ವಿದ್ಯಾರ್ಥಿಗಳಿಂದ ಶ್ರಮದಾನ: ಸ್ವಚ್ಛತೆ ಇದ್ದಲ್ಲಿ ಆರೋಗ್ಯ ವೃದ್ಧಿ

ದೊಮ್ಮಲೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರವನ್ನ ಜೂ.21 ರಿಂದ 27ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಎಸ್.ಎಸ್ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ವಿಶ್ವ ವಿನಯ್ ಗುರು  ಆಶ್ರಮದಲ್ಲಿ ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ ಕಾಲೇಜಿನ ಸುಮಾರು 50 ಶಿಬಿರಾರ್ಥಿಗಳು  ಭಾಗವಹಿಸಿದ್ದರು. ಶಿಬಿರದಲ್ಲಿ ಶಿಬಿರಾರ್ಥಿಗಳು ಏಳು ದಿನಗಳ ಕಾಲ ಆಶ್ರಮದ ಸುತ್ತು ಮುತ್ತಲು ಇರುವ ಗಿಡಗಳಿಗೆ ಪಾತಿ ಮಾಡಿ ಗೊಬ್ಬರ ಹಾಕಿ ಶ್ರಮ ದಾನವನ್ನು  ಮಾಡಿದರು.

ಅದೇರೀತಿ ಗ್ರಾಮದಲ್ಲಿನ ಜನತೆಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು. ದೇವಸ್ಥಾನದ ಸುತ್ತಮುತ್ತಲಿನ   ನಾಗರಕಲ್ಲುಗಳನ್ನು ಸ್ವಚ್ಛ ಮಾಡಿದರು. ದೇವಸ್ಥಾನದಲ್ಲಿ ನಡೆಯುವ ಅನ್ನ ದಾಸೋಹ ಕಾರ್ಯಕ್ರಮದಲ್ಲಿ  ಭಾಗವಹಿಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗಿಸಿದರು.

ಘಾಟಿ ದೇವಸ್ಥಾನ ಬಳಿ ಇರುವ ರಾಷ್ಟ್ರೋತ್ಥಾನ ಗೋ ಸಂರಕ್ಷಣಾ ಕೇಂದ್ರಕ್ಕೆ ಭೇಟಿ ನೀಡಿ ದನ ಕರುಗಳಿಗೆ    ಮೇವು ನೀಡಿ, ಅಲ್ಲಿನ ವಿವಿಧ ತಳಿಗಳ ದನ ಕರುಗಳು ಹಾಗೂ ಹಸುಗಳ ಪರಿಚಯವನ್ನು ಮಾಡಿಕೊಂಡರು.

ಏಳು ದಿನಗಳ ಕಾಲ ಶಿಬಿರಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪ್ರತಿ ದಿನ ಅಧ್ಯಾಪಕರು ಹಾಗೂ  ಸಂಪನ್ಮೂಲ ವ್ಯಕ್ತಿಗಳಿಂದ ವ್ಯಕ್ತಿತ್ವ ವಿಕಾಸನ, ಪರಿಸರ ಸಂರಕ್ಷಣೆ, ಜೀವನ ಕೌಶಲ್ಯದ ಬಗ್ಗೆ ಅರಿವು ಮೂಡಿಸಲಾಯಿತು. ಇದರ ಜೊತೆಗೆ ವಕೀಲರಿಂದ ಕಾನೂನು ಅರಿವು- ನೆರವು  ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಭಾಗವಹಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆ ಮಾಡುವ ಪ್ರವೃತ್ತಿ ಬೆಳೆಯುತ್ತದೆ.

ಈ ಎಲ್ಲಾ ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನ  ಕಾರ್ಯಕ್ರಮ ಅಧಿಕಾರಿ ಎನ್ ಅಡಿವಪ್ಪ, ಕಾಲೇಜಿನ ಪ್ರಾಂಶುಪಾಲರಾದ ಬಿ ವಿ ಸುಧಾ, ಸಹ ಕಾರ್ಯಕ್ರಮ ಅಧಿಕಾರಿಯಾದ  ಕೆ.ಶಿವರಾಜ್ ವಹಿಸಿದ್ದರು.

Leave a Reply

Your email address will not be published. Required fields are marked *