ವಿದ್ಯಾರ್ಥಿಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು- ಐಎಎಸ್ ಅಧಿಕಾರಿ ಸಿ.ಎಸ್. ಕರೀಗೌಡ

ಯಾವ ವ್ಯಕ್ತಿ ಸಮಾಜಮುಖಿ ಕೆಲಸಗಳಲ್ಲಿ ಗುರುತಿಸಿಕೊಳ್ಳುತ್ತಾರೋ ಅವರು ಶಾಶ್ವತವಾಗಿ ಉಳಿಯುತ್ತಾರೆ. ಅದೇ ರೀತಿಯಾಗಿ ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಐಎಎಸ್ ಅಧಿಕಾರಿ ಸಿ.ಎಸ್. ಕರೀಗೌಡ ಹೇಳಿದರು.

ನಗರದಲ್ಲಿ ಬುಧವಾರ ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಆರ್.ಎಲ್.ಜಾಲಪ್ಪ ಶಿಕ್ಷಣ ಸಂಸ್ಥೆಗಳ ಸಹಯೋಗದಡಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗಾಗಿ ಆರ್.ಎಲ್.ಜಾಲಪ್ಪ ಕಲಾ ಮಂದಿರದಲ್ಲಿ ನಡೆದ ಪರೀಕ್ಷಾ ದಿಕ್ಸೂಚಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಸಾಧನೆ ಮಾಡುವ ಹಂಬಲವಿದ್ದರೇ ‘ಪ್ರಜಾವಾಣಿ’ ಪತ್ರಿಕೆಯನ್ನೇ ಆದರ್ಶವಾಗಿಟ್ಟುಕೊಳ್ಳಬೇಕು. ನಿರಂತರವಾಗಿ ಕನ್ನಡಿಗರ ಸೇವೆಯಲ್ಲಿ ತೋಡಗಿಸಿಕೊಂಡು, ರಾಜಿ ಮಾಡಿಕೊಳ್ಳದೇ 75 ವರ್ಷಗಳ ಕಾಲ ವಿಶ್ವಾಸಾರ್ಹ ಸುದ್ದಿಗಳನ್ನು ಓದುಗರಿಗೆ ನೀಡಿದ ಶ್ರೀಮಂತ ಪತ್ರಿಕೆಯಾಗಿದೆ. ಕರ್ನಾಟಕ ರಾಜ್ಯೋತ್ಸವವನ್ನು ಮೊಟ್ಟ ಮೊದಲು ಆಚರಣೆ ಮಾಡಿದ್ದು ಪ್ರಜಾವಾಣಿ ಪತ್ರಿಕೆ ಕಚೇರಿಯಲ್ಲಿ ಎಂಬುದು ಕನ್ನಡಿಗರೆಲ್ಲರು ಹೆಮ್ಮೆಪಡುವ ವಿಚಾರ ಎಂದರು.

ಸಾಕಷ್ಟು ಕನ್ನಡ ಪದಗಳನ್ನು ಕನ್ನಡ ಪದಕೋಶಕ್ಕೆ ನೀಡಿ, ಕನ್ನಡದ ಅಸ್ಮಿತೆ ಉಳಿಸುವಲ್ಲಿ ಪತ್ರಿಕೆಯ ಸೇವೆ ಅನನ್ಯವಾಗಿದೆ. ಕನ್ನಡದ ಮೇರು ಸಾಹಿತಿಗಳಾದ ಕೆ.ಪಿ.ಪೂರ್ಣಚಂದ್ರತೇಜಸ್ವಿ, ದೇವನೂರು ಮಹಾದೇವ, ಪಿ.ಲಂಕೇಶ್. ಜಯಂತ್ ಕಾಯ್ಕಿಣಿ ಅವರುಗಳ ಸಾಹಿತ್ಯ ಕೊಡುಗೆಗೆ ವೇದಿಕೆಯಾಗಿದ್ದು ಪ್ರಜಾವಾಣಿ. ರೈತ ಹೋರಾಟ, ದಲಿತ ಚಳವಳಿಗಳಿಗೆ ಬಲ ನೀಡಿದ್ದು, ಕೋಳಗೇರಿ ಎಂಬ ಕನ್ನಡ ಪದವನ್ನು ನೀಡಿದ್ದು ಪ್ರಜಾವಾಣಿ ಎಂದರು.

ಶ್ರೀ ದೇವರಾಜ ಅರಸು ಏಜುಕೇಷನ್ ಟ್ರಸ್ಟ್ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಹಂತವೂ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ನಿರ್ಣಾಯಕ. ಗ್ರಾಮಾಂತರ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಲ್ಲಿ ಯಶಸ್ಸುಗೊಳ್ಳಲು ಮಾನಸಿಕ ಹಾಗೂ ಬೌದ್ಧಿಕವಾಗಿ ಸಿದ್ಧಗೊಳ್ಳಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ. ಇಂದಿನ ಸ್ಮರ್ಧಾತ್ಮಕ ಯುಗದಲ್ಲಿ ಕೌಶಲ್ಯಭಿವೃದ್ಧಿಯಿಂದ ವಿದ್ಯಾರ್ಥಿಗಳು ಜೀವನ ಸದೃಢಗೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರತರಾಗಬೇಕಿದೆ ಎಂದರು.

ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಎಲ್.ಸವಿತಾ ಅವರು ಪರೀಕ್ಷಾ ದಿಕ್ಸೂಚಿ ಉಪನ್ಯಾಸ ನೀಡಿ, ‘ಮನಸ್ಸು ಮರ್ಕಟ ಇದ್ದಂತೆ. ನಿಮ್ಮ ಮನಸ್ಸನ್ನು ನೀವು ಹತೋಟಿಯಲ್ಲಿಟ್ಟುಕೊಳ್ಳಬೇಕು. ಆಗಷ್ಟೇ ಯಶಸ್ಸು ಸಾಧ್ಯ. ಇಡೀ ಜೀವನದಲ್ಲಿ ಬರುವ ಪರೀಕ್ಷೆ ಎದುರಿಸುವುದನ್ನು ಕಲಿಯಬೇಕು. ಈ ಪರೀಕ್ಷೆಯಲ್ಲಿ ಗೆಲುವು ಸಾಧಿಸಲು ನಮ್ಮ ಅನುಭವಗಳನ್ನು ಬಳಸಿಕೊಳ್ಳಬೇಕು. ಇದಕ್ಕೆ ಧನಾತ್ಮಕ ಚಿಂತನೆ ಇದ್ದರೆ ಯಶಸ್ಸು ಸುಲಭವಾಗಲಿದೆ ಎಂದರು.

ದೈಹಿಕವಾಗಿ ಸದೃಢವಾಗಿದ್ದರೆ ಪರೀಕ್ಷೆ ಎದುರಿಸುವುದು ಸುಲಭ. ಇದಕ್ಕೆ ಪೌಷ್ಟಿಕ ಆಹಾರ ಸೇವಿಸಬೇಕು.ಆಗ ಮನಸ್ಸು ಸಕಾರಾತ್ಮಕವಾಗಿ ಸ್ಪಂದಿಸುತ್ತದೆ. ಪರೀಕ್ಷೆಯ ಸಂದರ್ಭದಲ್ಲಿ ವ್ಯವಸ್ಥಿತವಾಗಿ ಸಿದ್ಧತೆ ನಡೆಸಿಕೊಳ್ಳಬೇಕು, ನಿಮ್ಮ ಕಲಿಕಾ ಮಾರ್ಗದಲ್ಲಿಯೇ ವಿಷಯ ಗ್ರಹಿಕೆಗೆ ಮುಂದಾಗಬೇಕು. ಕೊನೆ ಕ್ಷಣದಲ್ಲಿ ಗಾಬರಿಯಾಗದೇ ಪರೀಕ್ಷೆಯ ಮುನ್ನ ದಿನವೇ ಎಲ್ಲ ಅಗತ್ಯ ಸಲಕರಣೆ, ಲೇಖನಿಗಳು, ಹಾಲ್ ಟಿಕೆಟ್ ನಿಮ್ಮೊಂದಿಗಿರಲಿ, ಪಠ್ಯವನ್ನು ಕಣ್ಣ ಮುಂದೆ ಚಿತ್ರಣದಂತೆ ಮೂಡಿಸಿಕೊಂಡು ಪರೀಕ್ಷೆ ಎದುರಿಸಿದ್ದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ವಿದ್ಯಾರ್ಥಿಗಳು ಮಲಗುವ ಮುನ್ನ ನಾನು ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವಷ್ಟು ಅಭ್ಯಾಸ ಮಾಡಿದ್ದೇನೆ ಎಂದು ನೆನಪು ಮಾಡಿಕೊಳ್ಳಬೇಕು ಎಂದರು.

ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರಭಟ್ಟ ಅವರು ಮಾತನಾಡಿ, 75 ವರ್ಷಗಳ ಇತಿಹಾಸವನ್ನು ಹೊಂದಿರುವ ಪ್ರಜಾವಾಣಿ ಸದಾ ಜನಪರವಾದ ನಿಲುವುಗಳ ಸುದ್ದಿಗಳನ್ನು ಪ್ರಕಟಿಸುತ್ತಲೇ ಬಂದಿದೆ. ಯುವ ಸಮುಹವನ್ನು ಉನ್ನತ ಮೌಲ್ಯಗಳೊಂದಿಗೆ, ಉನ್ನತ ಹುದ್ದೆಗಳಿಗೂ ಹೋಗುವಂತೆ ಮಾಡುವುದೇ ಪತ್ರಿಕೆಯ ಆಶಯವಾಗಿದೆ ಎಂದರು.

Leave a Reply

Your email address will not be published. Required fields are marked *