ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಡ್ಯಾಂ ನಿರ್ಮಾಣ ಬೇಡ- ತಹಶೀಲ್ದಾರ್ ಮಲ್ಲಪ್ಪಗೆ ರೈತರ ಮನವಿ

ಎತ್ತಿನಹೊಳೆ ಯೋಜನೆಯ ನೀರು ಸಂಗ್ರಹಣೆಗೆ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 7 ಗ್ರಾಮಗಳು ಮುಳುಗಡೆಯಾಗಲಿವೆ ಎಂದು ಗ್ರಾಮಗಳ ರೈತರು ಜಲಾಶಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಅವೈಜ್ಞಾನಿಕ ಯೋಜನೆಯನ್ನು ಕೈಬಿಡಬೇಕೆಂದು ಪ್ರತಿಭಟನೆ ಮಾಡುವ ಮೂಲಕ ಒತ್ತಾಯಿಸಿದರು.

ಗುರುವಾರ ಜಲಾಶಯ ನಿರ್ಮಾಣದಿಂದ ಬಾಧಿತರಾಗುವ ಸುತ್ತಮುತ್ತಲಿನ ಗ್ರಾಮಸ್ಥರು ನಗರದ ಜಿ.ರಾಮೇಗೌಡ ವೃತ್ತದಿಂದ ತಾಲ್ಲೂಕು ಕಚೇರಿವರಗೆ ಪ್ರತಿಭಟನಾ ಮೆರವಣಿಗೆ ಮಾಡಿ, ತಹಶೀಲ್ದಾರ್ ಮಲ್ಲಪ್ಪ ಕೆ ಯರಗೋಳಗೆ ಮನವಿ ಸಲ್ಲಿಸಿದರು‌.

ಈ ವೇಳೆ ಮಾತನಾಡಿದ ವಕೀಲ ನರಸಿಂಹಗೌಡ, ಲಕ್ಕೇನಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ಜಲಾಶಯ ನಿರ್ಮಾಣ ಮಾಡಬಾರದು. ಡ್ಯಾಂ ನಿರ್ಮಾಣ ಮಾಡಲು ಪರಿಸರ ಕಾಯ್ದೆ ಉಲ್ಲಂಘಿಸಿ, ರೈತರ ಅಭಿಪ್ರಾಯ ಕೇಳದೆ ತೀರ್ಮಾನಿಸಲಾಗಿದೆ. ಒಂದು ವೇಳೆ ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣವಾದರೆ ಸುಮಾರು 7 ಗ್ರಾಮಗಳು (ಶ್ರೀರಾಮನಹಳ್ಳಿ, ದಾಸರಪಾಳ್ಯ ಶಿಂಗೇನಗಳ್ಳಿ, ಗಾಣದಾಳು, ಹನುಮಂತಯ್ಯನಪಾಳ್ಯ ನರಸಾಪುರ, ಲಕ್ಕೇನಹಳ್ಳಿ) ಸಂಪೂರ್ಣ ಮುಳುಗಡೆಯಾಗುತ್ತವೆ. ಸುಮಾರು 2,673 ಎಕರೆ ಫಲವತ್ತಾದ ಜಮೀನು ನಾಶವಾಗುತ್ತದೆ. ಮುಳುಗಡೆಯಾಗುವ ಹಳ್ಳಿಗಳಲ್ಲಿ ಜನರು ವಾಸ ಮಾಡಲು ಆಗುವುದಿಲ್ಲ, ಫಲವತ್ತಾದ ಭೂಮಿ ಜಲಾವೃತವಾಗುತ್ತದೆ. ರೈತರು ಮನೆ, ಹೊಲ ಕಳೆದುಕೊಂಡು ಅನಾಥರಾಗುತ್ತೇವೆ. ನಮಗೆ ಸರ್ಕಾರ ನೀಡುವ ಅಂಗೈ ಅಗಲ ಭೂಮಿ, ಮನೆ ಬೇಡ, ನಮ್ಮ ನಮ್ಮ ಹಳ್ಳಿಗಳಲ್ಲೇ ನಾವು ವಾಸ ಮಾಡುತ್ತೇವೆ. ನಮ್ಮಜಮೀನಿನಲ್ಲೇ ಉತ್ತಿಬಿತ್ತು ಬೆಳೆಬೆಳೆದು ಜೀವನ ಸಾಗಿಸುತ್ತೇವೆ. ನಾವು ಹುಟ್ಟಿ ಬೆಳೆದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದರು.

