ಗ್ರಾಮ ಆಡಳಿತಾಧಿಕಾರಿಗಳ ಮೂಲಭೂತ ಸೌಕರ್ಯ ಒದಗಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ದಿಷ್ಠಾವಧಿ ಮುಷ್ಕರ ನಡೆಸಲಾಯಿತು.
ಈ ವೇಳೆ ಬೆ.ಗ್ರಾ. ಜಿಲ್ಲಾ ಗ್ರಾಮ ಆಡಳಿತಾಕಾರಿಗಳ ಸಂಘದ ಅಧ್ಯಕ್ಷ ರಘುಪತಿ ಮಾತನಾಡಿ, 18ಕ್ಕೂ ಹೆಚ್ಚು ಮೊಬೈಲ್ ಆಪ್ ಮತ್ತು ವೆಬ್ ಅಪ್ಲಿಕೇಷನ್‌ಗಳ ಮೂಲಕ ಕೆಲಸ ಮಾಡಬೇಕಿದೆ. ಆದರೆ, ಇಲಾಖೆ ನಮಗೆ ಮೊಬೈಲ್, ಲ್ಯಾಪ್‌ಟಾಪ್ ಸೇರಿ ಯಾವುದೇ ಎಲೆಕ್ರ್ಟಾನಿಕ್ ಉಪಕರಣ ಕೊಟ್ಟಿಲ್ಲ. ಜತೆಗೆ ವಿಎಗಳಿಗೆ ನಿರ್ದಿಷ್ಟ ಕಚೇರಿಯನ್ನೂ ಗುರುತಿಸಿಲ್ಲ. ಪ್ರತಿದಿನ ಟಾರ್ಗೆಟ್, ಸಭೆ, ಎಂಬಿತ್ಯಾದಿ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು.
ಎಲ್ಲ ಮೊಬೈಲ್ ಆಪ್‌ಗಳಲ್ಲಿ ಏಕಕಾಲದಲ್ಲಿ ಪ್ರಗತಿ ಸಾಸಲು ತೀವ್ರ ಒತ್ತಡ ಹೇರಲಾಗುತ್ತಿದೆ. ಇದರಿಂದ ನಮಗೆ ಮಾನಸಿಕ ಹಾಗೂ ದೈಹಿಕವಾಗಿ ವ್ಯತಿರಿಕ್ತ ಪರಿಣಾಮಗಳು ಹೆಚ್ಚಾಗಿವೆ. ಆಧಾರ್ ಸೀಡಿಂಗ್, ಬಗರ್ ಹುಕುಂ, ಹಕ್ಕುಪತ್ರ, ಸಂಯೋಜನೆ, ಲ್ಯಾಂಡ್ ಬೀಟ್, ಪೌತಿ ಆಂದೋಲನ, ಸಿ-ವಿಜಿಲ್ ಆಪ್, ಬೆಳೆ ಸಮೀಕ್ಷೆ, ಕೃಷಿ ಗಣತಿ, ನೀರಾವರಿ ಗಣತಿ ಸೇರಿದಂತೆ ಸುಮಾರು 21 ಕಂದಾಯ ಕೆಲಸಗಳನ್ನು ಮೊಬೈಲ್ ಅಥವಾ ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಕುರಿತು ಇದಕ್ಕೆ ಸಂಬಂಧಿಸಿದ ಉಪಕರಣಗಳ ಸೌಲಭ್ಯ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಇದರಿಂದ ಬೇಸತ್ತು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ನಮ್ಮ ಹೋರಾಟಕ್ಕೆ ಸರ್ಕಾರ ಸೂಕ್ತವಾಗಿ ಸ್ಪಂದನೆ ನೀಡದಿದ್ದಲ್ಲಿ ಇನ್ನಷ್ಟು ತೀವ್ರವಾಗಿ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
ನಂತರ ತಾಲೂಕು ಗ್ರಾಮ ಆಡಳಿತಾಕಾರಿಗಳ ಸಂಘದ ಅಧ್ಯಕ್ಷ ಶ್ರೀಮಂತ ಎಸ್ ಆಸಂಗಿಹಾಳ್ ಮಾತನಾಡಿ, ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಉತ್ತಮ ಗುಣಮಟ್ಟದ ಟೇಬಲ್, ಕುರ್ಚಿ, ಅಲ್ಮೇರಾ, ಪ್ರಿಂಟರ್, ಸ್ಕ್ಯಾನರ್ ಸೇರಿದಂತೆ ಇತರೆ ಮೂಲಭೂತ ಸೌಕರ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಮಾಣಿಕ್ ಮಕ್ಕಳ್ ಗಿರಿ ಮಾತನಾಡಿ, ಮಾಜಿ ಸೈನಿಕರಿಗೆ ಅನುಕೂಲಕ್ಕೆ ತಕ್ಕಂತೆ 16Aನ್ನು ವಾಪಸ್ ತರಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕರು, ನಿರೀಕ್ಷಕರ ರಾಜಸ್ವ ಹುದ್ದೆಗಳಿಗೆ ಪದೊನ್ನತಿ ನೀಡಬೇಕು. ಅಂತರ್ ಜಿಲ್ಲಾ ಪತಿ, ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಬೇಕು. ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ ಸಭೆಯನ್ನು ನಿಷೇಧಿಸಬೇಕು. ಕಂದಾಯ ಇಲಾಖೆಯ ಮೂರು ವರ್ಷಗಳ ಸೇವೆ ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿ ರಚಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಶೈಲಜಾ, ಕಿರಣ್ ಕುಮಾರ್, ಕಂದಾಯ ನೌಕರರ ಸಂಘದ ಆಧ್ಯಕ್ಷ ಬಿ.ಸಿ ಶಿವಮೂರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್ ಲಮಾಣಿ ಉಪ ತಹಶೀಲ್ದಾರ್ ವಿನೋದ್ ಕಂದಾಯ ನಿರೀಕ್ಷಕರು ಎಸ್.ಐ ಅನಂತಕುಮಾರ್ , ಶಿವಪ್ರಸಾದ್ ಸರಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನರಸಿಂಹಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.