
ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಮಹಾಸ್ವಾಮಿಗಳು ಮತ್ತು ಸಚಿವರಾದ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರು ಮತ್ತು ಸಮುದಾಯದ ಮುಖಂಡರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನ ಭೇಟಿಯಾಗಿ, ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡುವಂತೆ ಮನವಿ ಮಾಡಿದರು.
ವಾಲ್ಮೀಕಿ ನಿಗಮಕ್ಕೆ ಈ ಹಿಂದೆ ನೀಡಲಾಗಿದ್ದ 84.63 ಕೋಟಿ ಅನುದಾನದಲ್ಲಿ 50 ಕೋಟಿಯನ್ನು ಎಸ್ ಐ ಟಿ ಅಧಿಕಾರಿಗಳು ಬ್ಯಾಂಕ್ ಖಾತೆಯಲ್ಲೇ ಫ್ರೀಜ್ ಮಾಡಿಟ್ಟಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಆಗಿರುವ ಸುಮಾರು 30 ಕೋಟಿಯಷ್ಟು ಹಣವನ್ನು ವಾಪಾಸ್ ವಶಕ್ಕೆ ಪಡೆಯುವ ಪ್ರಯತ್ನ ಮುಂದುವರೆದಿದೆ. ಸದ್ಯದಲ್ಲೇ ಪೂರ್ತಿ ಹಣವನ್ನು ವಾಪಾಸ್ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.
ಪ್ರಕರಣವು ಪೂರ್ತಿ ಇತ್ಯರ್ಥ ಆಗುವವರೆಗೂ ನಿಗಮದ ಮತ್ತು ಸಮುದಾಯದ ಕೆಲಸಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ನಿಗಮಕ್ಕೆ ತಕ್ಷಣವೇ ಹೆಚ್ಚುವರಿ ಅನುದಾನ ಬಿಡುಗಡೆಗೆ ಮುಖ್ಯಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಸಕರಾದ ಕಂಪ್ಲಿ ಗಣೇಶ್, ರಘುಮೂರ್ತಿ, ಕೋನಾರೆಡ್ಡಿ, ಸಮುದಾಯದ ಮುಖಂಡರಾದ ನಿವೃತ್ತ ಕೆಎಎಸ್ ಅಧಿಕಾರಿ ಮೃತ್ಯುಂಜಯಪ್ಪ ಸೇರಿ ಸಮಾಜದ ಹಲವು ಹಿರಿಯರು ಉಪಸ್ಥಿತರಿದ್ದರು.