ವಿದ್ಯಾರ್ಥಿಗಳ ಪ್ರತಿಭೆಯನ್ನ ಶಿಕ್ಷಕರು, ಪೋಷಕರು ಪ್ರೋತ್ಸಾಹಿಸಬೇಕು- ಬಾಲನಟಿ ಎಂ.ಭೈರವಿ

ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ಅವಕಾಶಗಳಿವೆ. ಪ್ರತಿಭೆಯನ್ನು ಪ್ರೋತ್ಸಾಹಿಸುವ ಕಡೆಗೆ ಶಿಕ್ಷಕರು ಮತ್ತು ಪೋಷಕರು ಗಮನನೀಡಬೇಕೆಂದು ಬಾಲನಟಿ ಎಂ.ಭೈರವಿ ತಿಳಿಸಿದರು.

ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ಸಿರಿಗನ್ನಡ ಸಂಭ್ರಮ 2023  ಕಾರ್ಯಕ್ರಮದಲ್ಲಿ  ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಅಭ್ಯಾಸ ಮತ್ತು ಹವ್ಯಾಸಗಳನ್ನು ಇಷ್ಟಪಟ್ಟು ಮಾಡಬೇಕು. ವಿದ್ಯಾಭ್ಯಾಸ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯಾಗಬೇಕು. ಸಮಯಪಾಲನೆ, ಶಿಸ್ತು,  ಏಕಾಗ್ರತೆ, ಮಾರ್ಗದರ್ಶನ ವಿದ್ಯಾರ್ಥಿಗಳ ಯಶಸ್ಸಿಗೆ ಸಹಕಾರಿ ಆಗುತ್ತವೆ. ನಮ್ಮ ಪ್ರತಿಭೆ ನಮ್ಮ ದೇಶಕ್ಕೆ ದೊರೆಯಬೇಕು. ಬುದ್ದಿವಂತರು ವಿದೇಶಕ್ಕೆ ಹೋಗುವ  ವ್ಯಾಮೋಹ ಬಿಡಬೇಕು. ವಿದ್ಯಾರ್ಥಿಗಳು ಬಿಡುವಿನ ಸಮಯವನ್ನು ವ್ಯರ್ಥ ಮಾಡಬಾರದು. ನಮ್ಮ ಕನ್ನಡ ಭಾಷೆಯನ್ನು ನಿರ್ಲಕ್ಷಿಸಬಾರದು ಎಂದರು.

ಮುಖ್ಯ ಶಿಕ್ಷಕ ಆರ್.ನಾರಾಯಣಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಭೆ ಇರುತ್ತದೆ. ವಿದ್ಯೆಯೊಂದಿಗೆ ಪ್ರತಿಭೆಯನ್ನು ಅನಾವರಣಗೊಳಿಸಬೇಕು. ವಿದ್ಯೆಗೆ ವಿನಯವೇ ಆಧಾರವೆಂಬುದು ಸತ್ಯದ ಮಾತು. ವಿದ್ಯಾರ್ಥಿಗಳು ಪೋಷಕರನ್ನು ಮತ್ತು ಗುರುಗಳನ್ನು ಗೌರವಿಸುವ ಮತ್ತು ಪ್ರೀತಿಸುವ ಗುಣವನ್ನು ಮೊದಲು ರೂಢಿಸಿಕೊಳ್ಳಬೇಕು ಎಂದರು.

ಬಹುಮುಖ ಪ್ರತಿಭೆ ಎಂ.ಭೈರವಿ ಮತ್ತು ವಿದ್ಯಾರ್ಥಿಗಳ ನಡುವೆ ಸಂವಾದ ನಡೆಸಿಕೊಟ್ಟ ದೊಡ್ಡಬಳ್ಳಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಮಂಗಳಗೌರಿ, ಬಾಲನಟಿ ಭೈರವಿ ಅವರ ಯಶಸ್ಸಿನಲ್ಲಿ ತಂದೆ ಮತ್ತು ತಾಯಿ ಪ್ರೋತ್ಸಾಹ ಮತ್ತು ಪರಿಶ್ರಮ ಹೆಚ್ಚಾಗಿದೆ. ನ್ಯಾಯಾಧೀಶರಾಗಬೇಕೆಂಬದು ಕನಸು‌ ಹೊಂದಿರುವ ‌ಭೈರವಿ ಈಗಾಗಲೆ ಹಲವಾರು ಸಮಾಜಮುಖಿ‌ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಡ್ರಾಮಾ ಜೂನಿಯರ್ ಸೇರಿದಂತೆ ಹಲವು ಸಿನಿಮಾ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪ್ರತಿಭೆಯಿಂದ ಹಲವು ಪುರಸ್ಕಾರಗಳಿಗೂ ಪಡೆದಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಕನ್ನಡ ಭಾಷೆಯಲ್ಲಿ 125 ಅಂಕಗಳಿಗೆ 125 ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಾದ ಕೆ.ಗಂಗೋತ್ರಿ, ಡಿ.ಹರ್ಷಿತ, ನಾಗಮಣಿ ಮತ್ತು ಎನ್.ನಂದಿತ ಅವರಿಗೆ ಅಭಿನಂದನೆ ನಡೆಯಿತು. ಸಮಾರಂಭದಲ್ಲಿ ಶಾಲಾಭಿವೃದ್ದಿ ಸಮತಿ ಅಧ್ಯಕ್ಷ ಮಾಳಯ್ಯ, ಸದಸ್ಯರುಗಳಾದ ಕೃಷ್ಣಮೂರ್ತಿ, ಶ್ಯಾಮಲ, ಮಹೇಶ್ ಹುಲಿಕುಂಟೆ, ಶಿಕ್ಷಕರುಗಳಾದ ಯೋಗನರಸಿಂಹಮೂರ್ತಿ, ಭಾಸ್ಕರ್, ಯಲ್ಲಪ್ಪಬಡಣ್ಣನವರ್, ರೂಪ, ಮೇಘನಾ, ವರಲಕ್ಷ್ಮಿ , ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *