ವಕ್ಫ್ ಬೋರ್ಡ್ ಕಾಯ್ದೆ ತಿದ್ದುಪಡಿಗೆ ರೈತ ವಿರೋಧಿ ನಿರ್ಣಯ ಜಾರಿಗೆ ಭಾರತೀಯ ಕಿಸಾನ್ ಸಂಘ ತೀವ್ರವಾಗಿ ಖಂಡಿಸುತ್ತದೆ

ವಕ್ಫ್ ಕಾಯ್ದೆಗೆ ಇಂದಿನ ಕೇಂದ್ರ ಸರ್ಕಾರ ರೈತರ ಪರ , ಬಡ ಮುಸಲ್ಮಾನರ ಪರ ಹಾಗೂ ವಕ್ಫ್ ಬೋರ್ಡಿನ ಆಡಳಿತವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದುಕೊಂಡು ಬಲಾಢ್ಯ ಭ್ರಷ್ಟ ಭೂ ಕಬಳಿಕೆದಾರರ ವಿರುದ್ಧ ಸುಧಾರಣಾತ್ಮಕ ಹಾಗೂ ಸಂವಿಧಾನಾತ್ಮಕ ತಿದ್ದುಪಡಿ ತರಲು ಉದ್ದೇಶಿಸಿರುವ ಮಸೂದೆಯನ್ನು ಕಾಂಗ್ರೇಸ್ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ವಿರೋಧಿಸಿ ವಿಧಾನಸಭೆಯಲ್ಲಿ ಹಿಂದೆ ಅಂಗೀಕರಿಸಿದ್ದ ರೈತ ವಿರೋಧಿ ನಿರ್ಣಯವನ್ನು ಭಾರತೀಯ ಕಿಸಾನ್ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ ಕೆ.ಎನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ ಪಟ್ಟಣದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಭಾರತೀಯ ಕಿಸಾನ್ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಖೆ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ “ಕೇಂದ್ರ ಸರ್ಕಾರ ವಕ್ಫ್ ಮಂಡಳಿಯ ನಿರ್ವಹಣೆ ನಿಯಮಗಳಿಗೆ ಹೊಸದಾಗಿ ತಿದ್ದುಪಡಿ ಮಾಡಿ ದೇಶದ ಕೃಷಿ ಯೋಗ್ಯ, ಸರ್ಕಾರಿ ರೈತರ ಹಾಗೂ ಇತರೆ ಜಮೀನನ್ನು ಮಂಡಳಿ ಕಬಳಿಸುವ ಅವಕಾಶಕ್ಕೆ ತಡೆಯೊಡ್ಡಿರುವುದನ್ನು ಭಾರತೀಯ ಕಿಸಾನ್ ಸಂಘದ ಸಮಸ್ತ ರೈತರ ಪರವಾಗಿ ಸ್ವಾಗತಿಸುತ್ತದೆ” ಎಂದರು.

ಯಾವುದೇ ದಾಖಲೆಗಳಿಲ್ಲದೆ ಈ ದೇಶದ ಯಾವುದೇ ಆಸ್ತಿಯನ್ನು ಬೋರ್ಡ್ ಆಸ್ತಿ ಎಂದು ಘೋಷಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ 1995ರ ಬೋರ್ಡ್ ತಿದ್ದುಪಡಿ ಕಾಯ್ದೆ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತ್ತು ಹೀಗಾಗಿ ಮತ್ತೆ ಹೆಚ್ಚುವರಿಯಾಗಿ ಈ ದೇಶದ ರೈತರ ಲಕ್ಷಾಂತರ ಎಕರೆ ಕೃಷಿ ಭೂಮಿ ಜಮೀನು ಬಾಲಾಗಲು ಕಾರಣವಾಗಿತ್ತು ಹಾಗಾಗಿ ಇಂದು ಕಳೆದ ಹತ್ತು ವರ್ಷದಲ್ಲಿ 21ಲಕ್ಷ ಹೆಕ್ಟೇರ್ ಭೂಮಿಯನ್ನು ವಕ್ಫ್ ಮಂಡಳಿಯು ಕಬಳಿಸಿದ್ದಾರೆ, ಈ ದೇಶದ ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಾ ಮಸೂದೆಯ ವಿರುದ್ಧ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ನಿಲುವನ್ನು ಸಹ ಭಾರತೀಯ ಕಿಸಾನ್ ಸಂಘ ವಿರೋಧಿಸುತ್ತದೆ ಎಂದು ಹೇಳಿದರು.

