ವಿಧಿಯಾಟ: ಹೊರಟಿದ್ದು ನಾಮಕರಣ‌ ಕಾರ್ಯಕ್ರಮಕ್ಕೆ, ತಲುಪಿದ್ದು ಮಸಣ‌: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರ ದುರ್ಮರಣ 

ಅವರೆಲ್ಲರೂ ಮನೆಯಿಂದ ಖುಷಿ ಖುಷಿಯಾಗಿ ಸಂಬಂಧಿಕರ ನಾಮಕರಣಕ್ಕೆ ಎಂದು ಹೊರಟಿದ್ದರು. ಇನ್ನೇನು ಕೆಲವೇ ನಿಮಿಷದಲ್ಲಿ ನಾಮಕರಣದಲ್ಲಿ ಭಾಗಿ ಆಗುತ್ತೇವೆ ಎಂದು ಕೊಂಡವರು, ಸೇರಿದ್ದ ಸ್ಮಶಾನಕ್ಕೆ. ಒಂದೇ ಕುಟುಂಬದ ಮೂವರ ಬಾಳಲ್ಲಿ ಇಂದು ವಿಧಿ ಆಟವಾಡಿದೆ. ಈ ಕುರಿತ ವರದಿ ಇಲ್ಲಿದೆ ನೋಡಿ……

ಹೌದು ಹೀಗೆ ನಜ್ಜುಗುಜ್ಜಾದ ಕಾರು, ಸ್ಥಳ ಪರಿಶೀಲನೆಗೆ ಮುಂದಾಗಿರುವ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ನೆಲಮಂಗಲ ಸಮೀಪದ ಡಾಬಸ್ ಪೇಟೆ ಬಳಿ. ಇಂದು ಬೆಳಗ್ಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಗೋಪಾಲ್(60) ಶಶಿಕಲಾ(55) ದೀಪಿಕಾ (35)  ಸಾವನಪ್ಪಿದ್ದಾರೆ.  ಶಶಿಕಲಾ ಮುಂಬದಿಯ ಸೀಟ್ ನಲ್ಲಿ ಕುಳಿತ್ತಿದ್ದರು, ಅವರ ಹಿಂಭಾಗದಲ್ಲಿ ದೀಪಿಕಾ ಕುಳಿತಿದ್ದರಿಂದ ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಗಾಯಾಳು ಚಾಲಕ ಗೋಪಾಲ್ ರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿ ಆಗದೆ ಆತ‌ ಕೂಡ ಸಾವನಪ್ಪಿದ್ದಾನೆ. ಇನ್ನೂ ಕಾರಿನಲ್ಲಿ ಇಬ್ಬರು ಮಕ್ಕಳಿದ್ದು, ಇಬ್ಬರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೂ ಗೋಪಾಲ್ ಕುಟುಂಬ ತುಮಕೂರಿನ ಸಂಬಂಧಿಕರ ಮನೆಯಲ್ಲಿ ನಾಮಕರಣಕ್ಕಾಗಿ, ಬೆಂಗಳೂರಿನ ಮಲ್ಲೇಶ್ವರಂ ನಿಂದ ಹೊರಟು ನೆಲಮಂಗಲದ ದಾಬಸ್ ಪೇಟೆ ಬಳಿ ಸಾವನಪ್ಪಿದ್ದಾರೆ. ಬೆಂಗಳೂರಿನಿಂದ ತುಮಕೂರಿನ ಕಡೆಗೆ ಪ್ರಯಾಣ ಬೆಳೆಸುತ್ತಿದ್ದ ಲಾರಿಯೊಂದು ಮುಂದೆ ಚಮಕ್ ನೀಡಿದೆ‌. ಹೀಗಾಗಿ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ‌.

ರಾಷ್ಟ್ರೀಯ ಹೆದ್ದಾರಿ ಆಗಿದ್ದರಿಂದ ಕಾರಿನ ವೇಗ ಕೂಡ ಹೆಚ್ಚಾಗಿತ್ತು. ಕಾರಿನ ರಭಸಕ್ಕೆ ಇಬ್ಬರು ಮಹಿಳೆಯರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇನ್ನೂ ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ ಕೆ ಬಾಬಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ‌.

ನೆಲಮಂಗಲ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಒಟ್ಟಾರೆ ಇನ್ನೇನು ಕೆಲವೇ ನಿಮಿಷಗಳಲ್ಲಿ ಶುಭ ಕಾರ್ಯದಲ್ಲಿ ಭಾಗಿಯಾಗುತ್ತೇನೆ ಎಂದುಕೊಂಡಿದ್ದವರು, ಈಗ ಹೆಣವಾಗಿ ಸ್ಮಶಾನ ಸೇರಿದ್ದು ಮಾತ್ರ ವಿಧಿಯಾಟ.

Leave a Reply

Your email address will not be published. Required fields are marked *