ವಾರ್ಡ್ ಗಳಲ್ಲಿ ದಿನನಿತ್ಯ ಕಾಡುವ ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ ಸಮಸ್ಯೆ, ಬೀದಿನಾಯಿಗಳ ಹಾವಳಿ, ಕಸ ವಿಲೇವಾರಿ, ರಸ್ತೆಗಳ ಅಗಲೀಕರಣ, ರಸ್ತೆಗಳಲ್ಲಿನ ಗುಂಡಿಗಳ ಅವಾಂತರ ಸೇರಿದಂತೆ ಇತರೆ ಸಮಸ್ಯೆಗಳಿಗೆ ಶೀಘ್ರವಾಗಿ ಮುಕ್ತಿ ನೀಡಿ ಎಂದು ಶಾಸಕ ಧೀರಜ್ ಮುನಿರಾಜು ಅವರಿಗೆ ಸಾರ್ವಜನಿಕರು ಒತ್ತಾಯಿಸಿದರು.
ನಗರಸಭೆ ಆವರಣದಲ್ಲಿ ಗುರುವಾರ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಾರ್ವಜನಿಕರು ತಮ್ಮ ವಾರ್ಡ್ ಗಳಲ್ಲಿನ ದಿನನಿತ್ಯದ ಸಮಸ್ಯೆಗಳ ಸರಮಾಲೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು.
ನಗರದಲ್ಲಿನ ರಸ್ತೆಗಳು ಸೂಕ್ತ ರೀತಿಯಲ್ಲಿ ದುರಸ್ತಿಯಾಗದೇ, ಗುಂಡಿಮಯವಾಗಿವೆ. ಹಲವು ವಾರ್ಡ್ ಗಳಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ. ಕಳೆದ 50 ವರ್ಷಗಳಿಂದ ಇದ್ದ ರಸ್ತೆಗಳೇ ಇಂದು ಸಹ ಇವೆ. ನಗರಕ್ಕೆ ತಕ್ಕಂತೆ ಒಂದೇ ಒಂದು ರಸ್ತೆಗಳು ಅಗಲೀಕರಣ ಆಗಿಲ್ಲ. ಪ್ರಮುಖ ವಾರ್ಡ್ ಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಬೀದಿ ದೀಪಗಳು ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡರು.
ರೆವೆನ್ಯೂ ಸೈಟ್ ಗಳಿಗೆ ನಗರಸಭೆಯಿಂದ ಖಾತೆ ನೀಡಲು ಬರುವುದಿಲ್ಲ. ಖಾತೆ ಇಲ್ಲದ ಸೈಟ್ ಗಳಲ್ಲಿ ಮನೆಗಳ ನಿರ್ಮಾಣಕ್ಕೆ ನಗರಸಭೆಯಿಂದ ಅನುಮತಿ ನೀಡುವುದಿಲ್ಲ. ಬಡವರು ಕೂಡಿಟ್ಟ ಹಣದಿಂದ ನಿವೇಶನ ಖರೀದಿ ಮಾಡಿರುತ್ತಾರೆ. ಇವರ ನೀತಿ ನಿಯಮಗಳಿಂದ ಬಡವರು ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇದಕ್ಕೆ ನ್ಯಾಯಬದ್ಧ ಪರಿಹಾರ ಒದಗಿಸಬೇಕು ಎಂದು ಜನಸಾಮಾನ್ಯರು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಶಾಸಕ ಧೀರಜ್ ಮುನಿರಾಜು ನಗರದಲ್ಲಿ ಕೇವಲ 18 ಬಡಾವಣೆಗಳು ಮಾತ್ರ ಅನುಮತಿ ಪಡೆದು ನಿರ್ಮಾಣ ಮಾಡಲಾಗಿದೆ. ಉಳಿಕೆ ನೂರಾರು ಬಡಾವಣಗಳು ನಗರಸಭೆಯಿಂದ ಅನುಮತಿಯೇ ಪಡೆದಿಲ್ಲ ಹೀಗಾಗಿ ಸಮಸ್ಯೆ ಎದುರಾಗಿದೆ ಎಂದರು.
