ಭಾರತೀಯ ಹವಮಾನ ಇಲಾಖೆಯ ಪ್ರಕಾರ ಈ ಬಾರಿ ರಾಜ್ಯಕ್ಕೆ ಮುಂಗಾರು ಮಳೆ ಒಂದು ವಾರ ತಡವಾಗಿ ಆಗಮಿಸಿದೆ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆಯಂತೆ ಮಳೆಯಾಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ, ಮತ್ತು ಬರಗಾಲದ ಮುನ್ಸೂಚನೆಯನ್ನು ಇಲಾಖೆ ನೀಡಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಹನುಮಂತರಾಯ ತಿಳಿಸಿದರು.
ಮಳೆ ಹೆಚ್ಚು- ಕಡಿಮೆಯಾಗಲು ಲಾನಿನೊ ಹಾಗೂ ಎಲಿನಿನೊ ಪರಿಣಾಮ ಕಾರಣ
ವಾಡಿಕೆಗಿಂತ ಕಡಿಮೆ ಮಳೆ ಹಾಗೂ ಹೆಚ್ಚು ಮಳೆ ಬೀಳುವುದಕ್ಕೆ ಎಲಿನಿನೊ ಎಫೆಕ್ಟ್ ಹಾಗೂ ಲಾನಿನೊ ಎಫೆಕ್ಟ್ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಎಲಿನಿನೊ ಪರಿಣಾಮದಿಂದ ಮಳೆ ಹೆಚ್ಚು ಬೀಳುತ್ತದೆ, ಲಾನಿನೊ ಪರಿಣಾಮದಿಂದ ಕಡಿಮೆ ಮಳೆ ಆಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಮಹಾ ಸಾಗರಗಳಲ್ಲಿ ಹವಾಮಾನ ವೈಪರೀತ್ಯ ಉಂಟಾದಾಗ ಮಳೆ ಹೆಚ್ಚು, ಕಡಿಮೆ ಆಗುತ್ತದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಎಲಿನಿನೊ ಪರಿಣಾಮ ಇರುತ್ತದೆ. ನಂತರ ಲಾನಿನೊ ಪರಿಣಾಮ ಅಸ್ತಿತ್ವಕ್ಕೆ ಬರುತ್ತದೆ.
ಮಹಾ ಸಾಗರಗಳಲ್ಲಿ ತಾಪಮಾನ ಹೆಚ್ಚಾದಾಗ ಆ ಬಿಸಿಯನ್ನು ಏಷ್ಯಾ ಖಂಡಕ್ಕೆ ತಳ್ಳಿದಾಗ ಎಲಿನಿನೊ ಪರಿಣಾಮ ಉಂಟಾಗಿ ಕಾಲಕಾಲಕ್ಕೆ ಭಾರತದಲ್ಲಿ ಮಳೆ ಆಗುತ್ತದೆ. ನಾಲ್ಕು ವರ್ಷಗಳ ನಂತರ ಈಗ ಲಾನಿನೊ ಪರಿಣಾಮ ಆರಂಭವಾಗಿದೆ. ಲಾನಿನೊ ಪರಿಣಾಮದಿಂದ ಭಾರತದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಾಧ್ಯತೆ ಇದ್ದು, ಅಮೆರಿಕ, ಯೂರೋಪ್ ಪ್ರದೇಶಗಳಲ್ಲಿ ಹೆಚ್ಚು ಮಳೆ ಆಗಲಿದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳಿನಲ್ಲಿ ವಾಡಿಕೆಯಂತೆ ಮಳೆಯಾಗಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆ, ಮತ್ತು ಬರಗಾಲದ ಮುನ್ಸೂಚನೆ ಇರುವುದರಿಂದ ರೈತರು ಹವಾಮಾನಕ್ಕೆ ತಕ್ಕಂತೆ ಬೆಳೆಗಳು ಆಯ್ಕೆ ಮಾಡಿ ಬೆಳೆಯುವುದು ಉತ್ತಮ ಎಂದು ತಿಳಿಸಿದ್ದಾರೆ.
ಜೂನ್ ಮತ್ತು ಜುಲೈ ತಿಂಗಳ ಆರಂಭದಲ್ಲಿ ಬೀಳುವ ಮಳೆಯನ್ನು ಪೋಲಾಗದಂತೆ ತಡೆದು ಹಲವು ವಿಧಗಳಲ್ಲಿ ಶೇಖರಿಸಿಕೊಂಡು ವಾಡಿಕೆಗಿಂತ ಕಡಿಮೆ ಮಳೆಯಾದ ಸಂದರ್ಭದಲ್ಲಿ ನೀರನ್ನು ಮರು ಬಳಕೆ ಮಾಡಿಕೊಳ್ಳಬಹುದು ಇದರಿಂದ ಬರಗಾಲವನ್ನು ಎದುರಿಸಲು ಅನುಕೂಲವಾಗಲಿದೆ ಎಂದರು.
ಬೇಸಾಯದ ಬಗ್ಗೆ ಕೃಷಿ ವಿಜ್ಞಾನಿಗಳಿಂದ ಸಲಹೆ
ರೈತರು ಯಾವುದೇ ಬೆಳೆ ಬೆಳೆಯುದಕ್ಕಿಂತ ಮೊದಲು ಹತ್ತಿರದ ಕೃಷಿಗೆ ಸಂಬಂಧಿಸಿದ ಕೇಂದ್ರಕ್ಕೆ ಭೇಟಿ ನೀಡಿ ಕೃಷಿ ವಿಜ್ಞಾನಿಗಳಿಂದ ಸಲಹೆ ಪಡೆದು ಬೆಳೆ ಬೆಳೆಯುದಕ್ಕೆ ಮುಂದಾಗಬೇಕು, ಮಳೆ ಮುನ್ಸೂಚನೆ, ಮಣ್ಣಿನ ಪರೀಕ್ಷೆ, ಯಾವ ಮಣ್ಣಿನಲ್ಲಿ ಯಾವ ಬೆಳೆ ಬೆಳೆಯಬಹುದು, ಸಾವಯವ ಕೃಷಿಯನ್ನ ಹೇಗೆ ಮಾಡೋದು, ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ಪಡೆಯುವುದು ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಕೃಷಿ ವಿಜ್ಞಾನಿಗಳಿಂದ ಸಲಹೆ ಪಡೆದು ಬೇಸಾಯ ಮಾಡಿದರೆ ರೈತರು ಕೃಷಿಯಲ್ಲಿ ನಷ್ಟಕ್ಕೆ ಒಳಗಾಗುವುದಿಲ್ಲ ಎಂದರು.