ವಾಲ್ಮೀಕಿ ಸಮುದಾಯದ ಮುಖಂಡನ ಮೇಲೆ ಹಲ್ಲೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೊಸಕೋಟೆ: ಚಿಂತಾಮಣಿ ಪಟ್ಟಣದಲ್ಲಿ ಮಹರ್ಷಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ನಗರಸಭೆ ಸದಸ್ಯ ಮುರಳಿ ಎಂಬುವವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು, ಕೂಡಲೇ ಸಂಬಂಧಪಟ್ಟ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಾಲ್ಮೀಕಿ ನಾಯಕ ಯುವಪಡೆ ಸಂಘಟನೆ ರಾಜ್ಯಾಧ್ಯಕ್ಷ ಸುಬ್ರಮಣಿ ಹೇಳಿದರು.

ರಾಜ್ಯ ವಾಲ್ಮೀಕಿ ನಾಯಕ ಯುವ ಪಡೆ, ವಾಲ್ಮೀಕಿ ನಾಯಕ ಗಿರಿಜನ ಯುವ ಸಂಘ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ನಗರದ ತಾಲೂಕು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಚಿಂತಾಮಣಿ ನಗರದಲ್ಲಿ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಜನ‌ ಪ್ರತಿನಿಧಿ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.  ಹಲ್ಲೆಗೊಳಗಾದ ಮುರಳಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ವಾಲ್ಮೀಕಿ ಸಮುದಾಯದ ನಾಯಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ಅದಲ್ಲದೇ ಆರೋಪಿಗಳನ್ನು ಪತ್ತೆ ಹಚ್ಚಿ ಸದ್ಯದಲ್ಲಿಯೇ ರಾಜ್ಯದಲ್ಲಿ ವಾಲ್ಮೀಕಿ ಸಮಾಜಕ್ಕೆ ಸೂಕ್ತ ರಕ್ಷಣೆ ನೀಡಬೇಕು ಎಂದು ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ವಾಲ್ಮೀಕಿ ನಾಯಕ ಗಿರಿಜನ ಸಂಘದ ಜಿಲ್ಲಾಧ್ಯಕ್ಷ ಕ್ಷಬನಹಳ್ಳಿ ರಮೇಶ್ ಮಾತನಾಡಿ, ಚಿಂತಾಮಣಿ ನಗರದಲ್ಲಿ ನಗರಸಭೆ ಸದಸ್ಯ ಮುರಳಿ ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಖಂಡಿಸಿ ಅಕ್ಟೋಬರ್ 18 ರಂದು ಚಿಂತಾಮಣಿ ಬಂದ್‌ಗೆ ಕರೆ ನೀಡಲಾಗಿದೆ.  ನಮ್ಮ ವಾಲ್ಮೀಕಿ ಸಮುದಾಯದ ಎಲ್ಲಾ ಸಂಘಟನೆಗಳು ಕೂಡ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದು, ಚಿಂತಾಮಣಿಗೆ ತೆರಳಿ ಪ್ರತಿಭಟನೆ ನಡೆಸುತ್ತೇವೆ.  ಸಮಾಜದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದರು.

ಈ ವೇಳೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಂಘದ ರಾಜ್ಯಾಧ್ಯಕ್ಷ ಬೆಳ್ಳೂರು ಆಂಜಿನಪ್ಪ, ವಾಲ್ಮೀಕಿ ನಾಯಕ ಗಿರಿಜನ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೊಟ್ಟಿಪುರ ಶ್ರೀನಿವಾಸ್, ಹಿರಿಯ ಮುಖಂಡ ತಾವಟಹಳ್ಳಿ ಮುನಿಯಪ್ಪ ಸೇರಿದಂತೆ ಸಮಾಜದ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *