ವರಮಹಾಲಕ್ಷ್ಮಿ ಹಬ್ಬ: ಹಣ್ಣು, ತರಕಾರಿ, ಹೂ, ಇತರೆ ವಸ್ತುಗಳಿಗೆ ದುಬಾರಿ ಬೆಲೆ: ಗಗನಕ್ಕೇರಿದ ದರಗಳ ನಡುವೆ ವರಮಹಾಲಕ್ಷ್ಮೀ ಹಬ್ಬಕ್ಕೆ ಅದ್ಧೂರಿ ಸ್ವಾಗತ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಈ ಬಾರಿ ತಡವಾಗಿಯಾದರೂ ಬಿಟ್ಟೂ ಬಿಡದೆ ಮಳೆಯಾಗುತ್ತಿದ್ದು, ಹೂಗಳ ಇಳುವರಿ ಮೇಲೆ ಪ್ರಭಾವ ಬೀರಿದೆ.

ಈ ಬಾರಿಯ ವರಮಹಾಲಕ್ಷ್ಮೀ ಹಬ್ಬಕ್ಕೆ ಹೂವು, ಹಣ್ಣು ಹಾಗೂ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಸಂಭ್ರಮ ಕಾಣುತ್ತಿದೆ.

ತರಕಾರಿ, ಹಣ್ಣುಗಳು ಹಾಗೂ ಹೂಗಳ ಬೆಲೆ ಹಬ್ಬಕ್ಕೆಂದೇ ದುಬಾರಿಯಾಗಿ ಸಾರ್ವಜನಿಕರನ್ನು ಕಂಗಾಲಾಗಿಸಿದೆ. ಇದರೊಂದಿಗೆ ವರಲಕ್ಷ್ಮೀ ಮೂರ್ತಿಗಳ ಪ್ರತಿಮೆಗಳು, ಮುಖವಾಡಗಳು ಸಹ ಭರದಿಂದ ಮಾರಾಟವಾಗುತ್ತಿದ್ದು, ದುಬಾರಿ ಬೆಲೆಯೆನಿಸಿವೆ.

ನಗರದ ಮಾರ್ಕೆಟ್ ‌ನಲ್ಲಿ ಹಣ್ಣುಗಳ ನೂರಾರು ಅಂಗಡಿಗಳು ಹಬ್ಬಕ್ಕೆಂದೇ ತೆರೆದಿವೆ. ದೊಡ್ಡ ತೆಂಗಿನ ಕಾಯಿ ಒಂದಕ್ಕೆ 100 ರೂ ಆಗಿದೆ. ಹೂವು, ಹಣ್ಣಿನ ಬೆಲೆಗಳು ಹಿಂದೆಂದೂ ಕಾಣದಷ್ಟು ಗಗನಕ್ಕೇರಿವೆ. ಕಾಕಡ, ಮಲ್ಲಿಗೆ , ಮಳ್ಳೆ ಹೂವಿನ ಬೆಲೆ 1000 ರೂ, ಕನಕಾಂಬರ ಕೆ.ಜಿಗೆ 2000 ರೂ ಇದ್ದು, 50 ಗ್ರಾಂಗೆ 120ರೂನಂತೆ ಮಾರಾಟವಾಗುತ್ತಿತ್ತು. ಶಾಮಂತಿಗೆ 250ರೂ, ಬಟನ್ಸ್, ಗುಲಾಬಿ ಮೊದಲಾದ ಹೂವಿನ ಬೆಲೆಗಳು 200 ರವರೆಗೂ ಇವೆ. ಇನ್ನು ತಾವರೆ ಹೂ ಜೊತೆಗೆ 80 ರೂ, ಡೇರಾ ಒಂದು ಹೂವಿಗೆ 10 ರೂ ಇದರೊಂದಿಗೆ ಸೇಬಿನ ಬೆಲೆ 250ರೂ, ದ್ರಾಕ್ಷಿ 200ರೂ ದಾಟಿದ್ದು, ಮಿಕ್ಕ ಹಣ್ಣುಗಳ ಬೆಲೆಗಳೂ ಕೆಜಿಗೆ 20 ರಿಂದ 30 ಹೆಚ್ಚಾಗಿವೆ. ಅಲಂಕಾರಿಕ ಹೂಗಳು ಒಂದು ಕುಚ್ಚಿಗೆ 200 ರೂಗಳಂತೆ ಮಾರಾಟವಾಗುತ್ತಿತ್ತು.

