ವಿಜಯಪುರದ ಬಸವ ಕಲ್ಯಾಣ ಮಠದಲ್ಲಿ 38ನೇ ವರ್ಷದ ಕಡ್ಲೆಕಾಯಿ ಪರಿಷೆ

ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ ಕೆಲಸ ಮಾಡಬೇಕಿದೆ ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಶ್ರೀಗಳಾದ ಡಾ. ಮಹದೇವಸ್ವಾಮೀಜಿ ಅವರು ಹೇಳಿದರು.

ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದ ಮೇಲೂರು ರಸ್ತೆಯಲ್ಲಿರುವ ಶ್ರೀ ಬಸವ ಕಲ್ಯಾಣ ಮಠದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ಪ್ರಯುಕ್ತ ಆಯೋಜಿಸಿದ್ದ “ಶಿವಪಂಚಾಕ್ಷರಿ ಮಹಾಮಂತ್ರ ಅಖಂಡ ಭಜನೆಯ ಸಮಾರೋಪ ಹಾಗೂ 38ನೇ ವರ್ಷದ ಕಡ್ಲೆಕಾಯಿ ಪರಿಷೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆಧ್ಯಾತ್ಮಿಕ, ಪ್ರವಚನ ಆಲಿಸುವುದರಿಂದ ನಮ್ಮಲ್ಲಿರುವ ನಕಾರಾತ್ಮಕ ಮನೋಭಾವ ತೊಲಗಿಸಿ, ಸಕಾರಾತ್ಮಕ ಮನೋಲ್ಲಾಸ ಸಂಪಾದಿಸಲು ಸಾಧ್ಯವಾಗುತ್ತದೆ ಎಂದು ಶ್ರೀಗಳು ಆಶಿರ್ವಚನ ನೀಡಿದರು.

ಮುಖ್ಯ ಅತಿಥಿಗಳಾದ ದೇವನಹಳ್ಳಿ ನಿವೃತ್ತ ತಹಶೀಲ್ದಾರ್ ಹೆಚ್. ಬಾಲಕೃಷ್ಣ ಅವರು ಮಾತನಾಡಿ, ಸಮಾಜದಲ್ಲಿ ಸಾಮರಸ್ಯ, ಪರಿವರ್ತನೆ ತರುವಲ್ಲಿ ಮಠ-ಮಾನ್ಯಗಳ ಪಾತ್ರ ಅಪಾರವಾದುದ್ದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಸದ್ವಿಚಾರ ತಿಳಿಯುವ ಜತೆಗೆ ಜೀವನದಲ್ಲಿ ನೆಮ್ಮದಿ ಪಡೆಯಲು ಸಹಕಾರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಓಂತಾರಾಶ್ರಮದ ಕಾಳಿತನಯ ಉಮಾ ಮಹೇಶ್ವರ ಶ್ರೀಗಳು, ಶ್ರೀಮಠದ ಕಿರಿಯ ಶ್ರೀಗಳಾದ ಸದಾಶಿವ ಸ್ವಾಮಿಜೀಯವರು ದಿವ್ಯಸಾನಿಧ್ಯ ವಹಿಸಿದ್ದರು.

ಇದಕ್ಕೂ ಮುನ್ನ ಹೋಮ ಹವನ ಹಾಗೂ ಧಾರ್ಮಿಕ ಕಾರ್ಯಕ್ರಮ ನಡೆಸಿ, ಶ್ರೀಮಠದ ಸಾವಿರಾರು ಭಕ್ತರಿಗೆ ಅನ್ನ ಪ್ರಸಾದ ಜತೆಗೆ 35 ಕ್ವಿಂಟಲ್ ಕಡ್ಲೆಕಾಯಿ ಪ್ರಸಾದ ವಿತರಣೆ ಮಾಡಲಾಯಿತು.

ಮೂರು ದಿನ ನಿರಂತರ ಜರುಗಿದ ಶಿವಪಂಚಾಕ್ಷರಿ ಮಹಾಮಂತ್ರ ಅಖಂಡ ಭಜನೆ ಸಮಾರಂಭಕ್ಕೆ ತೆರೆ ಎಳೆಯಲಾಯಿತು. ಇದೇ ವೇಳೆ ಶ್ರೀಮಠದಿಂದ 2026 ನೇ ವರ್ಷದ ನೂತನ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ದೊಡ್ಡಹುಲ್ಲೂರಿನ ಸ್ಟಾಂಪ್ ವೆಂಡರ್ ನಾರಾಯಣಸ್ವಾಮಿ, ಕನಕಪುರದ ಎಂ.ಎನ್.ಸಿ ಕಂಪನಿ ಸಾಫ್ಟ್ ವೇರ್ ಇಂಜಿನಿಯರ್ ಜಗದೀಶ್, ಹೊಸಕೋಟೆ ತಾ.ಪಂ ಮಾಜಿ ಅಧ್ಯಕ್ಷ ಟಿ.ಎಸ್ ರಾಜಶೇಖರ್, ವಿಜಯಪುರದ ಸಾಹಿತಿ ಸುರೇಶ್ ಬಾಬು, ಶ್ರೀಮಠದ ಸದಸ್ಯರಾದ ಪುರ ಗ್ರಾಮದ ನಂಜುಂಡಪ್ಪ, ಅಂಕದಟ್ಟಿ ನಾರಾಯಣಸ್ವಾಮಿ, ದಾಕ್ಷಾಯಣಮ್ಮ, ಪಿ.ಸಿ ಜಯಕುಮಾರ್, ಬಸವರಾಜ ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!