ಬೆಳಗಿನ 10 ಗಂಟೆಗೆಲ್ಲಾ ಸುಡು ಬಿಸಿಲು. ಸೂರ್ಯ ಶಾಖ ಮೈ ಸುಡುತ್ತಿದೆ. ಬೆವರ ಹನಿಗಳನ್ನು ಒರೆಸಿಕೊಳ್ಳುತ್ತಾ ಒಂದು ಚಡ್ಡಿ ಮತ್ತು ಬನಿಯನ್ ಹಾಕಿಕೊಂಡು, ನನ್ನ ಎಂದಿನ ಟೂಲ್ ಕಿಟ್, ಊಟ, ನೀರು, ಇರೋ ತೂಕದ ಬ್ಯಾಗನ್ನು ಬೆನ್ನಿಗೇರಿಸಿ ಹತ್ತುತ್ತಿದ್ದೇನೆ. ಹೈಟೆನ್ಷನ್ ವಿದ್ಯುತ್ ಕಂಬವನ್ನು……
ನಗರದ ಒಂದು ಜನನಿಬಿಡ ಪ್ರದೇಶದಲ್ಲಿ ಈ ಬೃಹತ್ ವಿದ್ಯುತ್ ಕಂಬ ಹಾದು ಹೋಗುತ್ತದೆ. ಅದಕ್ಕೆ ಫಿಕ್ಸ್ ಮಾಡಿರುವ ನೆಟ್ಟು ಬೋಲ್ಟ್‌ಗಳನ್ನು ಮೊದಲ ಹಂತದಲ್ಲಿ ತಿರುವಿ ಟೈಟ್ ಮಾಡುವ ಕೆಲಸದ ಸಹಾಯಕ ನಾನು.
ಸುಮಾರು ಮೂರು ತಿಂಗಳಿನಿಂದ ಕೆಲಸ ನಡೆಯುತ್ತಿದೆ. ಈಗ ಹೆಚ್ಚು ಕಡಿಮೆ ಅದರ ತುತ್ತ ತುದಿಗೆ ಹೋಗುತ್ತಿದ್ದೇನೆ. ಭಾರಿ ಎತ್ತರದಲ್ಲಿದೆ. ನನಗೆ ಇದೆಲ್ಲಾ ಮಾಮೂಲು.
ಆದರೆ ಇವತ್ಯಾಕೋ ಬಹಳ ಕಷ್ಟವೆನಿಸುತ್ತಿದೆ.
ಮೂರು ದಿನದ ಹಿಂದೆಯಷ್ಟೇ ಹೊಟ್ಟೆ ನೋವು ಜಾಸ್ತಿಯಾಗಿತ್ತು. ಕೆಲಸ ಮುಗಿಸಿ ಸಂಜೆ ಮನೆಗೆ ಹೋಗುವಾಗ ಆಸ್ಪತ್ರೆಗೆ ಹೋಗಿದ್ದೆ. ಎಲ್ಲಾ ಚೆಕ್ ಮಾಡಿ ರಕ್ತವನ್ನು ಪರೀಕ್ಷೆಗೆ ತೆಗೆದುಕೊಂಡು ನೋವು ಕಡಿಮೆಯಾಗಲು ಮಾತ್ರೆ ಕೊಟ್ಟು ಬೆಳಗ್ಗೆ ಬರಲು ಹೇಳಿದರು. ಆದರೆ ಆ ದಿನ ಬೆಳಗ್ಗೆ ಲೇಟಾಗಿ ಎದ್ದಿದ್ದರಿಂದ ನೇರವಾಗಿ ಕೆಲಸಕ್ಕೆ ಬಂದೆ.
ನಿನ್ನ ಸಂಜೆ ಮತ್ತೆ ಡಾಕ್ಟರ್ ಬಳಿ ಹೋಗಿದ್ದೆ. ಅವರು ನಿನಗೆ ಅಪೆಂಡಿಸೈಟಿಸ್ ಅಂತ ಏನೋ ಹೊಟ್ಟೆಯಲ್ಲಿ ಆಗಿದೆ. ಆದಷ್ಟು ಬೇಗ ಆಪರೇಷನ್ ಮಾಡಿಸಿಕೊಳ್ಳಬೇಕು. ಭಾರ ಎತ್ತುವ ಕೆಲಸ ಮಾಡಲೇಬಾರದು. ಅದು ಜೀವಕ್ಕೆ ಅಪಾಯ. ಹಣ ಹೊಂದಿಸಿಕೊಂಡು ಬೇಗ ಬಾ ಎಂದು ಇನ್ನೊಂದಿಷ್ಟು ಮಾತ್ರೆ ಬರೆದುಕೊಟ್ಟರು.
