚೆಂದರೆ 60 ಸೆ.ಮೀ ಉದ್ದ ಬೆಳೆಯುತ್ತದೆ. ಮೈ ಮೇಲೆ ಪಟ್ಟೆಗಳನ್ನು ಹೊಂದಿರುವ ಈ ಹಾವಿನ ತಲೆಯ ಮೇಲಿನ ವಿನ್ಯಾಸ ಬಹಳ ಆಕರ್ಷಕ.
ಹಿಮಾಚಲ ಪ್ರದೇಶ, ಕಾಶ್ಮೀರ ಮತ್ತು ಈಶಾನ್ಯ ಪ್ರದೇಶಗಳನ್ನು ಹೊರತುಪಡಿಸಿ, ದೇಶದ ಇತರೆ ಭಾಗಗಳಲ್ಲಿ ಈ ಹಾವನ್ನು ನೋಡಬಹುದು. ನೆಲದ ಮೇಲಷ್ಟೇ ಕಾಣಸಿಗುವ ಈ ಹಾವು, ಜನವಸತಿ ಪ್ರದೇಶಗಳ ಸುತ್ತ ಕಂಡುಬರುತ್ತದೆ.
ಹಲ್ಲಿಗಳು ಇದರ ಮುಖ್ಯ ಆಹಾರವಾಗಿದ್ದು, ಇತರೆ ಸರಿಸ್ರುಪಗಳ ಮೊಟ್ಟೆಗಳನ್ನು ಸೇವಿಸುತ್ತದೆ. ಏಪ್ರಿಲ್ ತಿಂಗಳು ಸಂತಾನವೃದ್ಧಿ ಋತುವಾಗಿದ್ದು, 7-9 ಮೊಟ್ಟೆಗಳನ್ನು ಇಡುತ್ತದೆ.
ಲೋಹಿತ್ ವೈ .ಟಿ, (ಪರಿಸರಾಸಕ್ತ)