ಸಾಸಲು ಹೋಬಳಿಯಲ್ಲಿ ಸುಮಾರು 1,200 ಎಕರೆಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತದೆ. 1, 400 ಎಕರೆಯಲ್ಲಿ ತರಕಾರಿ, ಜೋಳ, ರಾಗಿ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲಾಗುತ್ತದೆ. ವಾರ್ಷಿಕವಾಗಿ 20 ಕೋಟಿಗೂ ಹೆಚ್ಚು ಅಡಿಕೆ ವಹಿವಾಟು ಮಾಡಲಾಗುತ್ತದೆ. 10 ಕೋಟಿಗೂ ಹೆಚ್ಚು ರಾಗಿ, ಜೋಳ, ತರಕಾರಿ ಸೇರಿದಂತೆ ಇತರೆ ಬೆಳೆಗಳ ವಹಿವಾಟು ನಡೆಯುತ್ತದೆ ಎಂದು ತಿಳಿಸಿದರು.

ಎತ್ತಿನಹೊಳೆ ಯೋಜನೆ ಇಂದು ಕರ್ನಾಟಕದ ಜನರ ಮುಂದೆ ಅತ್ಯಂತ ಗಂಭೀರ ಪ್ರಶ್ನೆಯಾಗಿ ಪರಿಣಮಿಸಿದೆ. ಸರ್ಕಾರ ಇದನ್ನು ಕುಡಿಯುವ ನೀರಿನ ಯೋಜನೆ ಎಂದು ಹೇಳುತ್ತಿದ್ದರೂ, ಯೋಜನೆಯ ನಿಜವಾದ ಕಾರ್ಯಗತಗೊಳಿಸುವ ವಿಧಾನ, ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಹಣದ ವೆಚ್ಚ, ಫಲವತ್ತಾದ ಕೃಷಿಭೂಮಿಗಳ ಭೂಸ್ವಾಧೀನ ಮತ್ತು ಪರಿಸರ ಹಾನಿಯ ಆತಂಕಗಳು ಸಾರ್ವಜನಿಕರಲ್ಲಿ ಗಂಭೀರ ಅನುಮಾನಗಳನ್ನು ಹುಟ್ಟಿಸಿವೆ. ಸಿಎಜಿ ವರದಿಯಲ್ಲಿಯೂ ಟೆಂಡರ್ ಅನಿಯಮಿತತೆಗಳು, ವೆಚ್ಚ ಏರಿಕೆ ಮತ್ತು ಆಡಳಿತಾತ್ಮಕ ದೋಷಗಳ ಕುರಿತು ಗಂಭೀರ ಆಕ್ಷೇಪಣೆಗಳು ದಾಖಲಾಗಿವೆ. ಗ್ರಾಮಸಭೆಗಳನ್ನು ನಡೆಸದೇ, ಎಸ್ ಐಎ (Social Impact Assessment) ಪಾರದರ್ಶಕವಾಗಿ ಮಾಡದೇ ಹಾಗೂ ರೈತರ ಅಭಿಪ್ರಾಯವನ್ನು ನಿರ್ಲಕ್ಷಿಸಿ ಯೋಜನೆಯನ್ನು ಮುಂದುವರಿಸಲಾಗುತ್ತಿದೆ ಎಂಬುದು ನಮ್ಮ ಪ್ರಮುಖ ಆಕ್ಷೇಪಣೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರ ಬದುಕು, ಪರಿಸರ ಮತ್ತು ಸಾರ್ವಜನಿಕ ಹಣವನ್ನು ಬಲಿಕೊಡಬಾರದು. ಎತ್ತಿನಹೊಳೆ ಯೋಜನೆ ಕುರಿತು ತಕ್ಷಣ ಸಂಪೂರ್ಣ ಶ್ವೇತಪತ್ರ ಪ್ರಕಟಿಸಿ ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ನಡೆಸಬೇಕು ಎಂದು ನಾವು ಆಗ್ರಹಿಸುತ್ತೇವೆ ಎಂದರು.