ಭಾರತೀಯ ಕಿಸಾನ್ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷರು ನಾಗರಾಜಯ್ಯ ಮಾತನಾಡಿ ಈ ದೇಶದ ರೈತರು, ಸಾಮಾನ್ಯ ಜನರ ಪರವಾಗಿ, ಬಲಾಡ್ಯರು ಭ್ರಷ್ಟರು ಭೂ ಕಬಳಿಕೆದಾರರ ವಿರುದ್ಧ ಪ್ರಧಾನ ಮಂತ್ರಿಗಳು ಕೇಂದ್ರ ಸರ್ಕಾರದ ಗಟ್ಟಿಯಾದ ನಿಲುವನ್ನು ಭಾರತೀಯ ಕಿಸಾನ್ ಸಂಘ
ಅಭಿನಂದಿಸುತ್ತದೆ. ವಕ್ಫ್ ಬೋರ್ಡ್ ಇಂದಿನ ಕಾಂಗ್ರೆಸ್ ನೇತೃತ್ವ ಸರ್ಕಾರ ನೀಡಿದ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ ಹಾಗೂ ಕಾಂಗ್ರೆಸ್ ನೇತೃತ್ವ ಕರ್ನಾಟಕ ರಾಜ್ಯ ಸರ್ಕಾರ ಕಳೆದ ಮೂರು ತಿಂಗಳಲ್ಲಿ ಹಾಲಿನ ದರವನ್ನು ಗ್ರಾಹಕರಿಗೆ ಪ್ರತಿ ಲೀಟರ್ ಗೆ 9 ರೂಪಾಯಿ ಹೆಚ್ಚಿಸಿ ಹಾಲು ಉತ್ಪಾದಕರ ರೈತರಿಗೆ ಕೇವಲ ಎರಡು ರೂಪಾಯಿ ಹೆಚ್ಚಿಸಿರುವುದು ಖಂಡನಿಯ ಎಂದು ಅಗ್ರಹಿಸಿ ಮುಂದಿನ ದಿನಗಳಲ್ಲಿ ಕೆಎಂಎಫ್ ಹಾಲು ಉತ್ಪಾದಕ ರೈತರನ್ನು ವಂಚಿಸಿ ಗ್ರಾಹಕರಿಗೆ ಹೊರೆಯಾಗುವಂತೆ ಮಾಡಿ ಹಾಲು ,
ಮೊಸರು, ಮಜ್ಜಿಗೆ ಮತ್ತು ತುಪ್ಪ ಮಾರಾಟದಲ್ಲಿಯೂ ರೈತರಿಗೆ ಮೋಸ ಮಾಡಿ ಲಾಭಗಳಿಸುತ್ತಿದೆ .ಹಾಲು ಸಂಸ್ಕರಣ ವೆಚ್ಚವನ್ನು ಕಡಿಮೆ ಮಾಡಿ ರೈತರಿಗೆ ಲಾಭದಾಯಕ ಬೆಲೆಯನ್ನು ನೀಡಬೇಕೆಂದು ಭಾರತೀಯ ಕಿಸಾನ್ ಸಂಘ ಒತ್ತಾಯಿಸುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘ ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಖೆಯ ಉಪಾಧ್ಯಕ್ಷ ಅಂಜಿನಪ್ಪ ಯಲೆಯೂರು, ಖಜಾಂಚಿ ಚನ್ನಿಗರಾಯಪ್ಪ, ಜಿಲ್ಲಾ ಸಮಿತಿ ಕಾರ್ಯದರ್ಶಿ ಆರ್ .ಅಂಬಿಕಾ, ದೇವನಹಳ್ಳಿ ತಾಲೂಕು ಕಾರ್ಯದರ್ಶಿ ಶಶಿಧರ್ ಬೈಜಾಪುರ ,ಭಾಗ್ಯವಂತ. ಸೇರಿದಂತೆ ಗ್ರಾಮ ಸಮಿತಿ ಅಧ್ಯಕ್ಷರು ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *