ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಚಿನ್ನಾಭರಣ ಮತ್ತು ನಗದು ಕಳವು ಆರೋಪದಡಿ ಮನೆಕೆಲಸದಾಕೆಯನ್ನು ಬಂಧಿಸಿದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮಾಹಿತಿ ನೀಡಿದರು. ಆರೋಪಿತೆಯಿಂದ ಒಟ್ಟು 48.62 ಗ್ರಾಂ ಚಿನ್ನಾಭರಣ ಮತ್ತು ₹3.86 ಲಕ್ಷ ನಗದು ಸೇರಿದಂತೆ, ಒಟ್ಟು ₹8.47 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಗರಿಕರು, ಮನೆಕೆಲಸಗಾರರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಹಿನ್ನೆಲೆಯನ್ನು ತಪ್ಪದೇ ಪರಿಶೀಲಿಸಬೇಕು. ಹಾಗೂ ಬೆಲೆ ಬಾಳುವ ವಸ್ತುಗಳನ್ನು ಮನೆಯಲ್ಲಿ ಸುರಕ್ಷಿತವಾಗಿ ಇಡುವ ಬಗ್ಗೆ ಎಚ್ಚರಿಕೆ ವಹಿಸುವಂತೆ ನಗರ ಪೊಲೀಸ್ ಕೋರಿದೆ ಎಂದರು.
ಕೊಡಿಗೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯಿಂದ 148 ಗ್ರಾಂ ಚಿನ್ನಾಭರಣ ಹಾಗೂ 200 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಮೌಲ್ಯ ₹9.20 ಲಕ್ಷ. ನಗರ ಪೊಲೀಸರು, ನಾಗರಿಕರಿಗೆ ತಮ್ಮ ಮನೆಗಳಿಗೆ ಭದ್ರವಾದ ಲಾಕಿಂಗ್ ವ್ಯವಸ್ಥೆ ಅಳವಡಿಸಲು ಹಾಗೂ ಕೀಲಿ-ಅಡಗಿಸುವ ಸ್ಥಳಗಳ ಬಳಕೆ ಮಾಡದಂತೆ ವಿನಂತಿಸಿದ್ದಾರೆ.
ಇದೇ ರೀತಿ, ಕೊಡಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ವಿದೇಶಿ ಪ್ರಜೆಯೊಬ್ಬನನ್ನು ಅಡ್ಡಗಟ್ಟಿ, ಮಾರಕಾಸ್ತ್ರ ತೋರಿಸಿ ಆತನ ಬಳಿ ಇದ್ದ ನಗದು ಹಣ, ಪಾಸ್‌ಪೋರ್ಟ್, ಇತರೆ ದಾಖಲೆಗಳಿದ್ದ ಬ್ಯಾಗ್ ಮತ್ತು ಸ್ಕೂಟರ್ ಗಳನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರಿಂದ 2 ದ್ವಿಚಕ್ರ ವಾಹನಗಳು, ₹86,000 ನಗದು, ಪಾಸ್‌ಪೋರ್ಟ್ ಮತ್ತು ಇತರೆ ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳ ಒಟ್ಟು ಮೌಲ್ಯ ₹1.60 ಲಕ್ಷವಾಗಿದೆ. ಪೊಲೀಸರು ನಗರದ ನಾಗರಿಕರಿಗೆ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಮೊತ್ತದ ನಗದು ಅಥವಾ ಮಹತ್ವದ ದಾಖಲೆಗಳನ್ನು ಒಯ್ಯುವಾಗ ಹೆಚ್ಚಿನ ಎಚ್ಚರಿಕೆ ವಹಿಸಲು ಸಲಹೆ ನೀಡಿದ್ದಾರೆ.
ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಮಾಲೀಕರ ಮನೆಯಿಂದ ನಗದು ಕಳವು ಮಾಡಿದ್ದ ಕಾರು ಚಾಲಕನನ್ನು ಬಂಧಿಸಿದ್ದು, ಆರೋಪಿಯಿಂದ ₹1,48,36,500 ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಾಹನ ಚಾಲಕರನ್ನು ನೇಮಕ ಮಾಡುವ ಮೊದಲು, ಅವರ ಹಿನ್ನೆಲೆಯ ಪರಿಶೀಲನೆ, ನಗದನ್ನು ಸುರಕ್ಷಿತವಾಗಿ ಇಡುವಂತ ಕ್ರಮಗಳ ಅಳವಡಿಕೆ ಅತ್ಯಗತ್ಯ ಎಂದು ಎಚ್ಚರಿಸಿದ್ದಾರೆ.
ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾಲೀಕರ ಮನೆಯಲ್ಲಿ ಚಿನ್ನಾಭರಣಗಳ ಕಳ್ಳತನದ ಆರೋಪದ ಮೇಲೆ, ಮನೆ ಕೆಲಸದಾಕೆಯನ್ನು ಬಂಧಿಸಿದ್ದು, ಆಕೆಯಿಂದ ₹10 ಲಕ್ಷ ಮೌಲ್ಯದ 113 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸರು, ಎಲ್ಲ ನಾಗರಿಕರಿಗೆ ಮನೆಗೆಲಸಗಾರರನ್ನು ನೇಮಿಸಿಕೊಳ್ಳುವ ಮುನ್ನ ಅವರ ಹಿನ್ನೆಲೆಯನ್ನು ಪರಿಶೀಲಿಸಲು ಮತ್ತು ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನ ತಕ್ಷಣವೇ ಹತ್ತಿರದ ಪೊಲೀಸ್ ಠಾಣೆಗೆ ವರದಿ ಮಾಡಲು ನಾಗರೀಕರಲ್ಲಿ ಮನವಿ ಮಾಡಿದ್ದಾರೆ.
ಹೆಚ್.ಎಸ್.ಆರ್. ಲೇಔಟ್ ಪೊಲೀಸ್ ಠಾಣೆಯ ಸಿಬ್ಬಂದಿ, ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕಳವು ಪ್ರಕರಣದಲ್ಲಿ ಬಂಧಿಸಿದ್ದಾರೆ. ಬಂಧಿತನಿಂದ ₹3 ಲಕ್ಷ ಮೌಲ್ಯದ, 03 ಕೆಜಿ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನಗರ ಪೊಲೀಸರು, ನಗರದ ವ್ಯಾಪಾರಿ ಮಾಲೀಕರಿಗೆ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡುತ್ತಾರೆ. ಕೆಲಸಗಾರರ ವೈಯಕ್ತಿಕ ಹಿನ್ನೆಲೆಯ ಪರಿಶೀಲನೆ, ಕಣ್ಗಾವಲು ವ್ಯವಸ್ಥೆಗಳ ಅಳವಡಿಕೆ, ಮತ್ತು ಬೆಲೆಬಾಳುವ ವಸ್ತುಗಳಿರುವ ಪ್ರದೇಶಗಳಿಗೆ ನಿರ್ಬಂಧಿಸುವಿಕೆಯಂತಹ ಕ್ರಮಗಳು ಅತ್ಯವಶ್ಯ ಎಂದು ಸೂಚಿಸಿದ್ದಾರೆ.