ವಿಪತ್ತುಗಳನ್ನು ಎದುರಿಸಲು ಸದಾ ಸನ್ನದ್ಧರಾಗಿರಿ: ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್

ಪ್ರಕೃತಿಯಲ್ಲಿ ಎರಡು ಬಗೆಯ ವಿಪತ್ತುಗಳು ಸಂಭವಿಸುತ್ತವೆ. ಒಂದು ಮಾನವ ನಿರ್ಮಿತ ಮತ್ತೊಂದು ಪ್ರಕೃತಿ ನಿರ್ಮಿತ. ಈ ಎರಡೂ ಬಗೆಯ ವಿಕೋಪಗಳೂ ಅನಿರೀಕ್ಷಿತವಾಗಿಯೇ ಸಂಭವಿಸುತ್ತವೆ. ಆದ್ದರಿಂದ ಅಂತಹ ವಿಪತ್ತುಗಳನ್ನು ತಡೆಯಲು ಸದಾ ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಎನ್. ಶಿವಶಂಕರ್ ಅವರು ಹೇಳಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅಣುಕು ಪ್ರದರ್ಶನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ  ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಿದ್ದು ಅಪಾಯಕಾರಿ ಕಾರ್ಖಾನೆಗಳು , ದೊಡ್ಡ ದೊಡ್ಡ ವಸತಿ ಸಮುಚ್ಛಯಗಳು, ಮಾಲ್, ಬಿಲ್ಡಿಂಗ್, ಶಾಲಾ ಕಾಲೇಜು, ಅಸ್ಪತ್ರೆ, ಈ ಎಲ್ಲಾ ತರಹದ ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಜನಸಂದಣಿ ಹೆಚ್ಚುತ್ತಿದೆ. ಈ ಸ್ಥಳಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳನ್ನು ತಡೆಗಟ್ಟಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸದಾ ಸನ್ನದ್ಧವಾಗಿರಲು ಇಂತಹ ತರಬೇತಿ ಕಾರ್ಯಕ್ರಮಗಳು ಸಹಕಾರಿ ಎಂದರು.

ಜಿಲ್ಲೆಯಲ್ಲಿ ಸಂಭವಿಸಬಹುದಾದ ವಿಪತ್ತು ತಡೆಗಟ್ಟಲು ಪ್ರತಿಯೊಬ್ಬ ಜಿಲ್ಲಾ ಮಟ್ಟದ ಅಧಿಕಾರಿಯ ಪಾತ್ರ ಮತ್ತು ಜವಾಬ್ದಾರಿ ಬಹಳ ಮುಖ್ಯ. ವಿಪತ್ತು ಸಂಭವಿಸುವ ಸಂದರ್ಭದಲ್ಲಿ ವಿಳಂಬ ಮಾಡದೇ ಎಲ್ಲಾ ಅಧಿಕಾರಿಗಳು ಸೂಕ್ತ ಕಾಲಕ್ಕೆ ಸ್ಪಂದಿಸಬೇಕು. ಸಂಭವನೀಯ ವಿಪತ್ತು ತಡೆಗಟ್ಟುವಲ್ಲಿ, ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಇಂತಹ ತರಬೇತಿ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಅವರು ಹೇಳಿದರು.

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದಡಿ ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆ ವತಿಯಿಂದ ಜಿಲ್ಲಾ ಮಟ್ಟದ ಅಧಿಕಾರಿಗಳು,  ಕಾರ್ಖಾನೆಗಳ ಮುಖ್ಯಸ್ಥರು, ಅಗ್ನಿಶಾಮಕ ದಳ, ಎನ್.ಡಿ.ಆರ್.ಎಫ್ ಸಿಬ್ಬಂದಿ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವಿಪತ್ತು ನಿರ್ವಹಣಾ ಮುಖ್ಯಸ್ಥರು, ಇನ್ನಿತರ ಸಹಭಾಗಿದಾರರಿಗೆ ಅಣುಕು ಪ್ರದರ್ಶನ ಕೈಗೊಳ್ಳಲು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಅಮರೇಶ್ ಹೆಚ್, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ,  ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಜಂಟಿ ನಿರ್ದೇಶಕ ನವನೀತ್ ಮೋಹನ್, ಉಪ ನಿರ್ದೇಶಕರುಗಳಾದ ಸೋಮಶೇಖರ್, ನರಸಿಂಹ ಮೂರ್ತಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಬಸವರಾಜು ವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *