
ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಣೆ ಮಾಡಲು ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಇದರಿಂದ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 7 ಗ್ರಾಮಗಳು ಮುಳುಗಡೆಯಾಗಲಿವೆ. ಈ ಗ್ರಾಮಗಳ ರೈತರು ಈಗಾಗಲೇ ಈ ಜಲಾಶಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ಪ್ರಾರಂಭಿಸಿದ್ದು, ಯಾವುದೇ ಕಾರಣಕ್ಕೂ ಇಲ್ಲಿ ಜಲಾಶಯ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ.
ಲಕ್ಕೇನಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ಜಲಾಶಯ ನಿರ್ಮಾಣ ಮಾಡಬಾರದೆಂದು ಈಗಾಗಲೇ ರಾಷ್ಟ್ರಪತಿ ದ್ರೌಪದಿ ಮುರ್ಮು, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಇತರರಿಗೆ ಲಿಖಿತ ರೂಪದಲ್ಲಿ ಪತ್ರ ಬರೆದು ಗಮನ ಸೆಳೆಯಲಾಗಿದೆ.
ಈಗಾಗಲೇ ಮನವಿ ಪತ್ರ ಸರ್ಕಾರದ ಗಮನಕ್ಕೆ ತಲುಪಿದ್ದು, ಮುಖ್ಯಮಂತ್ರಿಗಳ ಕಚೇರಿಯಿಂದ ಜಲಸಂಪನ್ಮೂಲ ಇಲಾಖೆಗೆ ಸೂಕ್ತ ಕ್ರಮಕ್ಕಾಗಿ ಮಂಡಿಸಲಾಗಿದೆ.

ರಾಜ್ಯಪಾಲರ ಕಚೇರಿಂದ ಪ್ರತಿಕ್ರಿಯೆ ವ್ಯಕ್ತವಾಗಿ, ಜು.23ರ ಸಂಜೆ 4ಗಂಟೆ ಸುಮಾರಿಗೆ ರಾಜ್ಯಪಾಲರನ್ನು ರೈತರು ಭೇಟಿಯಾಗಲು ಅನುಮತಿ ನೀಡಲಾಗಿದೆ.
ನಿಗದಿಯಾಗಿರುವ ಸಮಯಕ್ಕೆ ಸರಿಯಾಗಿ ಒಂದು ಗ್ರಾಮದಿಂದ ಒಬ್ಬರಿಗೆ ರಾಜ್ಯಪಾಲರನ್ನು ಭೇಟಿಯಾಗಲು ಅನುಮತಿಯಿದೆ.
ರೈತರ ಭೇಟಿಗೆ ಸಿಎಂ ಮತ್ತು ಡಿಸಿಎಂ ಹಿಂದೇಟು ಹಾಕಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ…