ವಿರಾಟ ರೂಪ ಪ್ರದರ್ಶಿಸಿದ ಕೊಹ್ಲಿ! ಭಾರತಕ್ಕೆ ಸರಣಿ ಕ್ಲೀನ್ ಸ್ವೀಪ್

ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದ ಕ್ರೀಡಾಭಿಮಾನಿಗಳಿಗೆ ವಿರಾಟ್ ಕೊಹ್ಲಿ ಹಾಗೂ ಶುಭ್ ಮನ್ ಗಿಲ್ ಅವರ ಅದ್ಭುತ ಬ್ಯಾಟಿಂಗ್ ಹಾಗೂ ಮೊಹಮ್ಮದ್ ಸಿರಾಜ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ ಶ್ರೀಲಂಕಾ ವಿರುದ್ಧ 317 ರನ್‌ಗಳ ಬೃಹತ್ ಗೆಲುವಿನ ಸಿಹಿ ಹಂಚಿದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ ದಾಖಲೆಯ ಶತಕ ಸಿಡಿಸಿದ್ದ ವಿರಾಟ್ ಕೊಹ್ಲಿ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ 110 ಎಸೆತಗಳಲ್ಲಿ 13 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ ಅಜೇಯ (166) ರನ್‌ಗಳ ಸಿಡಿಲಬ್ಬರದ ಬ್ಯಾಟಿಂಗ್ ಹಾಗೂ ಆರಂಭಿಕ ಆಟಗಾರ ಶುಭ್ ಮನ್ ಗಿಲ್ 14 ಬೌಂಡರಿ ಹಾಗೂ ಎರಡು ಸಿಕ್ಸರ್ ಸಹಿತ (116) ಪ್ರದರ್ಶನದ ನೆರವಿನಿಂದ 390 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಹಾಗೂ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ ಮನ್ ಗಿಲ್ ಮೊದಲ ವಿಕೆಟ್ ಗೆ (94) ರನ್ ಪೇರಿಸುವ ಮೂಲಕ ಭದ್ರ ಅಡಿಪಾಯ ಹಾಕಿದರು, ರೋಹಿತ್ ಔಟಾದ ನಂತರ ಕ್ರಿಸ್ ಗೆ ಬಂದ ವಿರಾಟ್ ಕೊಹ್ಲಿ ಅಜೇಯರಾಗಿ ಉಳಿಯುವ ಮೂಲಕ ಶ್ರೀಲಂಕಾ ಬೌಲಿಂಗ್ ಪಡೆಯನ್ನು ಧೂಳಿಪಟ ಮಾಡಿದರು.

ಬೃಹತ್ ಮೊತ್ತ ಬೆನ್ನಟ್ಟಿದ ಪ್ರವಾಸಿ ಲಂಕಾ ತಂಡದ ಆರಂಭ ಉತ್ತಮವಾಗಿರಲಿಲ್ಲ, ತಂಡದ ಮೊತ್ತ 7 ರನ್ ಗಳಿಸಿದ್ದ ಸಂದರ್ಭ ಅವಿಶ್ಕೋ ಫರ್ನಾಂಡೊ (1) ರನ್ ಗಳಿಸಿದ್ದಾಗ ಮೊಹಮ್ಮದ್ ಸಿರಾಜ್ ಆಘಾತ ನೀಡಿದರು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ಗಳಾದ ಕುಶಾಲ್ ಮೆಂಡಿಸ್, ಅಸಲಂಕಾ, ನಾಯಕ ದಸುನ್ ಶನಕಾ, ವನಿಂದು ಹಸರಂಗ, ಚಮಿಕಾ ಕರುಣಾರತ್ನೆ ಬೇಗನೇ ಪೆವಿಲಿಯನ್ ಸೇರಿದರು.

ಭಾರತದ ಬೌಲಿಂಗ್ ವಿಭಾಗ ಅದ್ಬುತವಾದ ಪ್ರದರ್ಶನ ನೀಡಿತು, ಮೊಹಮ್ಮದ್ ಸಿರಾಜ್ ಒಂದು ಮೆಡನ್ ಸಹಿತ ಹತ್ತು ಓವರುಗಳಲ್ಲಿ 32 ರನ್ ನೀಡಿ 4 ವಿಕೆಟ್ ಪಡೆದರು, ಹಿರಿಯ ಬೌಲರ್ ಮೊಹಮ್ಮದ್ ಶಮಿ 6 ಓವರುಗಳಲ್ಲಿ 2 ಮೆಡನ್ ಸಮೇತ 20 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಲಂಕಾ ಬ್ಯಾಟ್ಸ್‌ಮನ್ಗಳ ಬೆನ್ನು ಮೂಳೆ ಮುರಿದರು, ಇದರಿಂದಾಗಿ ಶ್ರೀಲಂಕಾ ತಂಡ 73 ರನ್ ಗಳಿಸಿ ಆಲೌಟ್ ಆಗುವ ಮೂಲಕ ಮಂಡಿಯೂರಿದರು.

ವರ್ಷದ ಅಂತ್ಯಕ್ಕೆ ನಡೆಯುವ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡು ನಡೆಯುತ್ತಿರುವ ದ್ವೀಪಕ್ಷಿಯ ಸರಣಿಯಲ್ಲಿ ಆರಂಭಿಕ ಆಟಗಾರು ಉತ್ತಮ ಪ್ರದರ್ಶನ ನೀಡುವ ಮೂಲಕ ಆರಂಭಿಕ ಸ್ಥಾನದ ಕೊರತೆ ನೀಗಿದಂತಾಗಿದೆ, ಕೊಟ್ಟ ಅವಕಾಶವನ್ನು ಬಳಸಿಕೊಂಡ

ಬ್ಯಾಟ್ಸ್‌ಮನ್ ಶುಭ್ ಮನ್ ಗಿಲ್ ಉತ್ತಮ ಪ್ರದರ್ಶನ ನೀಡುವ ಮೂಲಕ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.

ಮೂರು ಏಕದಿನ ಪಂದ್ಯಗಳಲ್ಲಿ ಎರಡು ಶತಕ ಸಹಿತ 283 ರನ್ ಸಿಡಿಸಿದ್ದ ರನ್ ಮಿಶನ್ ವಿರಾಟ್ ಕೊಹ್ಲಿ ನಿರೀಕ್ಷೆಯಂತೆ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಮುಂದಿನ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ ನಡೆಸಿದ್ದು ಎದುರಾಳಿ ತಂಡಗಳಿಗೆ ಭರ್ಜರಿ ಫಾರ್ಮ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *