ಲಿಟ್ಲ್‌ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಸಂಕಲ್ಪ ಕಾರ್ಯಕ್ರಮ: ಕಣ್ಮನ ಸೆಳೆದ ಅಪ್ಪು‌ ಡ್ಯಾನ್ಸ್, ಕಾಂತಾರ, ಭಜರಂಗಿ ನೃತ್ಯ..!

ದೊಡ್ಡಬಳ್ಳಾಪುರ: ತಾಲೂಕಿನ ಲಿಟ್ಲ್‌ ಮಾಸ್ಟರ್ ಪಬ್ಲಿಕ್ ಶಾಲೆಯಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಯೋಗ, ಕ್ರೀಡೆ, ಕರಾಟೆ, ಸಾಂಸ್ಕೃತಿಕ ಸೇರಿಂದತೆ ಮನರಂಜನಾ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದು ಶಾಲೆಯ ಕಾರ್ಯದರ್ಶಿ ಕೆ.ಜಿ ಶ್ರೀನಿವಾಸ ಮೂರ್ತಿ ತಿಳಿಸಿದರು.

ಭಾನುವಾರ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದ ಅವರು, 2006ರಲ್ಲಿ ಸಾಧನ ಎಜುಕೇಶನ್ ಟ್ರಸ್ಟ್ ಅಡಿಯಲ್ಲಿ ಲಿಟ್ಲ್‌ ಮಾಸ್ಟರ್ ಪಬ್ಲಿಕ್ ಶಾಲೆ ಆರಂಭ ಮಾಡಲಾಯಿತು. ಸದ್ಯ 1 ರಿಂದ 10ನೇ ತರಗತಿವರೆಗೆ 1,041 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 18 ವರ್ಷಗಳಿಂದ ನಮ್ಮ ಶಾಲೆ ಗ್ರಾಮೀಣ, ನಗರ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದೆ. ಪ್ರತಿ ವರ್ಷ 100% ಫಲಿತಾಂಶ ಬರುತ್ತಿದೆ ಎಂದು ಹೇಳಿದರು.

ಇದೆ ವೇಳೆ ಜೂನಿಯರ್ ಪುನೀತ್ ರಾಜ್ ಕುಮಾರ್ ಎಂದೆ ಹೆಸರು ವಾಸಿಯಾಗಿರುವ ಸಕಲೇಷಪುರದ ಅಪ್ಪು ಮಾತನಾಡಿ,  ಡಾ.ಪುನೀತ್ ರಾಜ್ ಕುಮಾರ್ ಸಾಕಷ್ಟು ಸಮಾಜ ಸೇವೆ ಮಾಡಿದ್ದಾರೆ. ಜೀವನದಲ್ಲಿ ಪ್ರತಿಯೊಬ್ಬರು ಅವರಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರನ್ನು ಅನಾಥಾಶ್ರಮಕ್ಕೆ ಕಳುಹಿಸಬೇಡಿ, ಶಿಕ್ಷಣದ ಜೊತೆ ಮಾನವೀಯ ಗುಣಗಳು, ಸಾಮಾಜಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.

ರಾಜ್ಯದ ವಿಜ್ಞಾನ ಸಂಪನ್ಮೂಲ ವ್ಯಕ್ತಿ ಸತೀಶ್ ಕುಮಾರ್ ಮಾತನಾಡಿ, ನೂರು ದೇವಸ್ಥಾನ ನಿರ್ಮಾಣ ಮಾಡುವ ಬದಲು ಒಂದು ಶಾಲೆ ನಿರ್ಮಾಣ ಮಾಡಿ ಎಂಬ ನಾಣ್ಣುಡಿಯಂತೆ ಗ್ರಾಮೀಣ ಭಾಗದಲ್ಲಿ ಉತ್ತಮ ಶಾಲೆ ನಿರ್ಮಾಣ ಮಾಡಿದ್ದಾರೆ ಎಂದರು.

ಮಕ್ಕಳನ್ನು ಕ್ರೀಯಾಶೀಲ, ಚಿಂತನಶೀಲರನ್ನಾಗಿ ಮಾಡುವಲ್ಲಿ ಶ್ರೀನಿವಾಸ್ ಮೂರ್ತಿಯವರು ಶ್ರಮಿಸುತ್ತಿದ್ದಾರೆ. ಭಾಷೆ ಕಲಿಯಲು ಸುಂದರವಾದ ವಾತಾವರಣ ಬೇಕು. ಅದು ಈ ಶಾಲೆಯಲ್ಲಿ ಕಲ್ಪಿಸಲಾಗಿದೆ ಎಂದು ಗುಣಗಾನ ಮಾಡಿದರು.

ವೇದಿಕೆ ಕಾರ್ಯಕ್ರಮ ಮುಗಿದ ನಂತರ ಪಡುವಣದಲಿ ಸೂರ್ಯರಶ್ಮಿ ಇಳೆಯ ಗರ್ಭ ಸೇರಿದಂತೆ, ಇಲ್ಲಿ ಲಿಟ್ಲ್ ಮಾಸ್ಟಾರುಗಳ ಕಲರವ ಮೈದೆಳೆದು, ಸಂಭ್ರಮ ಗರಿಬಿಚ್ಚಿತು. ಬಣ್ಣದೋಕುಳಿ ಚೆಲ್ಲುವ ದೀಪದ ಬೆಳಕಲ್ಲಿ ಮುದ್ದು ಮಕ್ಕಳ ನರ್ತನ ಪೋಷಕ-ಸಭಿಕರ ಮೈ ನವಿರೇಳಿಸಿತು.

‘ಸಂಕಲ್ಪ’ ತೊಟ್ಟು ಅಖಾಡಕ್ಕಿಳಿದ ಚಿಣ್ಣರು ತಮ್ಮಲ್ಲಿನ ಪ್ರತಿಭೆಯನ್ನು ನೃತ್ಯ ಮಾಡುವುದರ ಮೂಲಕ  ವೇದಿಕೆಯಲ್ಲಿ ಓರೆಗಚ್ಚಿದರು. ಕಾಂತಾರ, ಭಜರಂಗಿ, ಕಾಂಚನಾ ಸಿನಿಮಾದ ನೃತ್ಯಕ್ಕೆ ಪೋಷಕರು ಫಿಧಾ ಆದರು. ಬೊಂಬೆ ಹೇಳುತೈತೆ ನೃತ್ಯಕ್ಕೆ ಮೊಬೈಲ್ ನಲ್ಲಿ  ಟಾರ್ಚ್ ಹಾಕುವ ಮೂಲಕ ಡಾ.ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸೂಚಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯಿಂದ ಗ್ರಾಮದ ಗಣ್ಯರು, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು.

Leave a Reply

Your email address will not be published. Required fields are marked *