ಹೂಂ, ಡಾಕ್ಟರೇನೋ ಹೇಳಿದರು. ಸದ್ಯ ಹಣ ಎಲ್ಲಿ. ಇನ್ನೂ ಈ ತಿಂಗಳ ಸಂಬಳ ಕೊಟ್ಟಿಲ್ಲ. ಅಮ್ಮನಿಗೂ ಹುಷಾರಿಲ್ಲ. ಈಗ ನಾನೇನಾದರೂ ಅಪೆಂಡಿಸೈಟಿಸ್ ಅಂತ ಹೇಳಿದರೆ ನಮ್ಮ ಕಂಟ್ರಾಕ್ಟರ್ ಸಂಬಳ ಕೊಡೋದು ಇರಲಿ ಕೆಲಸದಿಂದಲೇ ತೆಗೆಯುತ್ತಾನೆ. ಇರಲಿ ಮುಂದೆ ನೋಡೋಣ. ಇಂದು ಈ ನೋವಿನಲ್ಲೆ ಇವತ್ತು ಕೆಲಸಕ್ಕೆ ಬಂದಿದ್ದೇನೆ. ಡಾಕ್ಟರ್ ಕೊಟ್ಟ ಮಾತ್ರೆ ನುಂಗಿದ್ದಕ್ಕೊ ಏನೋ ಸುಸ್ತು ಜಾಸ್ತಿ ಆಗ್ತಿದೆ. ಆದರೂ ಶಕ್ತಿ ತುಂಬಿಕೊಂಡು ಸ್ವಲ್ಪ ಸ್ವಲ್ಪವೇ ಮೇಲಕ್ಕೆ ಹತ್ತುತ್ತಿದ್ದೇನೆ.
ನಮ್ಮಪ್ಪ ನಗರಸಭೆಯಲ್ಲಿ ಜಾಡಮಾಲಿಯಾಗಿದ್ದ. ನನಗೆ ಜ್ಞಾಪಕ ಇರುವಂತೆ ನಾನಿನ್ನೂ ಚಿಕ್ಕವನಿರುವಾಗಲೇ ಹೆಂಡ ನಮ್ಮಪ್ಪನನ್ನು ಕುಡಿಯುತ್ತಿತ್ತು. ನಮ್ಮಪ್ಪ ಮನೆಗಿಂತ ರಸ್ತೆಗಳಲ್ಲಿ ಮಲಗುತ್ತಿದ್ದುದೇ ಹೆಚ್ಚು.
ನನಗಾಗ 6 ವರ್ಷ. ಇನ್ನೇನು ಸ್ಕೂಲಿಗೆ ಸೇರಿಸಬೇಕು ಅಷ್ಟೊತ್ತಿಗೆ ನಮ್ಮಪ್ಪ ಸತ್ತುಹೋದ. ಇನ್ನೆಲ್ಲಿಯ ಸ್ಕೂಲು. ನಮ್ಮಮ್ಮ ನೇರವಾಗಿ ಆಗಲೇ ನನ್ನನ್ನು ಒಂದು ಸ್ಯೆಕಲ್ ಶಾಪಿಗೆ ಕೆಲಸಕ್ಕೆ ಸೇರಿಸಿದಳು. ಅದು ಒಬ್ಬ ಸಾಬರದು. ಆತ ಸ್ವಲ್ಪ ತಪ್ಪು ಮಾಡಿದರೂ ಕೈಗೆ ಸಿಕ್ಕಿದ ವಸ್ತುವಿನಿಂದ ಬರೆ ಬರುವಂತೆ ಭಾರಿಸುತ್ತಿದ್ದ. ಬೆಳಗ್ಗೆ 8 ಗಂಟೆಯಿಂದ ರಾತ್ರಿ 9 ರ ವರೆಗೂ ಕೆಲಸ. ಅವರ ಮನೆಯಿಂದಲೇ ಊಟ ತಿಂಡಿ ಎಲ್ಲಾ. ವಾರಕ್ಕೆ 3 ಸಲವಾದರೂ ಚಿಕನ್ ಇರುತ್ತಿತ್ತು. ಅದೇ ಖುಷಿ. ಸಂಬಳ ತಿಂಗಳಿಗೆ 500.
