ಓರ್ವ ಮಹಿಳೆ ಸೇರಿದಂತೆ ಇಬ್ಬರು ಆಗಂತುಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸದಸ್ಯರ ಪೀಠಕ್ಕೆ ಜಿಗಿದು ಹಳದಿ ಬಣ್ಣದ ಆಶ್ರುವಾಯು ಸಿಡಿಸುತ್ತಾ ಓಡಾಡಿದ ಘಟನೆ ಬುಧವಾರ ಲೋಕಸಭೆಯಲ್ಲಿ ನಡೆದಿದೆ.ಭಾರೀ ಭದ್ರತಾ ಲೋಪವುಂಟಾದ ಪ್ರಸಂಗ ನಡೆದಿದೆ.
ಇದರಿಂದ ಗೊಂದಲದ ವಾತಾವರಣ ಉಂಟಾಗಿ ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಸಂದರ್ಶಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಬೆಂಚುಗಳ ಮೇಲೆ ಘೋಷಣೆ ಕೂಗುತ್ತಾ ಇಬ್ಬರು ಹಾರುತ್ತಿರುವುದು ಕಂಡುಬಂದಿತು.
ಇವತ್ತು ಲೋಕಸಭೆಯ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗೆ ದುಷ್ಕರ್ಮಿಗಳು ಜಿಗಿದು ಅವಾಂತರ ಸೃಷ್ಟಿಸಿದ ಘಟನೆ ನಿಜಕ್ಕೂ ಅತ್ಯಂತ ಆಶ್ಚರ್ಯಕರವಾದಂಥದ್ದು, ಆಘಾತಕಾರಿಯಾದಂಥದ್ದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
ಅವರು ಯಾರು, ಹೊಗೆ ಚಿಮ್ಮಿಸುವ ಕ್ಯಾನಿಸ್ಟರುಗಳನ್ನು ಹೊತ್ತು ಹೇಗೆ ಒಳ ಬಂದರು, ಅವರ ಉದ್ದೇಶವೇನು ಅನ್ನುವುದೆಲ್ಲದರ ಬಗ್ಗೆಯೂ ಶೀಘ್ರ ತನಿಖೆ – ತೀವ್ರ ತನಿಖೆ ಖಂಡಿತಾ ನಡೆದೇ ನಡೆಯುತ್ತದೆ, ಸತ್ಯ ಹೊರಬಂದೇ ಬರುತ್ತದೆ ಅನ್ನುವ ಬಗ್ಗೆ ಯಾವುದೇ ಅನುಮಾನವಿಲ್ಲ. ಆದರೆ, ಶ್ರೀ ನರೇಂದ್ರ ಮೋದಿಯವರ ಆಳ್ವಿಕೆಯಲ್ಲಿ ಭಾರತ ಏರಿರುವ ಎತ್ತರ ಕಂಡು ಸಹಿಸಲಾರದ ಕೆಲವು ಆಂತರಿಕ ಶಕ್ತಿಗಳು ಎಂಥಾ ದೇಶವಿರೋಧೀ ಕೃತ್ಯಕ್ಕೂ ಮುಂದಾಗುತ್ತಾರಲ್ಲಾ ಅನ್ನುವುದು ನೋವಿನ ಸಂಗತಿ ಎಂದಿದ್ದಾರೆ.
ನಾಳೆ ನಾಡಿದ್ದರಲ್ಲಿ ಕೆಲವು ಮಹತ್ವದ ಮಸೂದೆಗಳು ಅಂಗೀಕಾರಗೊಳ್ಳಲಿವೆ; ಇಂಥಾ ಸಂದರ್ಭದಲ್ಲಿ ನಡೆದಿರುವ ಈ ಘಟನೆ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಇದರಲ್ಲಿ ಯಾರ್ಯಾರೆಲ್ಲರ ಕೈವಾಡವಿದೆ ಅನ್ನುವುದು ಬಯಲಾಗಬೇಕು, ಎಲ್ಲರಿಗೂ ಅತ್ಯುಗ್ರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಸದ್ಯಕ್ಕೆ, ಈ ಘಟನೆಯಿಂದ ಆಘಾತವಾಗಿದೆ ಅನ್ನುವುದನ್ನು ಬಿಟ್ಟರೆ, ಅದೃಷ್ಟವಶಾತ್ ಇನ್ನಾವುದೇ ಅನಾಹುತ ಆಗಿಲ್ಲ. ಹಾಗಾಗಿ, ತನಿಖೆಗೂ ಮುಂಚೆಯೇ ಯಾವುದೇ ಥರದ ವದಂತಿಗಳನ್ನಾಗಲೀ ತಪ್ಪು ಮಾಹಿತಿಗಳನ್ನಾಗಲೀ ಹರಡುವ ಮೂಲಕ ಶಾಂತಿ ಕದಡುವ ಯತ್ನ ಮಾಡಬಾರದು, ತನಿಖೆ ಮುಗಿಯಲಿ, ಸತ್ಯ ಹೊರಬರಲಿ ಎಂದು ಮನವಿ ಮಾಡಿದ್ದಾರೆ.