ವಿರೋಧ ಪಕ್ಷದವರು ಗೆದ್ದರೆ ಗಲಾಟೆಗೆ ಸೀಮಿತ, ಕಾಂಗ್ರೆಸ್ ಗೆದ್ದರೆ ಸಮಸ್ಯೆಗೆ ಪರಿಹಾರ-ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯಲ್ಲಿ ಏನಾದರೂ ವಿರೋಧ ಪಕ್ಷದವರನ್ನು ಆಯ್ಕೆ ಮಾಡಿದರೆ ಅವರು ಮೇಲ್ಮನೆಯಲ್ಲಿ ಸುಮ್ಮನೆ ಬಂದು ಗಲಾಟೆ ಮಾಡಕ್ಕೆ ಸೀಮಿತ ಹೊರತು, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದನೆ ಇರುವುದಿಲ್ಲ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ತಾಲೂಕಿನ ಗ್ರಾಮಾಂತರ ಭಾಗದ ಶಾಲೆಗಳಲ್ಲಿ ಗುರುವಾರ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಪರವಾಗಿ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೆ 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಸರ್ಕಾರಿ ನೌಕರರ 6 ನೇ ವೇತನ ಆಯೋಗ ವರದಿಯನ್ನು ಜಾರಿ ಮಾಡಿದ್ದು, ಅದೇ ರೀತಿಯಲ್ಲಿ ಏಳನೇ ವೇತನ ಆಯೋಗ ವರದಿ ಕೂಡ ಜಾರಿ ಮಾಡಲಿದೆ. ನುಡಿದಂತೆ ನಡೆಯುವ ಸರಕಾರ ಏನಾದರೂ ಇದ್ದರೆ ಅದು ಕಾಂಗ್ರೆಸ್ ಸರಕಾರ. ಅದಕ್ಕಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು

ಈ ಕ್ಷೇತ್ರದಲ್ಲಿ ಸತತವಾಗಿ 18 ವರ್ಷಗಳ ಕಾಲ ಆಯ್ಕೆಯಾಗಿದ್ದವರು ಇವತ್ತು ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಲಿಲ್ಲ. ಅವರದೇ ಪಕ್ಷವು ಅಧಿಕಾರದಲ್ಲಿ ಇದ್ದಾಗ ಯಾಕೆ ಏಳನೇ ವೇತನ ಆಯೋಗ ವರದಿ ಜಾರಿ ಮಾಡಲಿಲ್ಲ. ಕಾಂಗ್ರೆಸ್‌ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ನ ಡಿ.ಟಿ. ಶ್ರೀನಿವಾಸ್ ಶಿಕ್ಷಣ, ರಾಜಕೀಯ ಕ್ಷೇತ್ರದಲ್ಲಿ ಅನುಭವಿಯಾಗಿದ್ದಾರೆ. ಕೆಎಎಸ್ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ. ಇದನ್ನೆಲ್ಲ ಗಮನಿಸಿ ಶಿಕ್ಷಕರು ಮತ ಚಲಾಯಿಸಿದರೆ ಕಾಂಗ್ರೆಸ್ ಸರಕಾರವು ನಿಮ್ಮೊಂದಿಗೆ ಇರಲಿದೆ ಎಂದರು.

ಈ ಸಂದರ್ಭದಲ್ಲಿ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಜನಪರವಾದ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನವರು ಅಪಪ್ರಚಾರ ಮಾಡಲು ಹೊರಟಿದ್ದಾರೆ. ಕಾಂಗ್ರೆಸ್ ಸರ್ಕಾರ ಶಿಕ್ಷಕರು ಮತ್ತು ಸರ್ಕಾರಿ ನೌಕರರ ಹಿತವನ್ನು ಕಾಪಾಡುತ್ತದೆ. 7ನೇ ವೇತನ ಆಯೋಗದ ವರದಿ ಜಾರಿ, ಒಪಿಎಸ್ ಪದ್ಧತಿ ಮರುಸ್ಥಾಪನೆ, ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಉಳಿಸುವ ಕೆಲಸ ಆಗಲಿದೆ ದಯವಿಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಪ್ರಜ್ಞಾವಂತ ಮತದಾರರು ಬಿಜೆಪಿಗೆ ತಕ್ಕಪಾಠ ಕಲಿಸಿ ಕಾಂಗ್ರೆಸ್‌ ಆಡಳಿತ ನಡೆಸಲು 136 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ನೀಡಿದರು. ಇದರಿಂದ ಜನಸಾಮಾನ್ಯರ ಕಷ್ಟಗಳನ್ನು ಪರಿಹರಿಸಲು ಪಣತೊಟ್ಟಿರುವ ಪಕ್ಷವು ಕಾಂಗ್ರೆಸ್ ಆಗಿದ್ದು, ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಕೂಡ ಬದ್ಧವಾಗಿದೆ. ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ, ವಕ್ಕಲೇರಿ ಗ್ರಾಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಖಾಜಿಕಲ್ಲಹಳ್ಳಿ ಮುನಿರಾಜು, ಎಂಟಿಬಿ ಶ್ರೀನಿವಾಸ್, ಕ್ಯಾಲನೂರು ಅನಿಲ್, ನವೀನ್, ಅಮ್ಮನಲ್ಲೂರು ನಾಗೇಶ್, ಭೂಪತಿಗೌಡ, ಮಂಜುನಾಥ್, ಸೀರಾಜ್, ರವಿ, ಸೇರಿದಂತೆ ಶಿಕ್ಷಕರು ಇದ್ದರು

Leave a Reply

Your email address will not be published. Required fields are marked *