Categories: ರಾಜ್ಯ

ವಿರೋಧ ಪಕ್ಷ ಬಿಜೆಪಿಯಿಂದ ವಿಧಾನಸಭೆಯಲ್ಲಿ ಧರಣಿ ವಿಚಾರ- ಬಿಜೆಪಿ ಶಾಸಕರು ಅನಗತ್ಯವಾದ ಧರಣಿಯನ್ನು ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಬೇಕೆಂದು ಸಿಎಂ ಸಿದ್ದರಾಮಯ್ಯ ಮನವಿ

ತಮ್ಮ ಪಕ್ಷದೊಳಗಿನ ಒಳಜಗಳ ಮತ್ತು ಬರಗಾಲ ಪರಿಹಾರಕ್ಕೆ ಹಣ ನೀಡದ ಕೇಂದ್ರ ಸರ್ಕಾರದ ವೈಫಲ್ಯವನ್ನು ಮುಚ್ಚಿಹಾಕಿ ಜನರ ಗಮನ ಬೇರೆ ಕಡೆ ಸೆಳೆಯುವ  ದುರುದ್ದೇಶದಿಂದ ರಾಜ್ಯದ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಧರಣಿ ನಡೆಸಿ ಕಲಾಪಕ್ಕೆ ತಡೆಯೊಡ್ಡುತ್ತಿದ್ದಾರೆ. ಇವರಿಗೆ ರಾಜ್ಯದ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ, ರಾಜಕೀಯ ಪಕ್ಷಗಳು ಮತ್ತು ರಾಜಕೀಯ ನಾಯಕರಿಗೆ ಜನತೆ ಛೀಮಾರಿ ಹಾಕುತ್ತಿರುವುದಕ್ಕೆ ಚುನಾಯಿತ ಪ್ರತಿನಿಧಿಗಳ ಇಂತಹ ಬೇಜವಾಬ್ದಾರಿ ನಡವಳಿಕೆಗಳೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಜನರ ತೆರಿಗೆ ಹಣದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಿ ವರ್ಷಕ್ಕೊಂದು ಬಾರಿ ವಿಧಾನಮಂಡಲದ ಅಧಿವೇಶನ ನಡೆಸುತ್ತಿರುವುದರ ಮುಖ್ಯ ಉದ್ದೇಶವೇ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವುದಾಗಿದೆ. ಇಂತಹ ಚರ್ಚೆಗೆ ಅವಕಾಶವನ್ನು ಕೊಡದೆ ಇರುವ ರಾಜ್ಯದ ಬಿಜೆಪಿ ಶಾಸಕರು ತಾವು ಉತ್ತರ ಕರ್ನಾಟಕದ ವಿರೋಧಿಗಳು ಎನ್ನುವುದನ್ನು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ.

ರಾಜ್ಯದಲ್ಲಿ ತೀವ್ರ ಬರಗಾಲ ಇದೆ. ರಾಜ್ಯ ಸರ್ಕಾರ ಶಕ್ತಿ ಮೀರಿ ಪರಿಹಾರ ಕಾರ್ಯವನ್ನು ನಡೆಸುತ್ತಿದೆ. ರಾಜ್ಯದ 223 ತಾಲ್ಲೂಕುಗಳಲ್ಲಿ ಬರಪರಿಸ್ಥಿತಿ ಇದೆ. ಬರಪರಿಹಾರಕ್ಕಾಗಿ ರೂ.18,171 ಕೋಟಿ ನೆರವನ್ನು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಆಗಿದೆ. ಈ ನಷ್ಟಕ್ಕೆ ಪರಿಹಾರ ನೀಡಲು ರೂ.4,663 ಕೋಟಿ ಕೇಳಿದ್ದೇವೆ. ಸೆಪ್ಟಂಬರ್ 21 ರಂದು ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಮೊದಲ ಮನವಿ ಮಾಡಿದ್ದೆವು. ಕೇಂದ್ರದ ತಂಡ ಬಂದು ಸಮೀಕ್ಷೆ ನಡೆಸಿ, ವರದಿಯನ್ನೂ ಕೂಡಾ ನೀಡಿದೆ. ರಾಜ್ಯ ಸರ್ಕಾರದ ಮನವಿಗೆ ಇಲ್ಲಿಯ ವರೆಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ನಾವು ಬರೆದ ಪತ್ರಗಳಿಗೆ ಪ್ರತಿಕ್ರಿಯೆ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಅವಕಾಶ ಕೇಳಿದರೂ ಕೊಟ್ಟಿಲ್ಲ ಎಂದರು.

