ಕೋಲಾರ: ಹಾಲು, ವಿದ್ಯುತ್ ದರ ಹೆಚ್ಚಳ ಮಾಡಿ ಯುಗಾಧಿ ಮುನ್ನವೇ ಬೇವು ನೀಡಿರುವ ಸರ್ಕಾರದ ರೈತ ವಿರೋಧಿ ಬೆಲೆ ಏರಿಕೆ ವಿರುದ್ದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಅರಣ್ಯ ಉದ್ಯಾನವನದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಧರ ಹೆಚ್ಚಳಕ್ಕೆ ಅನುಗುಣವಾಗಿ ಆದಾಯವು ಹೆಚ್ಚಾದರೆ ಜನ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ದರಗಳು ಏರಿಕೆಯಾಗಿ ಆದಾಯ ಅಷ್ಟೇ ಇದ್ದರೆ, ಬಡ, ಮಧ್ಯದ ವರ್ಗದವರಿಗೆ ಕಂಡಿತ ಹೊರೆಯಾಗಲಿದೆ. ಸರ್ಕಾರಗಳು ದರ ಏರಿಕೆಯ ಸಂದರ್ಭದಲ್ಲಿ ಬಡವರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ತೀರ್ಮಾನ ತೆಗೆದುಕೊಳ್ಳುವುದು ಬಿಟ್ಟು, ಉಚಿತ ಭಾಗ್ಯಗಳಲ್ಲಿ ಹಣ ಒದಗಿಸಲು ಬಡವರ ಮೇಲೆ ಬೆಲೆ ಏರಿಕೆಯ ದಬ್ಬಾಳಿಕೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇವು ಬೆಲ್ಲ ಹಬ್ಬ ಯುಗಾಧಿ ಆಚರಣೆಗೆ ಸಜ್ಜಾಗುತ್ತಿರುವ ರಾಜ್ಯದ ಜನರಿಗೆ ಹಬ್ಬಕ್ಕೆ ಮುನ್ನವೆ ಹಾಲು ಹಾಗೂ ವಿದ್ಯುತ್ ದರ ಏರಿಕೆಯ ಹೆಸರಿನಲ್ಲಿ ಬರೀ ಕಹಿಯ ಅನುಭವವಾಗಿದೆ. ಸಾಗಣೆ ಸಂಸ್ಕರಣೆ ಹಾಗೂ ವೇತನದಂತಹ ವೆಚ್ಚಗಳು ಅಧಿಕವಾಗಿರುವ ಕಾರಣವನ್ನು ನೀಡಿ ಲೀಟರ್ ಹಾಲಿನ ದರವನ್ನು 4 ರೂ. ನಷ್ಟು ಏರಿಕೆ ಮಾಡುವ ಸಂಬಂಧ ಸರ್ಕಾರ ಘೋಷಣೆ ಮಾಡಿದ್ದರೆ, ನಿಶ್ಚಿತಾ ಶುಲ್ಕ ಹೆಸರಿನಲ್ಲಿ ವಿದ್ಯುತ್ ಕೂಡ ದುಬಾರಿ ಮಾಡಿ ಬಡವರ ಬದುಕನ್ನು ಬೀದಿಗೆ ತಳ್ಳುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ತಾ.ಅಧ್ಯಕ್ಷ ಕದರಿನತ್ತ ಅಪ್ಪೋಜಿರಾವ್ ಮಾತನಾಡಿ, ಪ್ರತಿ ಬೇಸಿಗೆಯಲ್ಲೂ ರೈತರ ಹೆಸರಿನಲ್ಲಿ ಹಾಲಿನ ಬೆಲೆಯನ್ನು ಏರಿಕೆ ಮಾಡುತ್ತೇವೆಂದು ಭರವಸೆ ನೀಡಿ 1 ಅಥವಾ 2 ರೂ. ಏರಿಕೆ ಮಾಡಿ ನಂತರ ಗ್ರಾಹಕರಿಗೆ ಹೊರೆಯಾಗುವಂತೆ ಮೊಸರು ಹಾಲಿನ ಉತ್ಪನ್ನಗಳಿಗೆ ಪ್ರತಿ ಲೀಟರ್ ಮೇಲೆ 4 ರೂ ಏರಿಕೆ ಮಾಡಿ ಹಗಲು ದರೋಡೆ ರೈತರ ಹೆಸರಿನಲ್ಲಿ ಒಕ್ಕೂಟ ನಡೆಸುವುದನ್ನು ಬಿಟ್ಟು ಏರಿಕೆಯಾಗಿರುವ ಪ್ರತಿ ಲೀಟರ್ ಹಾಲಿನ 4 ರೂಪಾಯಿ ಮೊತ್ತವನ್ನು ರೈತರಿಗೆ ನೀಡುವ ಮುಖಾಂತರ ಮಾನವೀಯತೆ ತೋರಲಿ ಎಂದು ಸಲಹೆ ನೀಡಿದರು.
