
ಮದ್ಯಪ್ರಾಚ್ಯಗಳ ದೇಶಗಳಲ್ಲಿ ನಡೆಯುತ್ತಿರುವ ಯುದ್ದಗಳಿಂದಾಗಿ ಎಲ್.ಪಿ.ಜಿ ಕೊರತೆ ದೇಶಕ್ಕೆ ಎದುರಾಗಿದೆ. ಹೋಟೆಲ್ ಗಳಲ್ಲಿ ವಾಣಿಜ್ಯ ಸಿಲಿಂಡರ್ ಗಳ ಅಭಾವ ಸೃಷ್ಟಿಯಾಗಿ ಬೀಗ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬುಧವಾರ ನಗರದ ದೊಡ್ಡ ದೊಡ್ಡ ಹೋಟೆಲ್ ಗಳಲ್ಲಿ ಸಿಲಿಂಡರ್ ಗಳು ಇಲ್ಲದೆ ಸೌದೆ ಒಲೆ ಮೊರೆಹೋಗಿದ್ದರು. ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೂ ಸಿಲಿಂಡರ್ ಭೀತಿ ಎದುರಾಗಿದ್ದು, ಸೌದೆಗಳ ಸಂಗ್ರಹಕ್ಕೆ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿದೆ. ಇತ್ತ ಸರ್ಕಾರಿ ಶಾಲೆಗಳಲ್ಲೂ ಬಿಸಿಯೂಟಕ್ಕೂ ಸಮಸ್ಯೆ ಎದುರಾಗುವ ಆತಂಕ ಕಾಣುತ್ತಿದೆ.
ಪ್ರತಿನಿತ್ಯ 400-500 ಸಿಲಿಂಡರ್ ಗಳ ಬೇಡಿಕೆ
ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೆಲ್‌ಗಳು, ಟೀ, ಕಾಫಿ ಅಂಗಡಿಗಳು ಸೇರಿ ಪ್ರತಿ ನಿತ್ಯ ಅಂದಾಜು 400 ರಿಂದ 500 ಕ್ಕೂ ಹೆಚ್ಚು ವಾಣಿಜ್ಯ ಸಿಲಿಂಡರ್ ಬೇಡಿಕೆ ಇದೆ. ಈಗಾಗಲೇ ಕೆಲವು ಹೋಟೆಲ್‌ಗಳು ಸಿಲಿಂಡರ್ ಹೊಂದಿಸಲಾಗದೆ ಬಾಗಿಲು ಮುಚ್ಚುತ್ತಿದ್ದು, ಬುಧವಾರ ನಗರದ ಹಲವಾರು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಸೌದೆ ಒಲೆಯಲ್ಲಿ ಅಡುಗೆ ಮಾಡಿ, ಗ್ರಾಹಕರಿಗೆ ಊಟ ಒದಗಿಸುತ್ತಿದ್ದಾರೆ. ಕೆಲವು ಹೋಟೆಲ್ ಗಳಲ್ಲಿ ಈಗಾಗಲೇ ಹೊಂದಿರುವ ವಾಣಿಜ್ಯ ಸಿಲಿಂಡರ್ ಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಖಾಲಿಯಾದ ಬಳಿಕ ಬೀಗ ಹಾಕುವ ಪರಿಸ್ಥಿತಿ ಎದುರಾಗುವ ಆತಂಕ ಹೋಟೆಲ್ ಮಾಲೀಕರಿಗೆ ಎದುರಾಗಿದೆ.
ಒಂದು ವಾರದಿಂದ ಬಾರದ ವಾಣಿಜ್ಯ ಸಿಲಿಂಡರ್ ಗಳು:
ನಗರದ ಪ್ರಮುಖ ಗ್ಯಾಸ್ ಏಜೆನ್ಸಿಯಾದ ಮಂಜುನಾಥ ಏಜೆನ್ಸಿಗೆ ಕಳೆದ ಒಂದು ವಾರದಿಂದ ವಾಣಿಜ್ಯ ಬಳಕೆ ಸಿಲಿಂಡರ್ ಗಳು ಬಂದಿಲ್ಲ. ಹೀಗಾಗಿ ಪ್ರತಿನಿತ್ಯ ಇಲ್ಲಿಂದ ಸರಬರಾಜು ಆಗುತ್ತಿದ್ದ ಸಿಲಿಂಡರ್ ಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಹೋಟೆಲ್ ಮಾಲೀಕರುಗಳು ಕಂಗಾಲಾಗಿದ್ದಾರೆ. ಕನಿಷ್ಟ ನಿತ್ಯವೂ 150 ಸಿಲಿಂಡರ್ ಗಳು ಬೇಡಿಕೆ ಇದ್ದು ಪೂರೈಕೆ ಇಲ್ಲದೆ ಕೈಕಟ್ಟಿ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಘಾಟಿಯಲ್ಲಿ ಸೌದೆಗಳ ಸಂಗ್ರಹಕ್ಕೆ ಸಿದ್ಧತೆ:
ಕ್ಷೇತ್ರದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಸಿಲಿಂಡರ್ ಗಳ ಅಭಾವ ಎದುರಾಗಿದೆ. ಈ ಕುರಿತು ಘಾಟಿ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಮಾಹಿತಿ ನೀಡಿದ್ದು, ಎಂದಿನಂತೆ ಸಿಲಿಂಡರ್ ಗಳ ಇಂಡೆಂಟ್ ಕಳಿಸಿದ್ದೇವೆ. ಆದರೆ ಪೂರೈಕೆಯಲ್ಲಿ ವ್ಯತ್ಯಯವಾದರೆ ಸೌದೆಗಳ ಮೂಲಕ ಬೆಳಗ್ಗಿನ ಮತ್ತು ಮಧ್ಯಾಹ್ನದ ಪ್ರಸಾದ ತಯಾರಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.