ಲಕ್ಷಾಂತರ ರೂ. ಬೆಲೆ ಬಾಳುವ ಹಂದಿ, ಕುರಿ,‌ ಮೇಕೆ ಕಳ್ಳತನ ಮಾಡುತ್ತಿದ್ದ ಕಳ್ಳರ ಬಂಧನ: ಪೊಲೀಸರ ಕಾರ್ಯಾಚರಣೆಯಿಂದ ನಿಟ್ಟುಸಿರು ಬಿಟ್ಟ ರೈತರು

ದೊಡ್ಡಬಳ್ಳಾಪುರ : ಬೆಂಗಳೂರು ನಗರ ಹಾಗೂ ಗ್ರಾಮಾಂತರ ಸುತ್ತಾಮುತ್ತ ಹಂದಿ, ಕುರಿ, ಮೇಕೆ ಸೇರಿದಂತೆ ಜಾನುವಾರುಗಳ ಕಳವು ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾತ್ರೋರಾತ್ರಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಉತ್ತರ ಕರ್ನಾಟಕ ಮೂಲದ ಅಂದರೆ ರಾಯಚೂರಿನ ಅಂಬರೀಶ್ ಅಲಿಯಾಸ್ ಬುಲ್ಲ ಅಂಬರೀಶ್, ಶೇಖಪ್ಪ, ಮತ್ತು ಗದಗ ಮೂಲದ ಯಲ್ಲಪ್ಪ ಗೊಲ್ಲಾರ್ ಅನ್ನೂ ಮೂವರು ಖದೀಮರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದ ತಂಡ ಯಶಸ್ವಿಯಾಗಿದೆ.

ಕಳೆದ ಬಾರಿಯ ಯುಗಾದಿ ಹಬ್ಬ ಇನ್ನೇನು ಕೆಲವೇ ದಿನಗಳು‌ ಇರುವಾಗಲೇ ಹಂದಿ ಸಾಕಾಣಿಕೆದಾರರಿಗೆ ಬಿಗ್ ಶಾಕ್ ಒಂದು ಬಂದೊದಗಿತ್ತು. ಶೆಡ್ ನಲ್ಲಿದ್ದ ಹಂದಿಗಳು ರಾತ್ರೋರಾತ್ರಿ ಕಾಣೆಯಾಗಿದ್ದವು.

ಯುಗಾದಿ ಹಬ್ಬ ಆದ ಮರುದಿನ ಬರೋದೇ ವರ್ಷ ತೊಡಕು. ವರ್ಷ ತೊಡಕು ದಿನ‌ ಮಾಂಸ ಪ್ರಿಯರಿಗೆ ಹಬ್ಬವೋ ಹಬ್ಬ. ವರ್ಷ ತೊಡಕು ದಿನದಂದು ಮಾಂಸ ಮಾರಾಟ ಬರಾಟೆ ಮಾರುಕಟ್ಟೆಯಲ್ಲಿ ಬಹಳ ಜೋರಾಗಿರುತ್ತದೆ. ಈ ಹಿನ್ನೆಲೆ ವರ್ಷ ತೊಡಕು ಇನ್ನೊಂದು ವಾರ ಇರುವಾಗಲೇ ಶೆಡ್ ನಲ್ಲಿರುವ ಹಂದಿಗಳು ರಾತ್ರೋರಾತ್ರಿ‌ ಕಳ್ಳರ ಕೈಚಳಕದಿಂದ ಮಂಗಮಾಯವಾಗಿದ್ದವು.

ದೊಡ್ಡಬಳ್ಳಾಪುರ, ರಾಜಾನುಕುಂಟೆ, ದೇವನಹಳ್ಳಿಯಲ್ಲಿ‌ ಹಂದಿ ಕಳ್ಳರ ಹಾವಳಿಯಿಂದ ಹಂದಿ ಸಾಕಾಣಿಕೆದಾರರು ನಲುಗಿಹೋಗಿದ್ದರು. ಸಾಮಾನ್ಯವಾಗಿ ಹಂದಿ‌ ಶೆಡ್ ಗಳು ಊರ ಹೊರವಲಯದಲ್ಲಿ ಇರುತ್ತವೆ. ಮಾಲೀಕರು ಹಂದಿ ಶೆಡ್ ಬಳಿ ಇಲ್ಲದೇ ಇರುವಾಗ, ಹೊಂಚಾಕಿ ರಾತ್ರೋರಾತ್ರಿ‌‌ ಬರುವ ಕಳ್ಳರು, ಸಿಸಿಟಿವಿ ಇದ್ದರೂ ರಾಜಾರೋಷವಾಗಿ ಶೆಡ್ ಗೆ ನುಗ್ಗಿ ಸಿಕ್ಕಸಿಕ್ಕ ಹಂದಿಗಳನ್ನು ಗೂಡ್ಸ್ ವಾಹನಕ್ಕೆ‌‌ ತುಂಬಿಕೊಂಡು ಪರಾರಿಯಾಗಿದ್ದರು….

