ಲೋಕ ಸಮರ: ಡಾ‌.ಕೆ.ಸುಧಾಕರ್ ಸ್ಪರ್ಧೆ ವಿರೋಧಿಸಿ ಕೆಲ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಆಕ್ರೋಶ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗುತ್ತಿದ್ದಂತೆ ಡಾ.ಕೆ.ಸುಧಾಕರ್ ಅವರು ಟೆಂಪಲ್ ರನ್‌, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಮನೆಗಳಿಗೆ ಭೇಟಿ‌ ನೀಡುವ ಮೂಲಕ ಪ್ರಚಾರ‌ ಕೂಡ ಆರಂಭಿಸಿದ್ದಾರೆ.

ಇತ್ತ ಬಿಜೆಪಿ ಅಭ್ಯರ್ಥಿಯಾಗಿ ಡಾ. ಕೆ ಸುಧಾಕರ್ ಹೆಸರು ಘೋಷಣೆಯಾಗುತ್ತಿದ್ದಂತೆ ಪಕ್ಷದೊಳಗೆ ಅಸಮಾಧಾನ‌ ಕೂಡ ಭುಗಿಲೆದ್ದಿದೆ.

ಅಲೋಕ್ ವಿಶ್ವನಾಥ್ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಪಕ್ಷದ ಕಾರ್ಯಕರ್ತರು ಸೋಮವಾರವಷ್ಟೇ ಗೋ ಬ್ಯಾಕ್ ಸುಧಾಕರ್ ಅಭಿಯಾನ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇಂದು(ಮಂಗಳವಾರ) ದೊಡ್ಡಬಳ್ಳಾಪುರದಲ್ಲೂ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಡಾ.ಕೆ.ಸುಧಾಕರ್ ಸ್ಪರ್ಧೆ ವಿರೋಧಿಸಿ ಅವರ ಎದುರಲ್ಲೇ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಇಲ್ಲಿನ‌ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತ- ಮುಖಂಡರನ್ನು ವಿಶ್ವಾಸಕ್ಕೆ ಪಡೆಯುವ ಸಲುವಾಗಿ ಸ್ಥಳೀಯ ಶಾಸಕರ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಡಾ.ಕೆ.ಸುಧಾಕರ್ ಮಾತನಾಡಲು ಎದ್ದು‌ನಿಲ್ಲುತ್ತಿದ್ದಂತೆ ತಾಲೂಕಿನ ವಿವಿಧೆಡೆಯಿಂದ ಬಂದಿದ್ದ ಮುಖಂಡರು ಹಾಗೂ ಕಾರ್ಯಕರ್ತರು ತೀವ್ರ ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ತಿಳಿಸಿವೆ.

2023 ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದ ವೇಳೆ ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು, ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿ, ಮತದಾರರನ್ನು ಮರೆತಿದ್ದ ನಿಮಗೆ ಈಗ ನಮ್ಮ ನೆನಪಾಯಿತೇ ಎಂದು ಸಾಲಿ ಸಾಲು ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡರು‌ ಎನ್ನಲಾಗಿದೆ.

ದೊಡ್ಡಬೆಳವಂಗಲದಲ್ಲಿ ಕ್ರಿಕೆಟ್ ಟೂರ್ನಿ ವೇಳೆ ಬಿಜೆಪಿ ಕಾರ್ಯಕರ್ತನ ಕೊಲೆಯಾದಾಗ ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಬರಲಿಲ್ಲವೇಕೆ?,  ಜಿಲ್ಲಾಸ್ಪತ್ರೆಗೆ ಹಣ ಬಿಡುಗಡೆ ಮಾಡಿಸಲಿಲ್ಲ ಏಕೆ ? ಗ್ರಾಮಾಂತರ ಜಿಲ್ಲೆಗೆ ಮಂಜುರಾಗಬೇಕಿದ್ದ ಮೆಡಿಕಲ್ ಕಾಲೇಜನ್ನು ನಿಮ್ಮ ಜಿಲ್ಲೆಗೆ ತೆಗೆದುಕೊಂಡು ಹೋಗಿದ್ದು ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಮಾಡಿದ‌ ಅನ್ಯಾಯವಲ್ಲವೇ? ಎಂದು ಪ್ರಶ್ನಿಸಿದರು.

