ವಿವಿಧ ಪ್ರಕರಣಗಳನ್ನು ಬೇಧಿಸಿದ ಬೆಂಗಳೂರು ನಗರ ಪೊಲೀಸರು:‌ ಬಂಧಿತರಿಂದ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ವಾಹನ, ಮೊಬೈಲ್ ಫೋನ್ ವಶ

ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಅಧಿಕಾರಿಗಳು ಆರೋಪಿಯೊಬ್ಬನನ್ನು ಬಂಧಿಸಿ, ಬಂಧಿತನಿಂದ ₹8 ಲಕ್ಷ ಮೌಲ್ಯದ 101 ಗ್ರಾಂ ಚಿನ್ನಾಭರಣ, 2 ಲ್ಯಾಪ್ ಟಾಪ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು ತಿಳಿಸಿದರು.

ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಣ್ಯ ಪೊಲೀಸರು ನಾಲ್ವರು ಕುಖ್ಯಾತ ಬಾಲಕರನ್ನು ಬಂಧಿಸಿದ್ದಾರೆ. ಬಂಧಿತರಿಂದ 30 ಗ್ರಾಂ ಚಿನ್ನದ ಸರ, ಆಟೋ ರಿಕ್ಷಾ, ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ₹4 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಮನೆ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರತಹಳ್ಳಿ ಪೊಲೀಸರು ಮನೆ ಕೆಲಸದವಳು ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮನೆ ಕೆಲಸದಾಕೆ ಮನೆಯಲ್ಲಿ ಒಂದು ವಾಚ್ ಹಾಗೂ ಚಿನ್ನದ ಸರ ಪತ್ತೆಯಾಗಿದ್ದು, ಕಳ್ಳತನವಾದ ₹30 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಈಜಿಪುರದ ವಿವಿಧ ಚಿನ್ನಾಭರಣ ಮಳಿಗೆಗಳಿಂದ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ರಾಮಮೂರ್ತಿ ನಗರ ಪೊಲೀಸರು ಸ್ಥಳೀಯ ಶೋರೂಮ್ ನಲ್ಲಿ 4 ಲ್ಯಾಪ್ ಟಾಪ್ ಮತ್ತು 11 ಹೆಚ್ ಪಿ ಪೆನ್ ಡ್ರೈವ್ ಗಳನ್ನು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದ ಆರೋಪದ ಮೇಲೆ ಸೆಲ್ಸ್ ಎಕ್ಸಿಕ್ಯೂಟಿವ್ ನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಯು ತನ್ನ ಮನೆಯಲ್ಲಿ ಉಳಿದ 3 ಲ್ಯಾಪ್ ಟಾಪ್ ಮತ್ತು 5 ಹೆಚ್ ಪಿ ಪೆನ್ ಡ್ರೈವ್ ಗಳು ಹೊಂದಿರುವುದಾಗಿ ತಿಳಿಸಿದ ಮೇರೆಗೆ ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ಸರಣಿ ಮೊಬೈಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಟ್ ಫೀಲ್ಡ್ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ₹4.50 ಲಕ್ಷ ಮೌಲ್ಯದ 32 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಮೊಬೈಲ್ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯನ್ನು ಮಹದೇವಪುರ ಪೊಲೀಸರು ವಶಕ್ಕೆ ಪಡೆದಿದ್ದು, ಈತನಿಂದ ₹1.50 ಲಕ್ಷ ಮೌಲ್ಯದ 12 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!