ಎಂಜಿನಿಯರ್ ರಾಮೇಗೌಡ ಉತ್ತರಿಸಿ, ಕಾನೂನಡಿ ಸೆಕ್ಷನ್ 187ರ ಪ್ರಕಾರ ಅನಧಿಕೃತ ಕಟ್ಟಡ ಬಗ್ಗೆ ದೂರು ಬಂದರೆ, ಮೂರು ನೋಟಿಸ್ ನೀಡಿ ಕಟ್ಟಡ ತೆರವು ಮಾಡಲಾಗುತ್ತದೆ. ಸೆಕ್ಷನ್ 102ರ ಪ್ರಕಾರ ಎರಡು ಪಟ್ಟು ದಂಡ , ತೆರಿಗೆ ಪಾವತಿಸಿ ಸಕ್ರಮ ಮಾಡಿಕೊಳ್ಳಬಹುದಾಗಿದೆ ಎಂದರು.
ನಗರದ ನಾಗರಕೆರೆಯ ವಿಚಾರಕ್ಕೆ ಸಂಬಂದಿಸಿದಂತೆ ಇಲ್ಲಿನ ಸಂಘಟನೆ ಸದಸ್ಯ ಗಿರೀಶ್ ಎಂಬಾತ ಆರ್ ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದ್ದಾರೆ. ಈ ಮಾಹಿತಿಯ ಆಧಾರದ ಮೇಲೆ ಹಸಿರು ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಹಸಿರು ನ್ಯಾಯಪೀಠವು ತಪ್ಪು ಮಾಹಿತಿಗಳನ್ನು ನೀಡಿದ್ದೀರಿ ಎಂದು ಛೀಮಾರಿ ಹಾಕಿದೆ ಎಂದು ದೂರಿದರು. ಮಾತನಾಡುವ ರಭಸಲ್ಲಿ ನಗರಸಭಾ ಸದಸ್ಯರು, ಅಧಿಕಾರಿಗಳು ಅಯೋಗ್ಯರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಅಧಿಕಾರಿಗಳು ಗಿರೀಶ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಅತಿವೇಗವಾಗಿ ಬೈಕ್, ಕಾರುಗಳನ್ನು ಚಾಲನೆ ಮಾಡುವವರ ಹಾವಳಿ ಮಿತಿ ಮೀರಿದೆ. ಕಾಲೇಜು ರಸ್ತೆಗಳಲ್ಲಿ ನಡೆದುಕೊಂಡು ಹೋಗುವುದೇ ದುಸ್ಥರವಾಗುತ್ತಿದೆ. ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಲೈಟ್ಗಳಿಲ್ಲದೆ ಅಪಘಾತಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ತುರ್ತು ಗಮನ ನೀಡಬೇಕು ಎಂದು ಕಾಲೇಜು ವಿದ್ಯಾರ್ಥಿನಿ ಶ್ರೇಯ ಹೇಳಿದರು.
ಶಾಸಕ ದೀರಜ್ ಮುನಿರಾಜು ಸಾರ್ವಜನಿಕರ ಮನವಿಗಳಿಗೆ ಉತ್ತರ ನೀಡಿ, ನಗರದಲ್ಲಿ ಹೆಚ್ಚು ವಾಹನ ದಟ್ಟಣೆ ಇರುವ 7 ಪ್ರಮುಖ ವೃತ್ತಗಳನ್ನು ಗುರುತಿಸಲಾಗಿದೆ. ಈ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ದೀಪಗಳ ಅಳವಡಿಕೆ, ನಗರದ ಮೂಲಕ ಹಾದು ಹೋಗಿರುವ ಯಲಹಂಕ-ಹಿಂದೂಪುರ ಹೆದ್ದಾರಿಯ ರೈಲ್ವೆ ನಿಲ್ದಾಣ, ಡಿ,ಕ್ರಾಸ್ ವೃತ್ತಗಳ ಬಳಿ ಮೇಲು ಸೇತುವೆ ನಿರ್ಮಾಣ, ರಸ್ತೆಗಳಲ್ಲಿ ವಿದ್ಯುತ್ ದೀಪಗಳ ಅಳವಡಿಕೆಗೆ ರಾಜ್ಯ ಹೆದ್ದಾರಿ ನಿರ್ಮಾಣ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ನಗರಕ್ಕೆ ಪ್ರತ್ಯೇಕವಾಗಿ ಸಂಚಾರ ನಿಯಂತ್ರಣ ಪೊಲೀಸ್ ಠಾಣೆ ಮಂಜೂರಾತಿಗೆ ಅಗತ್ಯ ಇರುವ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ. ನಗರ ವ್ಯಾಪ್ತಿಯ ಶಾಲಾ ಕಾಲೇಜು ರಸ್ತೆಗಳಲ್ಲಿ ಬೈಕ್, ಕಾರುಗಳ ವೇಗ ಮಿತಿ ಕಡಿವಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳು ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದರು.