ಮುಖಂಡ ಗೋವಿಂದರಾಜು ಮಾತನಾಡಿ, ಬೇಕಾಬಿಟ್ಟಿಯಾಗಿ ಯೋಜನಾ ವೆಚ್ಚ ಹೆಚ್ಚಿಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮೊತ್ತದ ನಷ್ಟ ಉಂಟುಮಾಡಲಾಗಿದೆ. ಯೋಜನೆಗೆ ಬಳಸಲಾಗಿರುವ ಎಲ್ಲಾ ನಿಯಮಗಳು ಅವೈಜ್ಞಾನಿಕವಾಗಿವೆ. ಈ ಡಿಪಿಆರ್ ರದ್ದು ಮಾಡಬೇಕು. ಇಲ್ಲಿ ಡ್ಯಾಂ ಯೋಜನೆಯೂ ಸಫಲವಾಗುವುದಿಲ್ಲ ಎಂದರು. 

ದೊಡ್ಡಬಳ್ಳಾಪುರದಲ್ಲಿ ಕಸ ಹಾಕೋದಕ್ಕೆ ಭೂಮಿ, ಕೆಐಡಿಬಿಗೆ ಭೂಮಿ, ಡ್ಯಾಂಗೆ ಭೂಮಿ, ಕೈಗಾರಿಕೆಗೆ ಭೂಮಿ ಸೇರಿದಂತೆ ಎಲ್ಲದಕ್ಕೂ ರೈತರ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗೆ ಪ್ರತಿಯೊಂದಕ್ಕೂ ರೈತರ ಭೂಮಿನೇ ಬೇಕು. ಹೀಗೆ ಮಾಡಿದರೆ ರೈತರ ಗತಿ ಏನಾಗಬೇಕು…? ಮುಂದುಂದು ದಿನ ಅನ್ನ ಬದಲು ಕಾಂಕ್ರೀಟ್, ಕಸ, ಮಣ್ಣು ತಿನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಮುಖಂಡರಾದ ಗೋವಿಂದರಾಜು ಹೇಳಿದರು.

ಬರಡು ಭೂಮಿ ಇರುವ ಕಡೆಯಲ್ಲಿ ಜಲಾಶಯ ನಿರ್ಮಿಸಲಿ. ಇಲ್ಲಿಯೇ ಜಲಾಶಯ ನಿರ್ಮಿಸಬೇಕು ಎನ್ನುವುದಕ್ಕೆ ಇಲ್ಲಿ ಯಾವುದೇ ನದಿಗೆ ಅಡ್ಡಲಾಗಿ ಅಣೆಕಟ್ಟೆ ನಿರ್ಮಿಸುತ್ತಿಲ್ಲ. ಬದಲಿಗೆ ಎಲ್ಲಿಂದಲೋ ಪೈಪ್ ಮೂಲಕ ತರಲಾಗುತ್ತಿರುವ ನೀರು ಸಂಗ್ರಹಣೆಗೆ ಯಾವ ಸ್ಥಳದಲ್ಲಿ ಬೇಕಿದ್ದರು ಜಲಾಶಯ ನಿರ್ಮಿಸಲು ಅವಕಾಶ ಇದೆ. ಹಾಗಾಗಿ ಬರಡು ಹಾಗೂ ಸರ್ಕಾರಿ ಜಮೀನು ಹೆಚ್ಚಾಗಿ ಇರುವ ಸ್ಥಳದಲ್ಲಿ ಜಲಾಶಯ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಮಲ್ಲಪ್ಪ ಕೆ ಯರಗೋಳ, ರೈತರ ಸಂಕಷ್ಟಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ಈ ವೇಳೆ, ರಾಮಣ್ಣ, ಲಕ್ಕಣ್ಣ, ಕೆಂಪರಾಜು, ನರಸಿಂಹಗೌಡ, ಕದಿರೇಗೌಡ ಮತ್ತಿತ್ತರರು ಇದ್ದರು.