ಮಾಲೀಕರು ಬೆಳಗ್ಗೆ ಶೆಡ್ ಬಳಿ ಬಂದು ನೋಡಿದಾಗ ಹಂದಿಗಳು ನಾಪತ್ತೆಯಾಗಿರುವುದು ಕಂಡುಬಂದಿತ್ತು. ಮೂರು ಕಡೆ ಸುಮಾರು 120ಕ್ಕೂ‌ ಹೆಚ್ಚು ಹಂದಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿತ್ತು.

ಎಲ್ಲೆಲ್ಲಿ, ಎಷ್ಟೆಎಷ್ಟು ಹಂದಿ‌ ಕಳವು….

ದೊಡ್ಡಬಳ್ಳಾಪುರ

ದೊಡ್ಡಬಳ್ಳಾಪುರ ತಾಲೂಕಿನ ಬೈರಸಂದ್ರ ಗ್ರಾಮದಲ್ಲಿ ಮಾ.23ರ ಶನಿವಾರ ರಾತ್ರಿ ಹಂದಿ ಶೆಡ್ ಗೆ ನುಗ್ಗಿದ ಕಳ್ಳರು ಸುಮಾರು 34 ಹಂದಿ ಮರಿಗಳ ಕಳ್ಳತನ ಮಾಡಿದಲ್ಲದೇ, ಮಾ.25ರ ಸೋಮವಾರ ರಾತ್ರಿ ಕೂಡ ಅದೇ ಹಂದಿ ಶೆಡ್ ಗೆ ನುಗ್ಗಿ 17 ತಾಯಿ ಹಂದಿಗಳ ಕಳವು ಮಾಡಿದ್ದಾರೆ ಎಂದು ಹಂದಿ ಶೆಡ್ ಮಾಲೀಕರು ಆರೋಪಿಸಿದ್ದರು.

ರಾಜಾನುಕುಂಟೆ

ಅದೇರೀತಿ‌ ಯಲಹಂಕದ ಹೆಸರಘಟ್ಟ ಹೋಬಳಿಯ ರಾಜಾನುಕುಂಟೆ ಸಮೀಪದ ಸೀತ ಕೆಂಪನಹಳ್ಳಿ ಬಳಿ ಮಾ.22 ರಾತ್ರಿ ಹಂದಿ ಶೆಡ್ ಕಾವಲುಗಾರನಿಗೆ ಹೆದರಿಸಿ ಮೊಬೈಲ್ ಕಸಿದು ಸುಮಾರು 20 ಹಂದಿಗಳನ್ನು ಕಳವು ಮಾಡಲಾಗಿದೆ ಎಂದು ತಿಳಿದುಬಂದಿತ್ತು.

ದೇವನಹಳ್ಳಿ

ಇದರ ಜೊತೆಗೆ ವಿಶ್ವನಾಥಪುರ‌ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನಿಮಂಗಲ ಗ್ರಾಮದ ಲೋಕೇಶ್ ಎಂಬುವರ ಶೆಡ್ ನಲ್ಲಿ ಮಾ.21ರಂದು ರಾಜಾರೋಷವಾಗಿ 50 ಹಂದಿಗಳನ್ನು ಕಳ್ಳತನ ಮಾಡಿದ್ದಾರೆ.‌ ಶೆಡ್ ಗೆ ಎಂಟ್ರಿ ಆದ 6 ಜನರ ತಂಡ, ಓರ್ವ ಕಾವಲು ಕಾಯುತ್ತಿದ್ದರೆ, ಮತ್ತೆ ನಾಲ್ಕು ಜನ ಹಂದಿಗಳನ್ನು ಶೆಡ್ ನಿಂದ ಹೊತ್ತುಕೊಂಡು ಬಂದು ಲೋಡ್ ಮಾಡುತ್ತಿದ್ದರು. ಮತ್ತೊಬ್ಬ ವಾಹನ ಮೇಲೆ ನಿಂತು ತುಂಬಿಕೊಳ್ಳುತ್ತಿದ್ದ.‌ ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿದ್ದವು.

ಹೀಗೆ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 120ಕ್ಕೂ‌ ಹೆಚ್ಚು ಹಂದಿಗಳನ್ನು ಕಳ್ಳರು ಕದ್ದೊಯ್ದಿರುವ ಪ್ರಕರಣ ನಡೆದಿತ್ತು.

ವರ್ಷವಿಡೀ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ್ದ ಪ್ರಾಣಿಗಳನ್ನು ಕ್ಷಣಮಾತ್ರದಲ್ಲಿ ಕಳ್ಳತನ ಮಾಡುತ್ತಿರುವ‌ ಕಳ್ಳರ ಗ್ಯಾಂಗ್. ಹಬ್ಬಕ್ಕೆ ಮಾರಾಟ ಮಾಡಲು ಮಾಲೀಕರು ಸಿದ್ಧತೆ ಮಾಡಿಕೊಂಡಿದ್ದರು. ವರ್ಷವೆಲ್ಲಾ ಸಾಕಿ ಇನ್ನೇನು ಹಬ್ಬಕ್ಕೆ‌‌ ಮೂರ್ಕಾಸು‌‌ ಲಾಭವನ್ನು‌ ನೋಡುತ್ತೇವೆ ಎಂದುಕೊಂಡಿದ್ದ ರೈತರಿಗೆ ಕಳ್ಳರ ಹಾವಳಿಯಿಂದ ಈಗ ಶಾಕ್‌ ಹೊಡೆದಂತೆ ಆಗಿತ್ತು. ಲಕ್ಷಾಂತರ ರೂ. ನಷ್ಟ ಅನುಭವಿಸಿದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

ಇದೀಗ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಅಂಬರೀಶ್, ಶೇಖಪ್ಪ, ಮತ್ತು ಯಲ್ಲಪ್ಪ ಅನ್ನೂ ಮೂವರು ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಬಂಧಿತ ಮೂವರು ಆರೋಪಿಗಳು ಉತ್ತರ ಕರ್ನಾಟಕ ಮೂಲದವರಾಗಿದ್ದು, ಸಂತೆಯ ಸೋಗಿನಲ್ಲಿ ಬೆಂಗಳೂರು ಅಕ್ಕ ಪಕ್ಕದ ಜಿಲ್ಲೆಗಳ ರೈತರ ಶೆಡ್ ಗಳಿಗೆ ಬಂದು ರಾತ್ರೋ ರಾತ್ರಿ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಆರೋಪಿಗಳ ವಿರುದ್ಧ ಈಗಾಗಲೆ ಹಲವು ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದು ಹಲವು ಬಾರಿ ಕಳ್ಳತನ ಕೃತ್ಯಗಳನ್ನ ಎಸಗಿರುವುದು ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಇನ್ನೂ ಬಂಧಿತ ಮೂರು ಜನ ಆರೋಪಿಗಳಲ್ಲಿ ಓರ್ವ ಕದ್ದ ನಂತರ ಸಿಸಿ ಕ್ಯಾಮರಾ ಮುಂದೆ ಡ್ಯಾನ್ಸ್ ಮಾಡುವ ಚಾಳಿಯನ್ನ ಹೊಂದಿದ್ದು ಆರೋಪಿಗಳ ಬಂಧನದಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಒಟ್ಟಾರೆ ಮೈ ಕೈ ಎಲ್ಲಾ ಗಟ್ಟಿ ಮುಟ್ಟಾಗಿದ್ರು ದುಡಿದು ತಿನ್ನೋದನ್ನ ಬಿಟ್ಟು ಸುಲಭವಾಗಿ ಹಣ ಮಾಡಿ ಬಿಸಿ ಬಿಸಿ ಬಿರಿಯಾನಿ ತಿಂದವರಿಗೆ ಇದೀಗ ಪೊಲೀಸರು ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯಲು ಕಳಿಸಿದ್ದಾರೆ.

ಇಷ್ಟಾದರೂ, ತಾಲೂಕಿನಲ್ಲಿ ಸಾಕು ಪ್ರಾಣಿಗಳ ಕಳ್ಳತನ ಪ್ರಕರಣಗಳು‌ ಇತ್ತೀಚೆಗೆ ಹೆಚ್ಚಾಗುತ್ತಲೇ ಇವೆ. ಹಂದಿಯ ಜೊತೆಗೆ ಕುರಿ, ಮೇಕೆ ಕಳ್ಳತನ ಪ್ರಕರಣಗಳೂ ಕೂಡ ಹೆಚ್ಚಾಗುತ್ತಿವೆ‌. ರೈತರು ರಾತ್ರಿಯಿಡೀ ಸಾಕು ಪ್ರಾಣಿಗಳನ್ನು ಕಾಯಬೇಕಾದ ಸ್ಥಿತಿ ಎದುರಾಗಿದೆ. ಕಳವು ಪ್ರಕರಣಕ್ಕೆ ಪೊಲೀಸರು ಬ್ರೇಕ್ ಹಾಕದೆ ಇದ್ದಲ್ಲಿ ಯುವಕರ ಸ್ವಾವಲಂಬಿ ಬದುಕಿಗೆ ಕೊಳ್ಳಿ ಇಟ್ಟಾಂತಾಗುತ್ತದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತು ಖದೀಮರನ್ನು ಪತ್ತೆಹಚ್ಚಿ ಹೆಡೆಮುರಿ ಕಟ್ಟುತ್ತಾ ಕಾದು ನೋಡಬೇಕಿದೆ….

Leave a Reply

Your email address will not be published. Required fields are marked *

error: Content is protected !!