ಇತ್ತೀಚಿನ ಮನೆ ಕಳ್ಳತನಗಳಿಗೆ ಸಂಬಂಧಿಸಿದ 4 ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ಮಾಹಿತಿ ನೀಡಿದರು.
ಜಯನಗರ ಪೊಲೀಸ್ ಠಾಣೆ ಅಧಿಕಾರಿಗಳು ನೇಪಾಳದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದು, ಪರಾರಿಯಾಗಿರುವ ಇಬ್ಬರು ಮನೆ ಕೆಲಸದವರು ದೂರುದಾರರ ಮನೆಯಲ್ಲಿ ಕಳ್ಳತನ ಮಾಡಲು ಸಹಾಯ ಮಾಡಿದ್ದರು. ವಶಪಡಿಸಿಕೊಂಡ ವಸ್ತುಗಳಲ್ಲಿ 1.6 ಕೆಜಿ ಚಿನ್ನ, 450 ಗ್ರಾಂ ಬೆಳ್ಳಿ ವಸ್ತುಗಳು ಮತ್ತು ದ್ವಿಚಕ್ರ ವಾಹನ ಸೇರಿದ್ದು, ಒಟ್ಟಾರೆ ₹1.12 ಕೋಟಿ ಮೌಲ್ಯದ್ದಾಗಿದೆ ಎಂದರು.
ಅದೇ ರೀತಿ, ಸುಬ್ರಮಣ್ಯಪುರ ಪೊಲೀಸ್ ಠಾಣೆ ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು, ನಗರದಾದ್ಯಂತ ನೋಂದಾಯಿಸಲಾದ ನಾಲ್ಕು ಅಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ₹25 ಲಕ್ಷ ಮೌಲ್ಯದ 208 ಗ್ರಾಂ ಚಿನ್ನ, 1.1 ಕೆಜಿ ಬೆಳ್ಳಿ ಮತ್ತು ₹2.5 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕೋಣನಕುಂಟೆ ಪೊಲೀಸ್ ಠಾಣೆಯವರು ದೂರುದಾರರ ಮನೆಯಲ್ಲಿ ಆರೈಕೆದಾರಳಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಿದ್ದಾರೆ. ಈ ಬಂಧನದಿಂದ ₹12,00,000 ಮೌಲ್ಯದ 108 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದ ಕ್ರೈಂ ಅಧಿಕಾರಿಗಳು ಆಭರಣ ಅಂಗಡಿ ಕಳ್ಳತನದಲ್ಲಿ ತೊಡಗಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಈ ಬಂಧನದೊಂದಿಗೆ ₹9,00,000 ಮೌಲ್ಯದ 126 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಲ್ಲೇಶ್ವರಂ ಪೊಲೀಸ್ ಠಾಣೆ ಅಧಿಕಾರಿಗಳು ಸರಗಳ್ಳತನ ಮತ್ತು ಮನೆ ಕಳ್ಳತನದ ಪ್ರಕರಣದಲ್ಲಿ ಆರೋಪಿ ಹಾಗೂ ಅವನ ಸಹಚರನನ್ನು ಬಂಧಿಸಿದ್ದು, ₹4,50,000 ಮೌಲ್ಯದ 57.5 ಗ್ರಾಂ ಚಿನ್ನಾಭರಣಗಳು ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬಾಗಲಗುಂಟೆ ಪೊಲೀಸ್ ಠಾಣೆ ಅಧಿಕಾರಿಗಳು ದರೋಡೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 2 ದ್ವಿಚಕ್ರ ವಾಹನಗಳು, 11 ಗ್ರಾಂ ಚಿನ್ನಾಭರಣಗಳು ಮತ್ತು 3 ಐಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ಆಸ್ತಿಯ ಮೌಲ್ಯ ₹3,00,000 ಆಗಿದೆ ಎಂದರು.
ಮಾಧ್ಯಮಗೋಷ್ಠಿಯಲ್ಲಿ ಪೊಲೀಸ್ ಆಯುಕ್ತರು ಅಕ್ಟೋಬರ್ ತಿಂಗಳಲ್ಲಿ ನಗರ ಪೊಲೀಸರ ಕಾರ್ಯಚಟುವಟಿಕೆಯ ಸಂಪೂರ್ಣ ಮಾಹಿತಿ ನೀಡಿದರು. ಅದರೊಂದಿಗೆ ಕಾನೂನು ಬಾಹಿರ ಡ್ರಗ್ಸ್ ಮಾರಾಟ, ತಲೆಮರೆಸಿಕೊಂಡಿರುವ ತಪ್ಪಿತಸ್ಥರು ಹಾಗೂ ರೌಡಿಗಳ ಕುರಿತಾಗಿ ಮಾಹಿತಿ ನೀಡಿದರು…