Ramesh Babu

Journalist

Recent Posts

ನಿಷೇಧಿತ ಕ್ಯಾಟ್ ಫಿಶ್ ಸಾಕಾಣಿಕೆ ಸ್ಥಳಗಳಿಗೆ ಸಿಇಒ ದಿಢೀರ್ ಭೇಟಿ: ಸ್ಥಳದಲ್ಲೇ ಕ್ಯಾಟ್ ಫಿಶ್, ಹೊಂಡಗಳ ನಾಶ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಕ್ಯಾಟ್‌ ಫಿಶ್‌ ಸಾಕಣೆ ಮಾಡುತ್ತಿದ್ದ ಹೊಂಡಗಳ…

1 hour ago

ಗೋಮಾಳ ಭೂಮಿಯಲ್ಲಿನ ರೈತರನ್ನು ಒಕ್ಕಲೆಬ್ಬಿಸದಂತೆ ಜಿಲ್ಲಾಧಿಕಾರಿಗೆ ಮನವಿ

ಕೋಲಾರ: ಮೈಸೂರು ಮಹಾರಾಜರ ಕಾಲದಿಂದಲೂ ಸಕ್ಷಮ ಪ್ರಾಧಿಕಾರದಿಂದ ಕಾನೂನುಬದ್ಧವಾಗಿ ರೈತರಿಗೆ ಹಂಚಿಕೆಯಾಗಿರುವ ಸರ್ಕಾರಿ ಗೋಮಾಳ ಹಾಗೂ ಕಂದಾಯ ಭೂಮಿಯಲ್ಲಿನ ರೈತರನ್ನು…

4 hours ago

ವೈಯಕ್ತಿಕ ವಿಚಾರಕ್ಕೆ ಸಿಎಂ ಭೇಟಿ; ತಾಲೂಕಿನ ಹಿತರಕ್ಷಣೆಗಲ್ಲ? ವೆಂಕಟರಮಣಯ್ಯ ವಿರುದ್ಧ ಕಾಡನೂರು ಗ್ರಾ.ಪಂ ಮಾಜಿ ಅಧ್ಯಕ್ಷ ಮನು ಎನ್ ಆರ್ ಆರೋಪ

ದೊಡ್ಡಬಳ್ಳಾಪುರ: ಅಳಿಯನ ವರ್ಗಾವಣೆ ಸೇರಿದಂತೆ ವೈಯಕ್ತಿಕ ವಿಚಾರಗಳಿಗಾಗಿ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು…

6 hours ago

ಬರ ಘೋಷಣೆ ಬಳಿಕ ಸಿಎಂಗೆ ಮನವಿ: ಮಾಜಿ ಶಾಸಕ ಟಿ.ವೆಂಕಟರಮಣಯ್ಯ ನಡೆಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತರಾಟೆ

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

9 hours ago

ದೊಡ್ಡಬಳ್ಳಾಪುರ ಬರ ಘೋಷಣೆಗೆ ಕ್ರೆಡಿಟ್ ಫೈಟ್: ಸರ್ಕಾರ ಈಗಾಗಲೇ ಬರ ಘೋಷಿಸಿದೆ; ಮತ್ತೆ ಮನವಿ ಏಕೆ?: ವೆಂಕಟರಮಣಯ್ಯಗೆ ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ತಿರುಗೇಟು

ದೊಡ್ಡಬಳ್ಳಾಪುರ: 2026ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ, ಮರು ಜಂಟಿ ಬೆಳೆ…

9 hours ago

ದೇವನಹಳ್ಳಿ–ದೊಡ್ಡಬಳ್ಳಾಪುರದ ಹಲವು ಗ್ರಾಮಗಳ ಮೇಲೆ KIADB ಕಣ್ಣು: ಕೃಷಿ ಭೂಮಿ ಉಳಿಸಿಕೊಳ್ಳಲು ಮತ್ತೆ ಹೋರಾಟದ ಸದ್ದು

ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ಕೃಷಿ ಭೂಮಿಯ ಮೇಲೆ ಮತ್ತೊಮ್ಮೆ ಭೂಸ್ವಾಧೀನದ ಆತಂಕ ಆವರಿಸಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳ ವ್ಯಾಪ್ತಿಯಲ್ಲಿ…

11 hours ago