ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಜಲಾಶಯ ನಿರ್ಮಾಣಕ್ಕೆ ರೈತರ ವಿರೋಧ ವಿಚಾರ: ಇಂದು ರಾಜ್ಯಪಾಲರನ್ನ ಭೇಟಿಯಾದ ರೈತರ ನಿಯೋಗ: ಡ್ಯಾಂ ನಿರ್ಮಾಣ ಮಾಡದಂತೆ ರಾಜ್ಯಪಾಲರಲ್ಲಿ ಮನವಿ

ಎತ್ತಿನಹೊಳೆಯಿಂದ ಬರುವ ನೀರು ಸಂಗ್ರಹಣೆ ಮಾಡಲು ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಲಕ್ಕೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಸುಮಾರು 7 ಗ್ರಾಮಗಳು ಮುಳುಗಡೆಯಾಗಲಿವೆ. ಈ ಗ್ರಾಮಗಳ ರೈತರು ಈಗಾಗಲೇ ಈ ಜಲಾಶಯ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ಹೋರಾಟ ಪ್ರಾರಂಭಿಸಲಾಗಿದೆ.

ಇದರ ಕುರಿತು ರಾಜ್ಯಪಾಲರ ಗಮನಕ್ಕೆ ತರಲು ಸುಮಾರು ಹತ್ತೂರಿನ ರೈತರ ನಿಯೋಗ ರಾಜಭವನಕ್ಕೆ ತೆರಳಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ ಲಕ್ಕೇನಹಳ್ಳಿಯಲ್ಲಿ ಯಾವುದೇ ಕಾರಣಕ್ಕೂ ಇಲ್ಲಿ ಜಲಾಶಯ ನಿರ್ಮಾಣ ಮಾಡದಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಪತ್ರದ ಮೂಲಕ ಮನವಿ ಮಾಡಲಾಯಿತು.

ಜಲಾಶಯ ನಿರ್ಮಾಣ ಮಾಡಲು ಪರಿಸರ ಕಾಯ್ದೆ ಉಲ್ಲಂಘನೆ, ರೈತರ ಅಭಿಪ್ರಾಯ ಕೇಳದೇ ಜಲಾಶಯ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಒಂದು ವೇಳೆ ಲಕ್ಕೇನಹಳ್ಳಿಯಲ್ಲಿ ಡ್ಯಾಂ ನಿರ್ಮಾಣವಾದರೆ ಡ್ಯಾಂ‌ನಲ್ಲಿ ಸುಮಾರು 2.45 ಟಿಎಂಸಿ ನೀರು ಶೇಖರಣೆಯಾಗುತ್ತದೆ. 7 ಗ್ರಾಮಗಳು(ಶ್ರೀರಾಮನಹಳ್ಳಿ, ದಾಸರಪಾಳ್ಯ, ಶಿಂಗೇನಗಳ್ಳಿ, ಗಾಣದಾಳು, ಹನುಮಂತಯ್ಯನಪಾಳ್ಯ, ನರಸಾಪುರ, ಲಕ್ಕೇನಹಳ್ಳಿ) ಸಂಪೂರ್ಣ ಮುಳುಗಡೆಯಾಗುತ್ತವೆ. ಸುಮಾರು 2,673 ಎಕರೆ ಫಲವತ್ತಾದ ಜಮೀನು ನಾಶವಾಗುತ್ತದೆ. ಮುಳುಗಡೆಯಾಗುವ ಹಳ್ಳಿಗಳಲ್ಲಿ ಜನರು ವಾಸ ಮಾಡಲು ಆಗುವುದಿಲ್ಲ. ಫಲವತ್ತಾದ ಭೂಮಿ ಜಲಾವೃತವಾಗುತ್ತದೆ. ರೈತರು ಮನೆ, ಹೊಲ ಕಳೆದುಕೊಂಡು ಅನಾಥರಾಗುತ್ತೇವೆ. ನಮಗೆ ಸರ್ಕಾರ ನೀಡುವ ಅಂಗೈ ಅಗಲ ಭೂಮಿ, ಮನೆ ಬೇಡ, ನಮ್ಮ ನಮ್ಮ ಹಳ್ಳಿಗಳಲ್ಲೇ ನಾವು ವಾಸ ಮಾಡುತ್ತೇವೆ. ನಮ್ಮ ಜಮೀನಿನಲ್ಲೇ ಉತ್ತಿಬಿತ್ತು ಬೆಳೆಬೆಳೆದು ಜೀವನ ಸಾಗಿಸುತ್ತೇವೆ. ನಾವು ಹುಟ್ಟಿ ಬೆಳೆದ ಜಾಗವನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.

ಸಾಸಲು ಹೋಬಳಿಯಲ್ಲಿ ಸುಮಾರು 1,200 ಎಕರೆಯಲ್ಲಿ ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತದೆ. 1, 400 ಎಕರೆಯಲ್ಲಿ ತರಕಾರಿ, ಜೋಳ, ರಾಗಿ ಸೇರಿದಂತೆ ಇತರೆ  ಬೆಳೆಗಳನ್ನು ಬೆಳೆಯಲಾಗುತ್ತದೆ. ವಾರ್ಷಿಕವಾಗಿ 20 ಕೋಟಿಗೂ ಹೆಚ್ಚು ಅಡಿಕೆ ವಹಿವಾಟು ಮಾಡಲಾಗುತ್ತದೆ. 10 ಕೋಟಿಗೂ ಹೆಚ್ಚು ರಾಗಿ, ಜೋಳ, ತರಕಾರಿ ಸೇರಿದಂತೆ ಇತರೆ ಬೆಳೆಗಳ ವಹಿವಾಟು ನಡೆಯುತ್ತದೆ ಎಂದು ತಿಳಿಸಿದರು.

ಕೂಡಲೇ ಸ್ಥಳ ಪರಿಶೀಲನೆಗೆ ತಜ್ಞರ ತಂಡವನ್ನು ರಚನೆ ಮಾಡಬೇಕು. ಸರ್ಕಾರದಿಂದ ಎತ್ತಿನಹೊಳೆ ಯೋಜನೆಯ ವಿಸ್ತೃತ ವರದಿಯನ್ನು ತಾವು ಪರಿಶೀಲಿಸಬೇಕು. ಡ್ಯಾಂ ನಿರ್ಮಾಣದ ವಿಚಾರದಲ್ಲಿ ಸರ್ಕಾರಕ್ಕೆ ಗೊಂದಲವಿದೆ. ರೈತರಲ್ಲಿ ಆತಂಕ‌ ಮೂಡಿಸಲಾಗುತ್ತಿದೆ. ಈ ಕುರಿತು ರಾಷ್ಟ್ರಪತಿ, ಕೇಂದ್ರ ಸರ್ಕಾರ,‌ ರಾಜ್ಯ ಸರ್ಕಾರದ ಗಮನಕ್ಕೂ ತರಬೇಕು. ನಮ್ಮ ಊರಲ್ಲಿ ಡ್ಯಾಂ ನಿರ್ಮಾಣವಾಗದಂತೆ ತಡೆ‌ಹಿಡಿಯಬೇಕು ಎಂದು ಮನವಿ ಮಾಡಿದರು.

ರೈತರ ಮನವಿ ಸ್ವೀಕರಿಸಿ‌ದ ನಂತರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಕ್ರಿಯಿಸಿ, ರೈತರ ಮನವಿಯನ್ನು ಕೂಡಲೇ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಸರ್ಕಾರದಿಂದ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಕಾರತ್ಮಕವಾಗಿ ಉತ್ತರಿಸಿರುವುದಾಗಿ ರೈತರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!