ತಾಲೂಕಿನ ತೂಬಗೆರೆ ಗ್ರಾಮದಲ್ಲಿನ ಕುರುಬ ಸಮುದಾಯದ ಆರಾಧ್ಯದೈವ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿಯ ದೊಡ್ಡ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಜಾತ್ರೆಯಲ್ಲಿ ಹೊಸದುರ್ಗ ಕನಕ ಗುರುಪೀಠ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿ,
ಹಾಲುಮತ ಸಂಸ್ಕೃತಿ ವೈಭವ ಮತ್ತು ಪರಂಪರೆಗಳನುಸಾರ ಕುಲದೈವ ಸಿದ್ದರಾಮೇಶ್ವರ ಸ್ವಾಮಿ ಮತ್ತು ಸಿದ್ದೇಶ್ವರ ಸದ್ಬಕ್ತರಾದ ನಾವುಗಳು ನಮ್ಮ ಇತಿಹಾಸ ಹಿರಿಮೆಗಳಿಗೆ, ದೈವತ್ವದ ಸದಾಚಾರಗಳನ್ನು ಪಸರಿಸುವುದು ಮತ್ತು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಕುಲದೇವರ ಸದ್ಭಕ್ತರೂ ಹಾಗೂ ಪೂಜಾರಿಗಳು, ಕಾಲಾಟಗಾರರು, ಗೊರವರ ಕುಣಿತದವರು, ಶಿವ ತಾಂಡವ ನೃತ್ಯದವರು, ಕೋಲಕಾರರು, ಈರಮಕ್ಕಳು ಒಂದೆಡೆ ಸೇರಿ ಆಚರಿಸುತ್ತಿರವ ದೊಡ್ಡ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವುದು ನನ್ನ ಪುಣ್ಯ. ಈ ಸಂದರ್ಭದಲ್ಲಿ ನಾನು ನಿಮ್ಮ ಸಮುದಾಯದ ಗುರುವಾಗಿ ಮನವಿ ಮಾಡಿಕೊಳ್ಳುವುದೇನಂದರೇ ದಯವಿಟ್ಟು, ಕುರುಬ ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ, ಸಮುದಾಯ ಜಾಗೃತಿ, ನಮ್ಮ ಸಂಸ್ಕೃತಿ ಪರಂಪರೆಗಳನ್ನು ಅಖಂಡತೆ ಹಾಗೂ ಸಾರ್ವಭೌಮತ್ವವನ್ನು ಉಳಿಸಿ ಎಂದರು.
ಜಾತ್ರಾ ಮಹೋತ್ಸವ ಪ್ರಯುಕ್ತ ತಮಿಳುನಾಡಿನ ಕಾಣದಹಟ್ಟಿ ನಂಜುಂಡಪ್ಪನವರ ಕಲಾತಂಡದ ವೀರಗಾರರ ತಲೆ ಮೇಲೆ ತೆಂಗಿನಕಾಯಿ ಹೊಡೆದು ದೇವರಿಗೆ ಅರ್ಪಿಸುವ ಪವಾಡ ಕಾರ್ಯ ನಡೆಸಿಕೊಟ್ಟರು.
ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ದೇವನಹಳ್ಳಿ, ಚಿಕ್ಕಬಳ್ಳಾಪುರ, ದುರ್ಗೇನಹಳ್ಳಿ, ಬೀರಸಂದ್ರ ಹಾಗೂ ಬೆಂಗಳೂರಿಗೆ ಸೇರಿದ ವಿವಿಧ ಪ್ರದೇಶಗಳಿಂದ ಕುಲಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.
ಉತ್ಸವದಲ್ಲಿ ವೀರಗಾಸೆ, ಗೊರವನ ಕುಣಿತ, ಕಾಲಾಟಕಾರರು, ಡೊಳ್ಳು ಕುಣಿತ, ಪೂಜಾ ಕುಣಿತ, ಗೊಂಬೆ ಕುಣಿತ ಸೇರಿದಂತೆ ಜನಪದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಜಾತ್ರಾ ಮಹೋತ್ಸವ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಪೂಜಾ ಕೈಂಕರ್ಯಗಳು ಜರುಗಿದವು, ದೇವರಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿತ್ತು.
ಇದೇ ವೇಳೆ ಮಾತನಾಡಿದ ದೇವಾಲಯದ ಪ್ರಧಾನ ಅರ್ಚಕ ಕಾಚಹಳ್ಳಿ ನಾರಾಯಣಪ್ಪ, ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ, ಮಳೆಯಿಲ್ಲದೆ ರೈತರು ಸಂಕಷ್ಟ ಸಿಲುಕಿದ್ದಾರೆ, ಕುಡಿಯುವ ನೀರಿಗೂ ಅಭಾವವಿದ್ದು, ರಾಜ್ಯದಲ್ಲಿ ಉತ್ತಮ ಮಳೆಯಾಗುವಂತೆ ದೇವರಲ್ಲಿ ಪ್ರಾರ್ಥಿಸಿ ಶ್ರದ್ಧಾಭಕ್ತಿಯಿಂದ ಒಂದು ತಿಂಗಳಿಂದ ಪೂಜಾ ಪುನಾಸ್ಕಾರ ಹಾಗೂ ಧಾರ್ಮಿಕ ಕಾರ್ಯಗಳು ನಡೆಸಿಕೊಂಡು ಬಂದಿದ್ದು, ಭಾನುವಾರ ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ದೇವರ ಉತ್ಸವ ನಡೆಯಿತು ಎಂದರು.
ಶಾಸಕ ಧೀರಜ್ ಮುನಿರಾಜು, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಕೃಷ್ಣಮೂರ್ತಿ, ಶ್ರೀ ಸಿದ್ಧರಾಮೇಶ್ವರ ಮತ್ತು ಶ್ರೀ ಸಿದ್ದೇಶ್ವರ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಕೃಷ್ಣಪ್ಪ ಬೆಂಗಳೂರು, ರಾಮಚಂದ್ರಪ್ಪ ಚಿಕ್ಕಬಳ್ಳಾಪುರ, ಮುನಿನಂಜಪ್ಪ ದೇವನಹಳ್ಳಿ, ಕೇಬಲ್ ಮಂಜುನಾಥ, ಕೃಷ್ಣಮೂರ್ತಿ, ಮುನಿರಾಜು, ಹಾಗೂ ತೂಬಗೆರೆ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಪ್ಪ, ಮುನಿಕೃಷ್ಣಪ್ಪ ಮುಖಂಡರಾದ ಪ್ರತಾಪ್, ಉದಯ ಆರಾಧ್ಯ ಮತ್ತಿತರರು ಇದ್ದರು.