ಡಬಲ್ ಎಂಜಿನ ಸರ್ಕಾರ ಬಂದರೆ ರಾಜ್ಯದಲ್ಲಿ ಹಾಲು-ತುಪ್ಪದ ಹೊಳೆ ಹರಿಯುತ್ತದೆ ಎಂಬ ಬಿಜೆಪಿ ನಾಯಕರ ಹಸಿ ಸುಳ್ಳುಗಳನ್ನು ನಂಬಿ ಕನ್ನಡಿಗರು 25 ಮಂದಿ ಬಿಜೆಪಿ ಸದಸ್ಯರನ್ನು ಲೋಕಸಭೆಗೆ ಕಳಿಸಿದ್ದರು. ಅವರು ಇಲ್ಲಿಯವರೆಗೆ ಲೋಕಸಭೆಯಲ್ಲಿ ತುಟಿ ಬಿಚ್ಚಿಲ್ಲ. ವಿಧಾನಮಂಡಲದಲ್ಲಿ ಬರಗಾಲದ ಚರ್ಚೆ ನಡೆದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಮಾಡುತ್ತಿರುವ ಈ ಅನ್ಯಾಯದ ವಿವರಗಳೆಲ್ಲವೂ ಹೊರಬಂದು ರಾಜ್ಯದ ಜನರ ಎದುರು ತಲೆತಗ್ಗಿಸುವಂತಾಗುತ್ತದೆ ಎನ್ನುವ ಕಾರಣಕ್ಕಾಗಿಯೇ ಪಿಳ್ಳೆ ನೆಪಗಳನ್ನು ಮುಂದಿಟ್ಟು ರಾಜ್ಯದ ಬಿಜೆಪಿ ಶಾಸಕರು ಧರಣಿ ನಡೆಸಿ ಕಲಾಪ ನಡೆಯದಂತೆ ತಡೆಯೊಡ್ಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ್ಯದ ಪ್ರಜ್ಞಾವಂತ ಜನತೆ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಆರ್.ಅಶೋಕ್ ಅವರಿಗೆ  ಅವರ ಪಕ್ಷದ ಬಹುಸಂಖ್ಯಾತ ಶಾಸಕರ ಬೆಂಬಲವೇ ಇಲ್ಲ. ಪ್ರತಿದಿನ ಅವರದ್ದೇ ಪಕ್ಷದ ಶಾಸಕರು ಒಬ್ಬೊಬ್ಬರಾಗಿ ಅಶೋಕ್ ಅವರ ಮುಖಕ್ಕೆ ಮಂಗಳಾರತಿ ಎತ್ತುತ್ತಿದ್ದಾರೆ. ಯಾವ ಕುರ್ಚಿಯೂ ಸಿಕ್ಕಿಲ್ಲ ಎಂಬ ವೇದನೆಯಿಂದ ಕುದಿಯುತ್ತಿರುವ  ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹವರು ಬಹಿರಂಗವಾಗಿ ಬಿ.ಎಸ್. ಯಡಿಯೂರಪ್ಪನವರಿಂದ ಹಿಡಿದು ಆರ್.ಅಶೋಕ್ ವರೆಗೆ ಎಲ್ಲರ ವಿರುದ್ಧ ಹರಿಹಾಯುತ್ತಿದ್ದಾರೆ. ಇದನ್ನೆಲ್ಲ ಗಮನಿಸುತ್ತಿರುವ ರಾಜ್ಯದ ಜನತೆ ಬಿಜೆಪಿ ಶಾಸಕರಿಗೆ ಬೀದಿ ಬೀದಿಯಲ್ಲಿ ಛೀಮಾರಿ ಹಾಕುತ್ತಿದ್ದಾರೆ. ಇದರಿಂದ ಮುಖ ಎತ್ತಿಕೊಂಡು ಹೋಗಲಾಗದ ಬಿಜೆಪಿ ಶಾಸಕರು ರಾಜ್ಯದ ಜನರ ಗಮನ ಬೇರೆ ಕಡೆ ಸೆಳೆಯುವ ಉದ್ದೇಶದಿಂದ ಕಲಾಪಕ್ಕೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಮಾತೆತ್ತಿದರೆ ದಮ್ಮು – ತಾಖತ್ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ವಿಧಾನಮಂಡಲದ ಕಲಾಪದಲ್ಲಿ ಭಾಗವಹಿಸುವ ಧೈರ್ಯ ತೋರಬೇಕು. ವಿಧಾನಸಭಾ ಅಧಿವೇಶನವನ್ನು ಕರೆದಿರುವುದೇ ರಾಜ್ಯ ಸರ್ಕಾರದ ಆಡಳಿತದ ವಿಮರ್ಶೆಗೆ. ಸರ್ಕಾರ ತನ್ನ ಕರ್ತವ್ಯದಲ್ಲಿ ಎಡವಿದ್ದರೆ, ತಪ್ಪುಗಳನ್ನು ಮಾಡಿದ್ದರೆ ಅದನ್ನು ಎತ್ತಿ ತೋರಿಸುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕಾಗಿದೆ. ಆ ದಮ್ಮು – ತಾಖತ್ ಬಿಜೆಪಿ ಶಾಸಕರಿಗೆ ಇಲ್ಲ ಎಂದರು.