11ನೇ ವಾರ್ಡ್ ಕರೇನಹಳ್ಳಿ ನಿವಾಸಿ ವೇಣುಗೋಪಾಲ್ ಮಾತನಾಡಿ, ಕರೇನಹಳ್ಳಿ ಪ್ರದೇಶದಲ್ಲಿನ ಮನೆಗಳು ನಗರಸಭೆ ಹಾಗೂ ಅರಳುಮಲ್ಲಿಗೆ ಗ್ರಾಮ ಪಂಚಾಯಿತಿ ಎರಡೂ ಕಡೆಗೂ ಸೇರುತ್ತಿದೆ. ಹೀಗಾಗಿ ಗಡಿ ಗುರುತಿಸುವಿಕೆಯ ಗೊಂದಲದಿಂದಾಗಿ ಈ ಭಾಗದಲ್ಲಿ ಯಾರು ಸಹ ಚರಂಡಿಗಳನ್ನು ಸ್ವಚ್ಛಗೊಳಿಸುತ್ತಿಲ್ಲ. ಬೀದಿ ದೀಪ, ಕುಡಿಯುವ ನೀರಿನ ಸರಬರಾಜು ಸೇರಿದಂತೆ ಎಲ್ಲಕ್ಕೂ ಹತ್ತಾರು ಬಾರಿ ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಈ ಗೊಂದಲಕ್ಕೆ ಶೀಘ್ರವಾಗಿ ಮುಕ್ತಿಕಾಣಿಸಬೇಕು ಎಂದು ಮನವಿ ಮಾಡಿದರು.
4ನೇ ವಾರ್ಡ್ ನಿವಾಸಿ ರಮೇಶ್ ಮಾತನಾಡಿ, ಕೆ.ಆರ್.ಮಾರುಕಟ್ಟೆಯಲ್ಲಿನ ವ್ಯಾಪಾರಿಗಳ ಅಂಗಡಿ ಮಳಿಗೆಗಳನ್ನು ಕೆಡವಿಹಾಕಿ 10 ವರ್ಷಗಳು ಕಳುಯುತ್ತ ಬಂದಿದೆ. ಇದುವರೆಗೂ ನಗರಸಭೆ ವತಿಯಿಂದ ಅಂಗಡಿ ಮಳಿಗೆಗಳನ್ನು ನಿರ್ಮಿಸಿಕೊಟ್ಟಿಲ್ಲ. ಇದರಿಂದಾಗಿ ತರಕಾರಿ, ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಕುಳಿತು ಮಾರಾಟ ಮಾಡುವಂತಾಗಿದೆ. ನಗರದಲ್ಲಿ ಕುಡಿಯುವ ನೀರಿನ ಕೊರತೆ ಹೆಚ್ಚಾಗುತ್ತಿದೆ. ಬೆಳೆಯುತ್ತಿರುವ ನಗರದ ಜನರ ನೀರಿನ ಕೊರತೆ ನೀಗಿಸಲು ಜಕ್ಕಲಮೊಡಗು ಜಲಾಶಯದ ನೀರು ಕೊರತೆಯಾಗುತ್ತಿದೆ. ಹೀಗಾಗಿ ಘಾಟಿ ಸಮೀಪದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ನಿಂದ ನೀರು ತರುವ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದು ಸಲಹೆ ನೀಡಿದರು.
