
ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದ್ದ ವಾಲ್ಮೀಕಿ ಭವನಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅನುದಾನದಲ್ಲಿ ವಾಲ್ಮೀಕಿ ಭವನದ ಕಟ್ಟಡವನ್ನು ಸಂಪೂರ್ಣಗೊಳಿಸಲು 24 ಲಕ್ಷ ರೂ. ನೀಡಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಾಲ್ಮೀಕಿ ಸಂಘದ ವತಿಯಿಂದ ನಡೆದ ಮಹರ್ಷಿ ವಾಲ್ಮೀಕಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ಮಹರ್ಷಿಗಳ ಜೀವನದ ಮೌಲ್ಯಗಳೇ ಸಮಾಜಕ್ಕೆ ಮಾದರಿಯಾಗಿದೆ. ಒಬ್ಬ ಮನುಷ್ಯ ಆದರ್ಶನಾಗಿ ಜೀವನ ನಡೆಸಲು ಮಹರ್ಷಿಗಳ ಜೀವನವೇ ಒಂದು ಉದಾಹರಣೆಯಾಗಿದೆ. ಮಹರ್ಷಿ ವಾಲ್ಮೀಕಿಯು ಮಾನವೀಯ ಮೌಲ್ಯಗಳನ್ನು ಜಗತ್ತಿಗೆ ಎತ್ತಿ ತೋರಿಸಿದ್ದಾರೆ. ಸಚ್ಚಾರಿತ್ರ‍್ಯ, ಸದ್ಭಾವನಾಶೀಲ ರಾಮ, ಲಕ್ಷ್ಮಣ ಮತ್ತು ಸೀತೆಯನ್ನು ಪರಿಚಯಿಸಿದ ವಾಲ್ಮೀಕಿ ಅವರ ಜೀವನವೇ ಉನ್ನತ ಮೌಲ್ಯಗಳಿಂದ ಕೂಡಿದೆ. ವಾಲ್ಮೀಕಿ ರಾಮಾಯಣವು ಎಲ್ಲಾ ವರ್ಗಕ್ಕೂ ಆದರ್ಶವಾದ ಗ್ರಂಥ. ಪಿತೃವಾಕ್ಯಕ್ಕೆ ಬದ್ಧನಾಗಿ ರಾಮ ಜೀವನದ ಎಲ್ಲ ಮಜಲುಗಳನ್ನು ದಾಟಿ ಪುಣ್ಯ ಪುರುಷೋತ್ತಮನಾಗಿದ್ದಾನೆ. ಈ ರಾಮಾಯಣ ಕಾವ್ಯ ನಿರಂತರ ಮೌಲ್ಯಗಳನ್ನು ನೀಡುವಲ್ಲಿ ಯಶಸ್ಸು ಗಳಿಸಿದೆ. ಮನುಷ್ಯ ಮನುಷ್ಯನಾಗಿ ಬದುಕುವ ಕಲೆಯನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಅಧ್ಯಕ್ಷ ಮುನಿಕೃಷ್ಣಪ್ಪ ಮಾತನಾಡಿ, ಸಾಮಾನ್ಯ ಮನುಷನಾಗಿದ್ದ ವ್ಯಕ್ತಿಯೊಬ್ಬ ರಾಮಾಯಣದಂತ ಮಹಾಕಾವ್ಯವನ್ನು ರಚಿಸಿದ್ದು ರೋಚಕ ಜತೆಗೆ ಅಗಾಧ ಸಾಧನೆಯಾಗಿದೆ. ಅವರ ಜೀವನ ಸಂದೇಶ ಹಾಗೂ ಪ್ರತಿಪಾದಿಸಿದ ತತ್ತ್ವಗಳು ನಾಡಿನ ಎಲ್ಲೆಡೆ ಪಸರಿಸಬೇಕು. ವಾಲ್ಮೀಕಿ ಅವರ ವಿಚಾರಧಾರೆಗಳು ಉನ್ನತವಾಗಿದ್ದವು. ಬುದ್ದ, ಬಸವ, ಅಂಬೇಡ್ಕರ್ ಮತ್ತು ವಾಲ್ಮೀಕಿ ಅವರಂತ ಮಹಾನ್ ಪುರುಷರನ್ನು ಜಾತಿ, ಸಮುದಾಯಗಳಿಗೆ ಮೀಸಲುಗೊಳಿಸದೇ ಎಲ್ಲ ಜನರು ಕೂಡಿ ಅವರ ಜಯಂತಿಗಳನ್ನು ಆಚರಿಸಿ, ಅವರ ಜೀವನ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಮುದಾಯದ ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಸದಸ್ಯ ಓಬದೇನಹಳ್ಳಿ ಮುನಿಯಪ್ಪ ವಾಲ್ಮೀಕಿ ಸಮುದಾಯದ ಅಧ್ಯಕ್ಷ ಪ್ರೇಮ್ ಕುಮಾರ್. ಉಪಾಧ್ಯಕ್ಷ ಕುಮಾರ್, ಸಮುದಾಯದ ಮುಖಂಡರಾದ ಸಂಜೀವ್ ನಾಯಕ, ಲಕ್ಷ್ಮೀಪತಿ ಪಿಎಸ್ ಐ ಕೃಷ್ಣಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉಮಾಪತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.