ಸಾಮಾನ್ಯವಾಗಿ ಆಡಳಿತ ಪಕ್ಷಗಳು ವಿರೋಧ ಪಕ್ಷಗಳನ್ನು ಎದುರು ಹಾಕಿಕೊಳ್ಳಲು ಹಿಂದೇಟು ಹಾಕುತ್ತದೆ. ನಮ್ಮ ರಾಜ್ಯದಲ್ಲಿ ವಿರೋಧಪಕ್ಷಗಳಿಗೆ ಆಡಳಿತ ಪಕ್ಷವನ್ನು ಎದುರಿಸುವ ಧೈರ್ಯವೇ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರಂತೆ ನಾವೇನು ವಿರೋಧಪಕ್ಷವನ್ನೇ ನಿರ್ನಾಮ ಮಾಡುವ ಬಗ್ಗೆ ಮಾತನಾಡುವುದಿಲ್ಲ. ಒಂದು ಸಮರ್ಥ ವಿರೋಧ ಪಕ್ಷ ಇರಬೇಕು ಎಂದು ಬಯಸುವವರು ನಾವು. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಅನಗತ್ಯವಾದ ಧರಣಿಯನ್ನು ಕೈಬಿಟ್ಟು ಕಲಾಪದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

Ramesh Babu

Journalist

Recent Posts

ಸಾಹಿತ್ಯ ಪರಿಷತ್ ಚುನಾವಣೆ…..

ಸಾಹಿತ್ಯ ಪರಿಷತ್ ಚುನಾವಣೆ..... ನನ್ನ ಮತ........? ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ ಕನ್ನಡದ ಅಸ್ಮಿತೆಗೊಂದು ಸವಾಲು. ಭ್ರಷ್ಟರ ವಿರುದ್ಧ ಪ್ರಾಮಾಣಿಕರು,…

5 hours ago

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಂಗಳೂರು ಗ್ರಾಮಾಂತರದ ಇಬ್ಬರು ಶಿಕ್ಷಕರು ಆಯ್ಕೆ

ದೇವನಹಳ್ಳಿ: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2026–27ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ…

16 hours ago

ಮೇಕೆದಾಟು ಯೋಜನೆ ಶೀಘ್ರ ಜಾರಿಗೆ ಸಚಿವರ ದೃಢ ಸಂಕಲ್ಪ: ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಮೇಕೆದಾಟು ಯೋಜನೆಯ ಶೀಘ್ರ ಜಾರಿಗಾಗಿ ಜಲಸಂಪನ್ಮೂಲ ಸಚಿವರು ತೀವ್ರ ಒಲವು ತೋರಿದ್ದು, ಕಾಮಗಾರಿಗೆ ಇನ್ನಷ್ಟು ವೇಗ ನೀಡುವ ನಿಟ್ಟಿನಲ್ಲಿ ರಾಜ್ಯದ…

17 hours ago

ಶ್ರೀರಂಗವನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

ತೂಬಗೆರೆ: ಹೋಬಳಿಯ ಯದ್ದಲಹಳ್ಳಿ ಸಮೀಪದ ಶ್ರೀರಂಗವನದಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ ಹಾಗೂ…

17 hours ago

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2026: ಹಕ್ಕು,ಆಕ್ಷೇಪಣೆ ಸಲ್ಲಿಕೆಗೆ ಸೆ. 23 ವರೆಗೆ ಅವಕಾಶ-ಡಿಸಿ ಅನುರಾಧ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕರಡು ಮತದಾರ ಪಟ್ಟಿ ಪ್ರಕಟಗೊಂಡಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ಮತದಾರರು ಮತಗಟ್ಟೆ…

19 hours ago

ರೈಲು ಡಿಕ್ಕಿಗೆ ಅಪರಿಚಿತ ವ್ಯಕ್ತಿ ಬಲಿ

ದೊಡ್ಡಬಳ್ಳಾಪುರ: ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ…

22 hours ago