ನೀವು ಸಚಿವರಾಗಿದ್ದಾಗ ಸಾಮಾನ್ಯ ಕಾರ್ಯಕರ್ತರಿಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದದು ನಮಗೆಲ್ಲರಿಗೂ ನೆನಪಿದೆ. ಉಸ್ತುವಾರಿ ಸಚಿವರಾಗಿ ದೊಡ್ಡಬಳ್ಳಾಪುರ ನಗರಸಭೆ ಉದ್ಘಾಟನೆಗೆ ಬರದೇ ತಾತ್ಸರ ತೋರಿದ ನಿಮಗೆ ಈಗ ಮುಖಂಡರು, ಕಾರ್ಯಕರ್ತರು ನೆನಪಾಯಿತೆ ? ಎಂದು ಆಕ್ರೋಶ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.

ದೊಡ್ಡಬಳ್ಳಾಪುರ ಕ್ಷೇತ್ರವನ್ನು ಕಡೆಗಣಿಸಿದ ನಿಮ್ಮಂತಹ ಅಭ್ಯರ್ಥಿ ನಮಗೆ ಬೇಡ. ಮೊದಲು ಕ್ಷೇತ್ರ ಬಿಟ್ಟು ಹೊರಡಿ ಎಂದು ತರಾಟೆಗೆ ತೆಗೆದುಕೊಂಡರು ಎಂದು ಸಭೆಯಲ್ಲಿ ಹಾಜರಿದ್ದ ಬಿಜೆಪಿ‌ ಮುಖಂಡರೊಬ್ಬರು ತಿಳಿಸಿದರು.

ಮುಖಂಡರು ಹಾಗೂ ಕಾರ್ಯಕರ್ತರ ಸಾಲು ಸಾಲು ಪ್ರಶ್ನೆಗಳಿಂದ ತಬ್ಬಿಬ್ಬಾದ ಡಾ. ಸುಧಾಕರ್ ಮಾತನಾಡಲು ಮುಂದಾದರೂ ಗದ್ದಲ ನಿಂತಿರಲಿಲ್ಲ. ಗದ್ದಲ ವಿಕೋಪಕ್ಕೆ ತಿರುಗುವ ಸಾಧ್ಯತೆ‌ ಮನಗಂಡ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಕೃಷ್ಣಪ್ಪ, ಬಿ.ಸಿ.ನಾರಾಯಣಸ್ವಾಮಿ ಹಾಗೂ ಶಾಸಕ ಧೀರಜ್ ಮುನಿರಾಜು ಅವರು ಮಧ್ಯ ಪ್ರವೇಶಿಸಿ ಡಾ.ಸುಧಾಕರ್ ಮಾತಿಗೆ ಅವಕಾಶ ಮಾಡಿಕೊಟ್ಟರು. ಒಂದು ಹಂತದಲ್ಲಿ ಶಾಸಕರ ಮನವಿಗೂ ಕಾರ್ಯಕರ್ತರು ಕಿವಿಗೊಡಲಿಲ್ಲ. ಇದರಿಂದ ಡಾ.ಕೆ.ಸುಧಾಕರ್ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಎಲ್ಲರನ್ನು‌ ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸುವುದಾಗಿ ಹೇಳಿ ಸಭೆಯಿಂದ ಹೊರನಡೆದರು. ನಂತರ ನೆಲದ ಆಂಜನೇಯ ಸ್ವಾಮಿ ದೇವಾಲಯಕ್ಕೆ ಒಬ್ಬಂಟಿಯಾಗಿ ತೆರಳಿ ಪೂಜೆ ಸಲ್ಲಿಸಿದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *