ದಾವಣೆಗೆರೆ : ವಕ್ಫ್ ತಿದ್ದುಪಡಿ ಮಸೂದೆಯನ್ನು ಮುಸ್ಲಿಮರು ತೀವ್ರವಾಗಿ ವಿರೋಧಿಸಬೇಕು. ಬಸ್ ಮತ್ತು ರೈಲಿಗಳಿಗೆ ಬೆಂಕಿ ಇಡುವ ಮೂಲಕ ಸಾಮೂಹಿಕ ಕಗ್ಗೊಲೆ, ಹಿಂಸಾಚಾರ ನಡೆಸಿ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಬೇಕು ಎಂದು ಹೇಳಿಕೆ ನೀಡಿದ್ದ ಮುಸ್ಲಿಂ ಮುಖಂಡನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಪಾಲಿಕೆಯ ಮಾಜಿ ಸದಸ್ಯ ಅಹ್ಮದ್ ಕಬೀರ್ ಖಾನ್ ಬಂಧಿತ ಆರೋಪಿ. ಈತ ನೀಡಿದ್ದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈತನ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಿಂದ ತೀವ್ರ ಆಗ್ರಹ ವ್ಯಕ್ತವಾಗಿತ್ತು.
ನೀವು ಕೇವಲ ಪ್ರತಿಭಟನೆ ನಡೆಸುವುದರಿಂದ, ಡಿಸಿಗೆ ಮನವಿ ನೀಡುವುದರಿಂದ ಸಿಎಂಗೆ ಮನವಿ ನೀಡುವುದರಿಂದ ಏನೂ ಪ್ರಯೋಜನವಿಲ್ಲ. ಯುವಕರು ಈಗ ರಸ್ತೆಗೆ ಇಳಿಯಬೇಕು. ಹಳ್ಳಿ ಹಳ್ಳಿಯಲ್ಲಿ ಕನಿಷ್ಠ 10 ಜನ ಸಾಯಬೇಕು. ಏನು ಕಾಣಿಸಿದರೂ ಬೆಂಕಿ ಇಡಿ. ರೈಲಿಗೆ ಬೆಂಕಿ ಇಡಿ, ಬಸ್ ಗೆ ಬೆಂಕಿ ಇಡಿ, ಹೀಗೆ ಮಾಡಿದರೆ ಮಾತ್ರ ನಾವು ಸಾಧಿಸಲು ಸಾಧ್ಯ. ಈ ಮಸೂದೆಯನ್ನು ಇಷ್ಟು ಬೇಗ ರದ್ದು ಮಾಡಲಾಗುವುದಿಲ್ಲ. ನೂರಾರ ಜನರ ಬಲಿ ಕೊಡಬೇಕು. ಸಾಯಿಸಬೇಕು. ಹಿಂಸಾಚಾರ ನಡೆಸಬೇಕು ಆಗ ಮಾತ್ರ ಸಾಧ್ಯ ಎಂದು ಹೇಳಿದ್ದಾನೆ.
ಸ್ವಯಂಪ್ರೇರಿತವಾಗಿ ಈತನ ವಿರುದ್ದ ದೂರು ದಾಖಲಿಸಿಕೊಂಡ ಪೊಲೀಸರು ಸಾಮಾಜಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗ, ಕೋಮುಗಲಭೆಗೆ ಪ್ರಚೋದನೆ, ಹಿಂಸಾಚಾರಕ್ಕೆ ಪ್ರಚೋದನೆ ಮುಂತಾದ ಆರೋಪಗಳಡಿ ಬಂಧನಕ್ಕೊಳಪಡಿಸಿದ್ದಾರೆ.