ದುಬಾರಿಯಾಗಿರುವ ಕೃಷಿ ಕ್ಷೇತ್ರದಲ್ಲಿ ಕೃಷಿಯೇ ಬೇಡ ಎಂದು ರೈತರು ನಿರ್ಧಾರ ಮಾಡಿರುವಾಗ ಈಗ ಗುಬ್ಬಚ್ಚಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಗುಣಮಟ್ಟದ 10 ತಾಸು ವಿದ್ಯುತ್ ನೀಡಲು ಯೋಗ್ಯತೆ ಇಲ್ಲದ ಇಂಧನ ಸಚಿವರು ಏಕಾಏಕಿ ವಿದ್ಯುತ್ ಬೆಲೆ ಏರಿಕೆ ಮಾಡಿ, ರೈತರ ಮರಣ ಶಾಸನ ಬರೆಯುವ ಜೊತೆಗೆ ಹೊಸದಾಗಿ ಕೊಳವೆಬಾವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಸರ್ಕಾರದ ಸಬ್ಸಿಡಿ ಹಿಂಪಡೆದು ರೈತರಿಗೆ ಲಕ್ಷ ಲಕ್ಷ ತಲೆ ಮೇಲೆ ಹಾಕುವ ಬದಲು ಸರ್ಕಾರದಿಂದಲೇ ಉಚಿತ ವಿದ್ಯುತ್ ಸಂಪರ್ಕ ನೀಡುವ ಯೋಜನೆಯನ್ನು ಜಾರಿ ಮಾಡಲಿ ಎಂದು ಒತ್ತಾಯಿಸಿದರು.
ಒಂದುವಾರದಲ್ಲಿ ರೈತರಿಗೆ ಗ್ರಾಹಕರಿಗೆ ಹೊರೆಯಾಗುವ ಬೆಲೆ ಏರಿಕೆ ನಿಯಂತ್ರಣ ಮಾಡಿ ರೈತರ ಜನ ಸಾಮಾನ್ಯರ ಕೂಲಿ ಕಾರ್ಮಿಕರ ರಕ್ಷಣೆ ಮಾಡದೇ ಇದ್ದರೆ, ಲಕ್ಷಾಂತರ ರೈತರು, ಜಾನುವಾರುಗಳು, ಸಮೇತ ಮುಖ್ಯ ಮಂತ್ರಿಗಳ ಮನೆ ಮುತ್ತಿಗೆ ಹಾಕುವ ಎಚ್ಚರಿಕೆಯ ಜೊತೆಗೆ ಯುಗಾದಿ ಹಬ್ಬಕ್ಕೆ ಸಿಹಿಯನ್ನು ಕೊಡಿ, ಕಹಿಯನ್ನು ಅಲ್ಲ ಎಂದು ಸರ್ಕಾರಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಬಾಬುರಾವ್, ಮಂಜುನಾಥರಾವ್, ಸಂತೋಷ್, ಶ್ರೀರಾಮರೆಡ್ಡಿ, ಗುಲ್ಲಟ್ಟಿ, ಮುನಿರಾಜು, ವಿಶ್ವ, ಗಿರೀಶ್, ರಾಜು, ಮುಂತಾದವರು ಇದ್ದರು.