ವರಿಷ್ಠರ ತೀರ್ಮಾನಕ್ಕೆ ಮಣಿದು ರಾಜ್ಯ ರಾಜಕೀಯಕ್ಕೆ ಗುಡ್ ಬೈ ಹೇಳ್ತಾರಾ ಕೆ.ಎಚ್.ಮುನಿಯಪ್ಪ?: MP ಚುನಾವಣೆಗೆ ಕೆ.ಎಚ್. ಸ್ಪರ್ಧಿಸಿದರೆ‌ ಸಾಮೂಹಿಕ ರಾಜಕೀಯ ನಿವೃತ್ತಿ; ತೂಬಗೆರೆ ಹೋಬಳಿ ಮುಖಂಡರಿಂದ ಎಚ್ಚರಿಕೆ ಸಂದೇಶ ರವಾನೆ

2024ರ ಲೋಕಸಭಾ ಚುನಾವಣೆ ಸನಿಹದಲ್ಲಿದ್ದು, ಆಯಾ ಪಕ್ಷಗಳಿಂದ ರಾಜಕೀಯ ತಂತ್ರ, ಪ್ರತಿತಂತ್ರಗಾರಿಕೆ ಗರಿಗೆದರಿವೆ. ಒಂದು ಕಡೆ ಸ್ಪರ್ಧಾಕಾಂಕ್ಷಿಗಳು ಟಿಕೆಟ್ ಪಡೆಯಲು ಕಸರತ್ತು ನಡೆಸಿದರೆ ಮತ್ತೊಂದು ಕಡೆ ಯಾರಿಗೆ ಟಿಕೆಟ್ ನೀಡಿದರೆ ಕ್ಷೇತ್ರ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ವರಿಷ್ಠರು ಚಿಂತನೆ ನಡೆಸುತ್ತಿದ್ದಾರೆ.

ಇದರ ನಡುವೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಸರ್ಕಾರದಲ್ಲಿ ಆಹಾರ ಖಾತೆ ಸಚಿವರಾದ ಕೆ.ಎಚ್.ಮುನಿಯಪ್ಪ ಅವರ ಲೋಕಸಭೆ ಚುನಾವಣೆ ಸ್ಪರ್ಧೆ ವದಂತಿ ಕ್ಷೇತ್ರದಲ್ಲಿ ತೀವ್ರ ಸದ್ದು ಮಾಡುತ್ತಿದೆ.

35 ವರ್ಷಗಳ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದ ಕೆ.ಎಚ್.ಮುನಿಯಪ್ಪ ಅವರು ಮತ್ತೆ ಲೋಕಸಭಾ ಕ್ಷೇತ್ರವಾದ ಕೋಲಾರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂಬ ಗುಸು ಗುಸು ವಿಧಾನಸಭಾ ಕ್ಷೇತ್ರದ ಮುಖಂಡರನ್ನು ಚಿಂತೆಗೀಡು ಮಾಡಿದೆ.

ಕೆ.ಎಚ್.ಮುನಿಯಪ್ಪ ಎಂಪಿ ಚುನಾವಣೆಗೆ ಸ್ಪರ್ಧಿಸಿದರೆ ಸಾಮೂಹಿಕ‌ ರಾಜಕೀಯ ನಿವೃತ್ತಿ: ಮುಖಂಡರಿಂದ ಒತ್ತಡ‌ ತಂತ್ರ

ಕೆ.ಎಚ್.ಮುನಿಯಪ್ಪ ಅವರು ರಾಜ್ಯ ರಾಜಕಾರಣದಲ್ಲೇ ಮುಂದುವರಿಯಬೇಕು. ಐದೂ ವರ್ಷ ಅವರೇ ಸಚಿವರಾಗಿರಬೇಕು. ಯಾವುದೇ ಕಾರಣಕ್ಕೂ ಲೋಕಸಭೆ‌ ಚುನಾವಣೆಗೆ ಸ್ಪರ್ಧಿಸಬಾರದು ಎಂದು ಭಾನುವಾರ ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟಯಲ್ಲಿ ನಡೆದ ತೂಬಗೆರೆ ಹೋಬಳಿ ಮಟ್ಟದ ಗ್ಯಾರೆಂಟಿ ಯೋಜನೆ, ಜಾಗೃತಿ ಸಮಾವೇಶದಲ್ಲಿ ಮಾಜಿ ಸಚಿವ ಆರ್.ಎಲ್.ಜಾಲಪ್ಪ ಅವರ ಮೊಮ್ಮಗ, ಜಿ.ಪಂ.ಮಾಜಿ ಸದಸ್ಯ ಅರವಿಂದ್ ಅವರು ಸಚಿವರನ್ನು ಒತ್ತಾಯಿಸಿದರು.

ಇದಾದ ಬಳಿಕ ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಪ್ಪ ಅವರು ಮಾತನಾಡಿ, ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದರೆ ನಾವೆಲ್ಲರೂ ರಾಜಕೀಯ‌ ನಿವೃತ್ತಿ ಪಡೆಯುತ್ತೇವೆ. ಕೇಂದ್ರದಲ್ಲಿ ಮೂರೂವರೆ ದಶಕಗಳ ಕಾಲ ಸಂಸದರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿರುವ ಮುನಿಯಪ್ಪ ಅವರು ನಮ್ಮ ಕ್ಷೇತ್ರಕ್ಕೆ ಸಿಕ್ಕಿರುವುದು ಸೌಭಾಗ್ಯ ಎಂದು ಸಚಿವರ ಎದುರೇ ಹೇಳಿದರು.

