ತಾಲ್ಲೂಕಿನ ಕಂಟನಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದಲ್ಲಿನ ಸ್ಮಶಾನ ಸೇರಿದಂತೆ ಗ್ರಾಮದ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ಜಮೀನುಗಳ ಸರ್ವೇ ನಡೆಸುವಂತೆ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಕಂದಾಯ ರಾಜಸ್ವ ನಿರೀಕ್ಷೆಗೆ ಲಿಖಿತ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಮೋಹನಕುಮಾರಿ ತಿಳಿಸಿದ್ದಾರೆ.
ವಡ್ಡರಹಳ್ಳಿ ಗ್ರಾಮದಲ್ಲಿನ ಸ್ಮಶಾನ ಭೂಮಿ ಒತ್ತುವರಿ ಕುರಿತಂತೆ ಕಳೆದ ಆರು ತಿಂಗಳಿಂದಲೂ ಗ್ರಾಮದಲ್ಲಿ ಪರ ವಿರೋಧಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದ ವ್ಯಾಪ್ತಿಗೆ ಒಳಪಡುವ ಎಲ್ಲಾ ಸರ್ಕಾರಿ ಜಮೀನುಗಳನ್ನು ಸರ್ವೆ ನಡೆಸಿ ಒತ್ತುವರಿಯಾಗಿರುವ ನಕ್ಷೆಯನ್ನು ಸಿದ್ದಪಡಿಸಿ ತುರ್ತಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಕಸಬಾ ಹೋಬಳಿಯಲ್ಲಿನ ಇತರೆ ಗ್ರಾಮಗಳಿಗೆ ಹೋಲಿಕೆ ಮಾಡಿದರೆ ವಡ್ಡರಹಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಹೆಚ್ಚಿನ ಸರ್ಕಾರಿ ಜಮೀನು ಇದೆ. ಹೀಗಾಗಿ ಒತ್ತುವರಿಯು ಹೆಚ್ಚಾಗಿರುವ ಬಗ್ಗೆ ಗ್ರಾಮದ ಸಾರ್ವಜನಿಕರಿಂದ ತಾಲ್ಲೂಕು ಕಚೇರಿ ಸೇರಿದಂತೆ ಕಂದಾಯ ಇಲಾಖೆಯ ಇತರೆ ಕಚೇರಿಗಳಿಗೆ ಸಾಕಷ್ಟು ದೂರುಗಳು ಸಲ್ಲಿಕೆಯಾಗಿವೆ.