ಅಂಗವಿಕಲರಾದ ಸಿದ್ದಪ್ಪ ಮಾತನಾಡಿ, ಮಾದಗೊಂಡನಹಳ್ಳಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಸ್ತೆಯಲ್ಲಿ ಯಾವುದೋ ನೆಪಗಳಲ್ಲಿ ಸಂಜೆ ವೇಳೆ ಸಾರ್ವಜನಿಕ ರಸ್ತೆಯಲ್ಲಿ ಪಟಾಕಿ ಹೊಡೆಯುವವರ ಹಾವಳಿ ಹೆಚ್ಚಾಗಿದೆ. ರಸ್ತೆ ಬದಿಗಳಲ್ಲೇ ಜನ್ಮದಿನಾಚಣೆಗಳನ್ನು ಆಚರಿಸಿಕೊಳ್ಳುತ್ತ ಪಟಾಕಿಗಳನ್ನು ಸಿಡಿಸುತ್ತಿದ್ದಾರೆ. ಈ ಬಗ್ಗೆ ಕಡಿವಾಣಹಾಕಿಸಬೇಕು ಎಂದು ಶಾಸಕರ ಗಮನಕ್ಕೆ ತಂದರು.
ಬಳಿಕ ಮಾತನಾಡಿದ ಶಾಸಕ ಧೀರಜ್ ಮುನಿರಾಜು, 2011 ರ ಜನಗಣತಿ ಆಧಾರದ ಮೇಲೆ ನಗರಸಭೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತದೆ. ಆಯಾ ವಾರ್ಡ್ ಗಳ ನಗರಸಭಾ ಸದಸ್ಯರು ಅಧಿಕಾರಿಗಳ ಜೊತೆ ಸಂವಹನ ಮಾಡಿ ಜನ ಸಾಮಾನ್ಯರ ಸಮಸ್ಯೆಗಳನ್ನು ಬಗೆಹರಿಸಬೇಕು.
ನಮ್ಮ ನಗರ, ನಮ್ಮ ಊರು ಎಂಬ ಮನೋಬಾವನೆ ಸಾರ್ವಜನಿಕರಲ್ಲಿ ಮೂಡಬೇಕು. ಸದ್ಯ ನಗರದಲ್ಲಿ 17 ಕೋಟಿ 10ಲಕ್ಷ ರೂ.ಗಳ ಕಾಮಗಾರಿ ನಡೆಯುತ್ತಿದೆ. ಒಳ ಚರಂಡಿ ಮತ್ತು ನೂತನ ಎಸ್ ಟಿಪಿ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ 8 ಎಕರೆ ಜಮೀನು ಖರೀದಿಸಲು ಕ್ರಮ ವಹಿಸಲಾಗಿದೆ ಎಂದರು.
ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗದಿದ್ದರೂ ಗರಿಷ್ಠ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು. ನಗರಸಭೆಗೆ ಬರುವ ಪ್ರತಿಯೊಂದು ಅರ್ಜಿಯೂ ಸಕಾಲದಲ್ಲಿ ನಮೂದಾಗಬೇಕು. ಮುಂದಿನ ದಿನಗಳಲ್ಲಿ ಅಮೃತ್.2 ರಲ್ಲಿ ಅನುದಾನ ಸಿಗಲಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಪಕ್ಷದ ಸದಸ್ಯರಿಗೆ ಅನುದಾನ ನೀಡುತ್ತಿಲ್ಲ. ವಿಪಕ್ಷ ಸದಸ್ಯರಿಗೆ ಅನುದಾನ ಮರಿಚಿಕೆಯಾಗಿದೆ. ರಸ್ತೆಗಳ ಅಭಿವೃದ್ದಿಗೆ ಪಕ್ಕದ ಮೂರು ತಾಲ್ಲೂಕುಗಳಿಗೆ 20 ಕೋಟಿ ರೂ. ಅನುದಾನವನ್ನು ಸರ್ಕಾರ ನೀಡಿದೆ. ನಮ್ಮ ತಾಲ್ಲೂಕಿಗೆ ಕೇವಲ 10 ಕೋಟಿ ರೂ. ಅನುದಾನದ ಭರವಸೆ ಸಿಕ್ಕಿದೆ ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮಿನಾರಾಯಣ್, ಉಪಾಧ್ಯಕ್ಷರ ಫರ್ಹಾನ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷೆ ಆದಿಲಕ್ಷ್ಮಿ, ನಗರಸಭೆ ಸದಸ್ಯರು, ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.