ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಭೂ ಮಾಪಕ ಅಧಿಕಾರಿ: ಮೂರು ಎಕರೆ ಜಮೀನು ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಲಂಚ ಸ್ವೀಕಾರ ಆರೋಪ

ಮೂರು ಎಕರೆ ಜಮೀನು ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಭೂ ಮಾಪಕ ಅಧಿಕಾರಿಯೊಬ್ಬರು ಲೊಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಭೂಮಾಪಕ ಅಧಿಕಾರಿ ವೀರಣ್ಣ ಜೊತೆಗಿದ್ದ ಮಧ್ಯವರ್ತಿ ಸತೀಶ್ ಎಂಬಾತ ಕೂಡ ಲೋಕಾಯುಕ್ತರ ಅತಿಥಿಯಾಗಿದ್ದಾರೆ.

ದೊಡ್ಡಬೆಳವಂಗಲದ ಗುಂಡಲಹಳ್ಳಿ ನಿವಾಸಿ ನಂದೀಶ್ ಎಂಬುವರು ತಮ್ಮ ಮೂರು ಎಕರೆ ಜಮೀನು ಪೋಡಿಗೆ ಅರ್ಜಿ ಸಲ್ಲಿಸಿದ್ದರು. ಜಮೀನು ಪೋಡಿ ಮಾಡಿಕೊಡುವಂತೆ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು.

ನಂದೀಶ್ ಅವರು ಪರ್ಯಾವೇಕ್ಷಕರು ಹಾಗೂ ಭೂಮಾಪಕರ ಕಚೇರಿಗೆ ಬಂದಾಗ ಸರ್ವೇಯರ್ ವೀರಣ್ಣ ಅವರು ಪೋಡಿ ಮಾಡಿಕೊಡಲು ₹3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ಮಾತುಕತೆ ನಡೆದು ₹1 ಲಕ್ಷಕ್ಕೆ ಡೀಲ್ ಕುದುರಿಸಿದ್ದರು.

ಕಳೆದ ಕೆಲ ದಿ‌ನಗಳ ಹಿಂದೆ ನಂದೀಶ್ ಅವರು ಭೂ ಮಾಪಕ ಅಧಿಕಾರಿ ವೀರಣ್ಣಗೆ ₹20 ಸಾವಿರ ನೀಡಿದ್ದರು. ಉಳಿದ ₹80 ಸಾವಿರ ಲಂಚಕ್ಕೆ ವೀರಣ್ಣ ಸತಾಯಿಸುತ್ತಿದ್ದರು.

ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ನಂದೀಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಂದೀಶ್ ಅವರು ವೀರಣ್ಣ ಅವರಿಗೆ ಹಣ ನೀಡುವಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ವೀರಣ್ಣ ಹಾಗೂ ಮಧ್ಯವರ್ತಿ ಸತೀಶ್ ನನ್ನು ಬಂಧಿಸಿದ್ದಾರೆ.

ಕಳೆದ ಕೆಲ ತಿಂಗಳ ಹಿಂದಷ್ಟೇ ಭೂ ದಾಖಲೆಗಳ ಸಹಾಯಕ‌ ನಿರ್ದೇಶಕರ ಕಚೇರಿ ಮೇಲಡ ಲೋಕಾಯುಕ್ತ ದಾಳಿ ನಡೆದಿತ್ತು. ಅಂದು ಉಪ ಲೋಕಾಯುಕ್ತರಾದ ನ್ಯಾ.ಫಣೀಂದ್ರ ಅವರು ಆಗಮಿಸಿ ಸಾರ್ವಜನಿಕರ ಕುಂದುಕೊರತೆ ಆಲಿಸಿದ್ದರು. ಅಂದಿನ ಸಭೆಯಲ್ಲಿ ಕೆಲ ಸಂಘಟನೆಗಳ ಮುಖಂಡರು ತಹಶೀಲ್ದಾರ್ ಪರ ವಕಾಲತ್ತು ವಹಿಸಿ, ಯಾವುದೇ ಸಮಸ್ಯೆ, ಭ್ರಷ್ಟಾಚಾರ ಇಲ್ಲ‌ ಎಂದು ಹೇಳಿದ್ದರು.

ಸೋಮವಾರದ ಲೋಕಾಯುಕ್ತ ಕಾರ್ಯಾಚರಣೆಯು ಎಸ್ಪಿ‌ಪವನ್ ನಜ್ಜೂರು ಮಾರ್ಗದರ್ಶನದಲ್ಲಿ ಪೊಲೀಸ್ ಇನ್ ಸ್ಪೆಕ್ಟರ್ ರಮೇಶ್ ಜೆ. ನೇತೃತ್ವದಲ್ಲಿ ನಡೆಯಿತು.

Leave a Reply

Your email address will not be published. Required fields are marked *