ಚೆನ್ನೈ : ನಾಲ್ಕು ವರ್ಷಗಳ ನಂತರ ತವರಿನಂಗಳದಲ್ಲಿ ಲಕ್ನೋ ಸೂಪರ್ ಜೆಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಗಳು ರನ್ ಹೊಳೆ ಹರಿಸಿದರು, ಅತ್ಯಂತ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 12 ರನ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ ಆರಂಭವನ್ನು ಪಡೆಯಿತು, ಮೊದಲ ಪಂದ್ಯದಲ್ಲಿ ಶತಕ ವಂಚಿತರಾಗಿದ್ದ ಆರಂಭಿಕ ಬ್ಯಾಟ್ಸ್‌ಮನ್ ರುತುರಾಜ್ ಗಾಯಕ್ವಾಡ್ (57) ಹಾಗೂ ಕಾನ್ವೆ (47) ಜೊತೆಯಾಟದಿಂದಾಗಿ ಮೊದಲ ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿ ಭದ್ರ ಬುನಾದಿ ಹಾಕಿದರು.
ನಂತರ ಬಂದ ಶಿವಂ ದುಬೆ (27), ಮೊಯಿನ್ ಆಲಿ (19), ಅಂಬಾಟಿ ರಾಯಡು (27) ಹಾಗೂ ನಾಯಕ ಮಹೇಂದ್ರ ಸಿಂಗ್ ದೋನಿ (12) ತಂಡಕ್ಕೆ ಉಪಯುಕ್ತ ಕೊಡುಗೆ ನೀಡುವುದರೊಂದಿಗೆ ತಂಡದ ಮೊತ್ತ 217 ರನ್ ಗಳಿಸಿದರು.
ಲಕ್ನೊ ಸೂಪರ್ ಜೆಂಟ್ಸ್ ಪರವಾಗಿ ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ಮಾರ್ಕ್ ವುಡ್ ತಲಾ ಎರಡು ವಿಕೆಟ್ ಪಡೆದರೆ ಉಳಿದ ಬೌಲರ್ ಗಳು ದುಬಾರಿಯಾದರು.
ಗುರಿ ಬೆನ್ನಟ್ಟಿದ ಸೂಪರ್ ಜೆಂಟ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಮೇಯರ್ಸ (53) ಹಾಗೂ ನಾಯಕ ಕೆ. ಎಲ್. ರಾಹುಲ್ (20) ರನ್ ಗಳಿಸಿ ಮೊದಲ ವಿಕೆಟ್ ನಷ್ಟಕ್ಕೆ 79 ರನ್ ಗಳಿಸಿ ಆತ್ಮ ವಿಶ್ವಾಸ ಮೂಡಿಸಿದ್ದರು, ಚಾಣಾಕ್ಷತೆಯನ್ನು ತೋರಿಸಿ ಸ್ಪಿನ್ನರ್ ಮೊಯಿನ್ ಆಲಿ ಅವರಿಗೆ ಬಾಲ್ ನೀಡಿದ ನಾಯಕ ಮಹೇಂದ್ರ ಸಿಂಗ್ ದೋನಿ ಜೊತೆಯಾಟ ಮುರಿಯುವಲ್ಲಿ ಯಶಸ್ವಿಯಾದರು.
ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗಳಾದ ದೀಪಕ್ ಹೂಡ (2) ಹಾಗೂ ಕೃನಲ್ ಪಾಂಡ್ಯ (9) ಬೇಗನೆ ವಿಕೆಟ್ ಒಪ್ಪಿಸಿದರು, ನಂತರ ಬಂದ ಮಾರ್ಕ್ ಸ್ಟೋನಿಸ್ (21), ನಿಕೋಲಸ್ ಪೂರನ್ (32), ಆಯುಷ್ ಬಧೋನಿ(23) ಹಾಗೂ ಕೆ. ಗೌತಮ್ (17) ರನ್ ಗಳಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.
ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಲ್ ರೌಂಡರ್ ಮೋಯಿನ್ ಆಲಿಗೆ 4 ವಿಕೆಟ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ತುಷಾರ್ ದೇಶಪಾಂಡೆ 2 ವಿಕೆಟ್ ಕಬಳಿಸಿದರು, ಐಪಿಎಲ್ ನಲ್ಲಿ 5000 ರನ್ ಗಳಿಸಿ ಮಹೇಂದ್ರ ಸಿಂಗ್ ದೋನಿ ವಿಶೇಷ ದಾಖಲೆ ಸೃಷ್ಟಿಸಿದರು. ಆಲ್ ರೌಂಡರ್ ಪ್ರದರ್ಶನ ನೀಡಿದ ಮೊಯಿನ್ ಆಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.