ನಿನ್ನೆ ನಡೆದ ಸಣ್ಣ ರಸ್ತೆ ಜಗಳವೊಂದನ್ನು ಭಾಷಾ ಸಂಘರ್ಷವೆಂಬಂತೆ ಬಿಂಬಿಸುವ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಯತ್ನ ನಿಜಕ್ಕೂ ನಾಚಿಕೆಗೇಡು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
ಕನ್ನಡ ಭಾಷೆ ಹಾಗೂ ಕನ್ನಡಿಗರ ಮೇಲೆ ಈ ರಾಷ್ಟ್ರೀಯ ಮಾಧ್ಯಮಗಳಿಗ್ಯಾಕೆ ಇಷ್ಟೊಂದು ದ್ವೇಷ? ಘಟನೆಯ ಪೂರ್ವಾಪರ ತಿಳಿಯದೇ ಅತಿರೇಕದ ವರದಿ ಮಾಡಿದ್ದು ಯಾವ ಸೀಮೆ ವೃತ್ತಿ ಧರ್ಮ? ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಹಲ್ಲೆಗೊಳಗಾದ ಕನ್ನಡಿಗ ವಿಕಾಸ್ ಕುಮಾರ್ ಒಬ್ಬ ಸಾಮಾನ್ಯ ಗಿಗ್ ಕಾರ್ಮಿಕ. ಜಗಳಕ್ಕೆ ಕಾರಣ ಏನೇ ಇರಲಿ, ಬಡಪಾಯಿ ಗಿಗ್ ಕಾರ್ಮಿಕನ ಮೇಲೆ ಶಿಲಾದಿತ್ಯ ಬೋಸ್ ಎರಗಿ ದಾಳಿ ಮಾಡಿದ ರೀತಿ ಮಾತ್ರ ಅಕ್ಷಮ್ಯ ಎಂದು ಹೇಳಿದ್ದಾರೆ.
ಕನ್ನಡಿಗ ಗಿಗ್ ಕಾರ್ಮಿಕ ವಿಕಾಸ್ ಕುಮಾರ್ ಗೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ತಪ್ಪಿತಸ್ಥ ಶಿಲಾದಿತ್ಯ ಬೋಸ್ ಹಾಗೂ ಅವರ ಪತ್ನಿ ಎಂಥದ್ದೇ ಹುದ್ದೆಯಲ್ಲಿರಲಿ, ಸೂಕ್ತ ಕಾನೂನು ಕ್ರಮ ಜರುಗಿಸದೇ ಬಿಡುವುದಿಲ್ಲ ಎಂದಿದ್ದಾರೆ.
ಹಾಗೆಯೇ ವಿಂಗ್ ಕಮಾಂಡರ್ ಶಿಲಾದಿತ್ಯ ಬೋಸ್ ಎಸಗಿದ ಇಂತಹ ಕೃತ್ಯದಿಂದ ನಮ್ಮೆಲ್ಲರ ಹೆಮ್ಮೆಯ ಭಾರತೀಯ ವಾಯುಪಡೆಯ ಘನತೆ ಕುಗ್ಗದಿರಲಿ. ಪೂರ್ವಾಪರ ತಿಳಿದು ವರದಿ ಮಾಡುವ ವಿವೇಚನೆ ರಾಷ್ಟ್ರೀಯ ಮಾಧ್ಯಮಗಳಿಗೂ ಬರಲಿ ಎಂದು ತಿಳಿಸಿದ್ದಾರೆ.