 ಬಾಳೆಕಂದುಗಳು ಸಹ ತುಸು ಬೆಲೆ ಹೆಚ್ಚಾಗಿಯೇ ಇವೆ.  ಆಷಾಢ ಮಾಸದಲ್ಲಿಯೂ ಸಹ ಹೂವುಗಳ ಬೆಲೆ ಅಷ್ಟೇನೂ ಇಳಿಕೆಯಾಗಿರಲಿಲ್ಲ.

ಕಡಿಮೆಯಾದ ಹೂ ಇಳುವರಿ:

ತಾಲೂಕಿನಲ್ಲಿ ಸೇವಂತಿಗೆ, ಗುಲಾಬಿ, ಚೆಂಡು ಹೂಗಳು ಹೆಚ್ಚಾಗಿ ಬೆಳೆಯುತ್ತಿವೆ. ಆದರೆ ಕಾಕಡ, ಮಲ್ಲಿಗೆ, ಕನಕಾಂಬರ ಹೂಗಳನ್ನು ಬೆಳೆಯುವವರೇ ಕಡಿಮೆಯಾಗುತ್ತಿದ್ದಾರೆ. ಹಾಗಾಗಿ ಬೇರೆಡೆಯಿಂದ ಹೂಗಳನ್ನು ತರಿಸಬೇಕಾದ ಅನಿವಾರ್ಯತೆ ಇದೆ. ಹೂ ಕೀಳಲು ಕೂಲಿ ಕಾರ್ಮಿಕರ ಸಮಸ್ಯೆ, ನಿರ್ವಹಣೆ ವೆಚ್ಚ ಹೂ ಬೆಳೆಗಾರರ ಸಂಖ್ಯೆ ಕಡಿಮೆಯಾಗುವಂತೆ ಮಾಡಿದೆ, ಬೆಂಗಳೂರಿನ ಮಾರುಕಟ್ಟೆಯಲ್ಲಿಯೂ ಹೂಗಳ ಬೆಲೆ ದುಬಾರಿಯಾಗಿದೆ  ಎನ್ನುತ್ತಾರೆ ಹೂ ಮಾರಾಟಗಾರ ಗಂಗಾಧರ್.

ಲಕ್ಷ್ಮೀ ಅಲಂಕೃತ ಮೂರ್ತಿಗಳು :

ವರಮಹಾಲಕ್ಷ್ಮೀ ಹಬ್ಬ ಹದಿನೈದು ದಿನವಿದ್ದಂತೆ ವಿವಿಧ ಮಳಿಗೆಗಳಲ್ಲಿ ಲಕ್ಷ್ಮೀ ಅಲಂಕೃತ ಮೂರ್ತಿಗಳು ಹಾಗೂ ಲಕ್ಷ್ಮೀ ಮುಖವಾಡಗಳು ಸಹ ಭರದಿಂದ ಮಾರಾಟವಾಗುತ್ತಿದ್ದು, ಒಂದು ಸೆಟ್ ಪೂರ್ಣ ಪ್ರತಿಮೆಗೆ 3 ಸಾವಿರದಿಂದ 10 ಸಾವಿರದವರೆಗೆ ಮಾರಾಟವಾಗುತ್ತಿದೆ. ಈ ಬಾರಿ ಹೆಚ್ಚಿನ ಮೂರ್ತಿಗಳು ಅಂಗಡಿಗಳಲ್ಲಿ ಮಾರಾಟವಾಗುತ್ತಿರುವುದು ವಿಶೇಷವಾಗಿದೆ.ಲಕ್ಷ್ಮೀ ಕಳಸಕ್ಕೆ ಇಡುವ ಲಕ್ಷ್ಮೀ ಮುಖವಾಡಗಳನ್ನು ಮಹಿಳೆಯರು ಕೊಂಡೊಯ್ಯುತ್ತಿದ್ದುದು ಸಾಮಾನ್ಯವಾಗಿತ್ತು. ಪ್ಲಾಸ್ಟಿಕ್ ಹೂಗಳು, ಅಲಂಕಾರಿಕ ಸಾಮಗ್ರಿಗಳ ಮಾರಾಟ ಸಹ ಭರದಿಂದ ಸಾಗಿತ್ತು.

Leave a Reply

Your email address will not be published. Required fields are marked *

error: Content is protected !!