ನಂತರ ಕಾಂಗ್ರೆಸ್ ಮುಖಂಡ ಮುನಿರಾಜು ಮಾತನಾಡಿ, ಕೆ.ಎಚ್. ಮುನಿಯಪ್ಪ ಸಾಹೇಬ್ರು ಸಿಎಂ ಕ್ಯಾಂಡಿಡೇಟ್, ಸಿಎಂ ಆಗುವ ಎಲ್ಲಾ ಅರ್ಹತೆಗಳು ಅವರಲ್ಲಿದೆ. ನಮ್ಮ ಕ್ಷೇತ್ರ ಇನ್ನೂ ಅಭಿವೃದ್ಧಿ ಆಗಬೇಕು. ಈ ನಿಟ್ಟಿನಲ್ಲಿ ಅವರು ಕೆಲಸ ಮಾಡಲಿದ್ದಾರೆ. ರಾಜ್ಯ ರಾಜಕೀಯ ಬಿಟ್ಟು, ರಾಷ್ಟ್ರ ರಾಜಕಾರಣಕ್ಕೆ ಹೋಗಬಾರದು. ನಮ್ಮ ಸಹಕಾರ, ಬೆಂಬಲ ಸದಾ ಅವರಿಗೆ ಮೀಸಲಾಗಿರುತ್ತದೆ. ಆದ್ದರಿಂದ ಐದು ವರ್ಷ ಸಚಿವರಾಗಿ, ನಮ್ಮ ಜಿಲ್ಲೆಯ ಉಸ್ತುವಾರಿಯಾಗಿಯೇ ಇರಬೇಕು ಎಂದು ಒತ್ತಾಯಿಸಿದರು.

ಮುಖಂಡರುಗಳ ಒತ್ತಡಕ್ಕೆ ಮೌನಕ್ಕೆ ಶರಣಾದ ಕೆ.ಎಚ್.ಮುನಿಯಪ್ಪ

ವಿಪರ್ಯಾಸ ಎಂದರೆ ಸಚಿವ ಕೆ.ಎಚ್.ಮುನಿಯಪ್ಪ ಅವರು ಮುಖಂಡರ ಈ ಮಾತುಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಅನುಮಾನಗಳನ್ನು ಮತ್ತಷ್ಟು ಜಟಿಲಗೊಳಿಸಿದೆ.

ಕೋಲಾರದಿಂದ ಸ್ಪರ್ಧೆಗೆ ಹೆಚ್ಚಿದ ಒತ್ತಡ

ಈ ಮಧ್ಯೆ ಕೋಲಾರ ಕ್ಷೇತ್ರದಿಂದ ಕೆ.ಎಚ್. ಮುನಿಯಪ್ಪ ಸ್ಪರ್ಧೆ ಕುರಿತಂತೆ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ದ್ವಂದ್ವದ ಮಾತುಗಳು ಕೇಳಿ ಬರುತ್ತಿವೆ. ಕೆ.ಎಚ್.ಅಭಿಮಾನಿಗಳು   ಮುನಿಯಪ್ಪ ಅವರೇ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದರೆ, ಹೊಸ‌ ಅಭ್ಯರ್ಥಿ ಹುಡುಕಾಟದಲ್ಲಿ ವಿರೋಧಿ ಬಣ ಮಗ್ನವಾಗಿದೆ.

1991 ರಿಂದ ಕೋಲಾರ ಮೀಸಲು ಕ್ಷೇತ್ರದಿಂದ ಎಂಟು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಕೆ.ಎಚ್.ಮುನಿಯಪ್ಪ ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. 2019 ರ ಲೋಕಸಭೆ ಚುನಾವಣೆ ವೇಳೆ ಕ್ಷೇತ್ರದಲ್ಲಿ ಹೆಚ್ಚಿದ ಆಡಳಿತ ವಿರೋಧಿ ಅಲೆ ಹಾಗೂ ಪಕ್ಷದ ಕೆಲ ನಾಯಕರ ಒಳ ಏಟಿಗೆ ಮೊದಲ ಬಾರಿ ಸೋಲು ಅನುಭವಿಸಿದರು.

ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಬಣ ರಾಜಕೀಯ ಬಿಟ್ಟು, ಒಗ್ಗಟ್ಟಿನಿಂದ ದುಡಿದರೆ ಕೋಲಾರ ಕ್ಷೇತ್ರದ ಜನರ ನಾಡಿಮಿಡಿತ ಅರಿತ ಮುನಿಯಪ್ಪ ಅವರಿಗೆ ಗೆಲುವು ನಿಶ್ಚಿತ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಇದರ ಹಿನ್ನೆಲೆಯಲ್ಲಿ ಕೆ.ಎಚ್.ಪರ ಅವರ ಅಭಿಮಾನಿಗಳು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

 ಕೋಲಾರದಿಂದ ಸ್ಪರ್ಧಿಸುವ ವಿಚಾರವಾಗಿ ವರಿಷ್ಠರ ತೀರ್ಮಾನವೇ ಅಂತಿಮ ಎಂದಿರುವ ಕೆ.ಎಚ್.ಮುನಿಯಪ್ಪ ಅವರು ಮಾತು ಕೂಡ ಟಿಕೆಟ್ ಆಕಾಂಕ್ಷಿ‌ ಎಂಬುದನ್ನು ಪುಷ್ಠೀಕರಿಸಿದೆ.

Leave a Reply

Your email address will not be published. Required fields are marked *