ಹೇಗೋ 5 ವರ್ಷ ಕಳೆಯಿತು. ಆಗ ಸಂಬಳ 1000 ಆಗಿತ್ತು. ಒಂದು ದಿನ ಸೈಕಲ್ ರಿಪೇರಿ ಮಾಡಿಸಲು ಬಂದಿದ್ದ ಒಬ್ಬ ನಮ್ಮ ಯಾಜಮಾನ ಇಲ್ಲದೇ ಇರುವಾಗ ನನ್ನನ್ನು ನೋಡಿ ಸಂಬಳ ಎಷ್ಟು ಎಂದು ಕೇಳಿದ. ನಾನು 1000 ಎಂದೆ. ಹಾಗಾದರೆ ನಾನು 2000 ಕೊಡುತ್ತೇನೆ ನನ್ನ ಬಳಿ ಕೆಲಸ ಮಾಡು ಎಂದ. ಸರಿ ಈ ಕೆಲಸ ಬಿಟ್ಟು ಹತ್ತಿರದಲ್ಲೇ ಇದ್ದ ಅವರ Weldding shop ಗೆ ಸೇರಿದೆ.
ಕೆಲಸ ತುಂಬಾ ಕಷ್ಟ ಎನಿಸಿತು. ಆದರೆ ಸಂಬಳ ಹೆಚ್ಚಾಗಿದ್ದುದರಿಂದ ಅಲ್ಲೇ ಕೆಲಸ ಮಾಡುತ್ತಿದ್ದೆ. ಕೆಲವು ಸಾರಿ ಹೊಸ ಮನೆಯ ಗೇಟ್ ಗಳನ್ನು ವೆಲ್ಡಿಂಗ್ ಮಾಡುವಾಗ ಮನೆ ಯಜಮಾನರು 50/100 ಕೊಡೋರು. ಹೀಗೆ 8 ವರ್ಷ ಕಳೆಯಿತು. ಅಮ್ಮನನ್ನು ನಾನೇ ಸಾಕುತ್ತಿದ್ದೆ.
ಒಂದು ದಿನ ಹೊಸ ಮನೆಯ ಗೇಟ್ ವೆಲ್ಡಿಂಗ್ ಮಾಡುತ್ತಿದ್ದೆ. ಆ ಮನೆಯ ಓನರ್ ಒಬ್ಬ ಮೇಸ್ತ್ರಿ. ನನ್ನ ಕೆಲಸದ ಶ್ರದ್ಧೆ ನೋಡಿ ಒಬ್ಬ Electrical Contractor ಹತ್ತಿರ ಕೆಲಸ ಮಾಡು ಸಂಬಳ 8000 ಕೊಡಿಸುತ್ತೇನೆ ಎಂದ. ಸರಿ ಜಾಸ್ತಿ ದುಡ್ಡಿನ ಆಸೆಗೆ ವೆಲ್ಡಿಂಗ್ ಕೆಲಸ ಬಿಟ್ಟು ಈ ಕೆಲಸ ಮಾಡುತ್ತಿದ್ದೇನೆ.
ಸುಮಾರು 6 /7 ವರ್ಷವಾಯಿತು. ಸಂಬಳ ಪರವಾಗಿಲ್ಲ, ಆದರೆ ಕೆಲಸ ಕಷ್ಟ ಮತ್ತು ಅಪಾಯಕಾರಿ. ಆದರೂ ಹೊಟ್ಟೆಪಾಡಿಗಾಗಿ ಮಾಡಲೇಬೇಕಲ್ವ. ಕಂಬ ಹತ್ತಿ ಮೇಲೆ ಹೋದರೆ ಇಳಿಯುವುದು ಸಂಜೆಗೆ. ಅದಕ್ಕೆ ಊಟ ನೀರು ಜೊತೆಯಲ್ಲೇ ತೆಗೆದುಕೊಂಡು ಹೋಗುತ್ತೇನೆ. ನನಗೀಗ 25 ವರ್ಷ.
ಅಂತೂ ಇಂತೂ ಹೊಟ್ಟೆ ನೋವಿನಲ್ಲೇ ಮೇಲಕ್ಕೆ ಬಂದೆ. ಸುಸ್ತು ಜಾಸ್ತಿಯಾಗಿತ್ತು. ಸೇಪ್ಟಿಗಾಗಿ ಕಟ್ಟಿದ್ದ ಹಗ್ಗ ಬಿಚ್ಚಿ ಬ್ಯಾಗಿನಿಂದ ಬಿಸ್ಕತ್ ಪ್ಯಾಕ್ ತೆಗೆದು ಸ್ವಲ್ಪ ಸುಧಾರಿಸಿಕೊಳ್ಳೋಣ ಎಂದು ಕಂಬಿಯ ಮೇಲೆ ಬ್ಯಾಲೆನ್ಸ್ ಮಾಡಿಕೊಂಡು ಕುಳಿತೆ. ನೋವಿನಿಂದ ಜ್ವರ ಬಂದಹಾಗಾಗಿತ್ತು. ಮನಸ್ಸು ಎಲ್ಲೆಲ್ಲೋ ಹರಿದಾಡುತ್ತಿತ್ತು.
ಕೆಳಗೆ ನೋಡಿದೆ. ಗಿಜಿಗುಡುವ ಜನ, ವೆಹಿಕಲ್ ಗಳು, ಹೋಟೆಲ್ ಗಳು, ಜೊತೆಗೆ ಅಲ್ಲೊಂದು ದೊಡ್ಡ ಪಾರ್ಕ್ ಇತ್ತು. ಅಲ್ಲಿ ನಾಲ್ಕಾರು ಯುವ ಜೋಡಿಗಳು ಕುಳಿತಿದ್ದವು. ಕೆಲವರು ನಗುನಗುತ್ತಾ ಮಾತನಾಡುತ್ತಿದ್ದರೆ, ಮತ್ತೆ ಕೆಲವರು ತಬ್ಬಿಕೊಂಡು ಹೇಗೆಹೇಗೋ ಆಡುತ್ತಿದ್ದರು. ಒಬ್ಬ ಹುಡುಗಿಯಂತೂ ಕುಳಿತಿದ್ದ ತನ್ನ ಬಾಯ್ ಫ್ರೆಂಡ್ ನ ತೊಡೆಯ ಮೇಲೆ ತಲೆ ಇಟ್ಟು ಮಲಗಿ ಅಳುತ್ತಿದ್ದ ಅವನನ್ನು ಸಮಾಧಾನ ಮಾಡುತ್ತಿದ್ದಳು. ಇದನ್ನೆಲ್ಲ ಮೇಲಿನಿಂದ ನೋಡುತ್ತಿದ್ದ ನನಗೆ ಎಂದೂ ಇಲ್ಲದ ಒಂಥರಾ ಅನುಭವ ಆಗತೊಡಗಿತು.
ಸದಾ ಮೈಮುರಿಯುವಂತೆ ದುಡಿದು ರಾತ್ರಿ ಊಟ ಮಾಡಿ ಮಲಗಿದರೆ ಬೆಳಗ್ಗೆ ಅಮ್ಮ ಕೂಗಿದಾಗಲೇ ಜೀವ ಬರುತ್ತಿದ್ದುದು. ಅದರಲ್ಲೂ ಈ ತರಹದ ಯೋಚನೆಗಳಿಗೆ ಸಮಯವೇ ಇರುತ್ತಿರಲಿಲ್ಲ. ಆದರೆ ಇಂದು ಯಾಕೋ ಮನಸ್ಸು ವಿಲವಿಲನೆ ಒದ್ದಾಡಿದಂತಾಯಿತು. ನನಗೂ ಒಬ್ಬ ಸಂಗಾತಿ ಬೇಕೆನಿಸಿತು. ನಾನೂ ಮದುವೆಯಾಗಬೇಕು. ನನಗೆ ದಿನವೂ ರುಚಿರುಚಿಯಾದ ಅಡುಗೆ ಮಾಡಿ ಬುತ್ತಿ ಕಟ್ಟಿಕೊಡುವ ಹೆಂಡತಿ ಬೇಕು. ಸಂಜೆ ಮನೆಗೆ ಹಿಂದಿರುಗಿದಾಗ ಬಾಗಿಲಲ್ಲೇ ನನ್ನ ಸ್ವಾಗತಿಸಿ ಮುತ್ತು ಕೊಟ್ಟು ಕಾಫಿ ಮಾಡಿಕೊಡುವ ಜೊತೆಗಾತಿ ಬೇಕು. ರಾತ್ರಿ ಮಲಗಿದಾಗ ನನ್ನ ಕಷ್ಟ ವಿಚಾರಿಸುವ, ನನ್ನ ನೋವಿಗೆ ಮರುಗುವ, ನನಗಾಗಿ ತನ್ನನ್ನೇ ಅರ್ಪಿಸಿಕೊಳ್ಳುವ ಹೆಣ್ಣು ಬೇಕು. ಹಬ್ಬ ಹರಿದಿನಗಳಲ್ಲಿ ನಾವಿಬ್ಬರೂ ಜೊತೆಯಾಗಿ ಹೊಸ ಬಟ್ಟೆ ತೊಟ್ಟು ಸಂಭ್ರಮದಿಂದ ಒಳ್ಳೆಯ ಊಟ ಮಾಡಬೇಕು. ಆಕೆಗೆ ನಾನೆಂದೂ ನೋವು ಕೊಡಬಾರದು. ನಮಗೆ ಹುಟ್ಟುವ ಮಗುವಿಗೆ ಚೆಂದದ ಮಾಡ್ರನ್ ಹೆಸರಿಡಬೇಕು. ಎಷ್ಟೇ ಕಷ್ಟ ಆದರೂ ಮಗುವಿಗೆ ಒಳ್ಳೆಯ ಶಾಲೆಗೆ ಸೇರಿಸಿ ವಿದ್ಯೆ ಕೊಡಿಸಬೇಕು. ಜೀವನದಲ್ಲಿ ಒಮ್ಮೆಯಾದರೂ ಅಮ್ಮನನ್ನೂ ಜೊತೆಗೆ ಕರೆದುಕೊಂಡು ಇಡೀ ಕುಟುಂಬ ತಿರುಪತಿ ವೆಂಕಟರಮಣ ಸ್ವಾಮಿಯ ದರ್ಶನ ಮಾಡಬೇಕು.
ಹೀಗೆ ಕನಸಿನ ಲೋಕದಲ್ಲಿ ತೇಲುತ್ತಾ ಇದ್ದ ನನಗೆ ತಲೆ ತಿರುಗಿದಂತಾಯಿತು. ಸೇಫ್ಟಿ ಹಗ್ಗ ಬೇರೆ ಬಿಚ್ಚಿಟ್ಟಿದ್ದೆ. ಗಾಬರಿಯಿಂದ ಸಿಕ್ಕಿದ ಆಸರೆ ಹಿಡಿಯಲು ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ಬ್ಯಾಲೆನ್ಸ್ ತಪ್ಪಿತು .
ಆ ……ಅಮ್ಮಾ …….ಅಯ್ಯೋ ……..ಅಯ್ಯಯ್ಯೋ ……..
ಮುಂದಿನ ಅರ್ಧ ಗಂಟೆಯಲ್ಲಿ ಟಿವಿ ಚಾನಲ್ ಗಳಲ್ಲಿ,
BREAKING NEWS…..
ಪ್ರೇಮ ವೈಫಲ್ಯ, ಹೈಟೆನ್ಷನ್ ವಿದ್ಯುತ್ ಕಂಬದಿಂದ ಬಿದ್ದು ನಗರ ಮಧ್ಯಭಾಗದಲ್ಲೇ ಯುವಕನೋರ್ವನ ಆತ್ಮಹತ್ಯೆ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