ಲಂಚ ಪಡೆಯದೆ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ನೇಮಕ: ಅಷ್ಟೇ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಒಳ್ಳೆಯ ಹೆಸರು ತನ್ನಿ-‌ ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕರ ನೇಮಕಾತಿಯಲ್ಲಿ ಯಾರ ಹತ್ತಿರ ಒಂದು ರೂಪಾಯಿ ಲಂಚ ತೆಗೆದುಕೊಳ್ಳದೇ ಪಾರದರ್ಶಕತೆಯಿಂದ ನೇಮಕಾತಿ ಆದೇಶ ಪತ್ರ ನೀಡಿದ್ದೇವೆ ಅದೇ ರೀತಿಯಲ್ಲಿ ನೀವುಗಳು ಅಷ್ಟೇ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ತಾಲೂಕಿಗೆ ಒಳ್ಳೆಯ ಹೆಸರು ತರಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ 7 ಕಾರ್ಯಕರ್ತರಿಗೆ ಹಾಗೂ 53 ಸಹಾಯಕರಿಗೆ ನೇಮಕಾತಿ ಆದೇಶ ಪತ್ರ ನೀಡಿ ಮಾತನಾಡಿದ ಅವರು ಹಿಂದೆ ಎಲ್ಲಾ ಅಂಗನವಾಡಿ ನೌಕರರ ನೇಮಕಾತಿಯಲ್ಲಿ ಮಧ್ಯವರ್ತಿಗಳು ಹೆಚ್ಚಾಗಿದ್ದು ಪ್ರಮಾಣಿಕರಿಗೆ, ಅರ್ಹತೆ ಇರುವವರಿಗೆ ಅವಕಾಶ ಸಿಗುತ್ತಿರಲಿಲ್ಲ ಅ ರೀತಿಯಲ್ಲಿ ನಡೆಯಬಾರದು ಎಂದು ಮೆರಿಟ್ ಆಧಾರದಲ್ಲಿ ಅರ್ಹತೆ ಇದ್ದವರಿಗೆ ಅವಕಾಶ ನೀಡಲಾಗಿದೆ ತಾವುಗಳು ಕೈ ಬಾಯಿ ಶುದ್ದವಾಗಿ ಇಟ್ಟುಕೊಂಡು ಕೆಲಸ ಮಾಡಿ ಅಂಗನವಾಡಿಗೆ ಬರುವ ಮಕ್ಕಳು ಬಡವರು ಅವರನ್ನು ತಮ್ಮ ಮಕ್ಕಳ ರೀತಿಯಲ್ಲಿ ಪೋಷಣೆ ಮಾಡುವಂತೆ ಸಲಹೆ ನೀಡಿದರು

ರಾಜ್ಯದಲ್ಲಿ ಕೋಲಾರ ಜಿಲ್ಲೆಯನ್ನು ಮಾದರಿ ಯಾಗಿಸಿಕೊಂಡು ಈಗಾಗಲೇ ಸರ್ಕಾರಿ ಜಮೀನುಗಳಿಗೆ ದಾಖಲೆಗಳನ್ನು ಮಾಡಿಕೊಡುವ ಕೆಲಸವನ್ನು ಹಿಂದಿನ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಮಾಡಿಕೊಟ್ಟಿದ್ದಾರೆ ಅದರಂತೆ ಕೋಲಾರ ತಾಲೂಕಿನ 310 ಅಂಗನವಾಡಿ ಕೇಂದ್ರಗಳಿಗೆ ದಾಖಲೆಗಳನ್ನು ನೀಡಲಾಗಿದೆ ನಗರದಲ್ಲಿ 6 ಅಂಗನವಾಡಿ ಕೇಂದ್ರಗಳಿಗೆ ನಿವೇಶನ, 10 ಹೊಸ ಕಟ್ಟಡಗಳಿಗೆ ಜಾಗ ಮಂಜೂರು ಮಾಡಲಾಗಿದೆ ಯಾವುದೇ ಸಮಸ್ಯೆ ಇದ್ದರು ಬಗೆ ಹರಿಸಲು ಅಧಿಕಾರಿಗಳು ಇದ್ದು ಅವರ ಸಲಹೆ ಸೂಚನೆಗಳ ಮೂಲಕ ಒಳ್ಳೆಯ ಕೆಲಸ ಮಾಡಿ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ ಅಂಗನವಾಡಿ ಕೇಂದ್ರಗಳಿಗೆ ಬರುವವರು ಬಡವರು ನಿಮ್ಮ ಮೇಲೆ ನಂಬಿಕೆ ಇಟ್ಟು ಕಳಸಿದ್ದಾರೆ ಅ ನಂಬಿಕೆ ಉಳಿಸಿಕೊಂಡು ಹೋಗಬೇಕು ಕಾಂಗ್ರೆಸ್ ಸರ್ಕಾರ ಅದರಲ್ಲೂ ವಿಶೇಷವಾಗಿ ಶಾಸಕರಾಗಿ ಕೊತ್ತೂರು ಮಂಜುನಾಥ್ ಆಯ್ಕೆಯಾದ ನಂತರದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಶಾಲೆಗಳಿಗೆ ಜಮೀನು ಮಂಜೂರು ಮಾಡಿ ಖಾತೆಗಳನ್ನು ಮಾಡಿಕೊಡಲಾಗಿದೆ ಇನ್ನೂ ಕೆಲವು ಕಡೆ ಬಾಡಿಗೆ ಕಟ್ಟಡದಲ್ಲಿ ಇದ್ದು ಸ್ವಂತ ಕಟ್ಟಡವನ್ನು ನಿರ್ಮಿಸಲು ಕ್ರಮ ವಹಿಸಲಾಗುತ್ತಾ ಇದೆ ಮಕ್ಕಳಿಗೆ ಒಳ್ಳೆಯ ಸೌಲಭ್ಯ ಕೊಡದೆ ಹೋದರೆ ಅಧಿಕಾರಿಗಳು ನಿಮ್ಮ ವಿರುದ್ದ ಕ್ರಮ ವಹಿಸುತ್ತಾರೆ ಅದಕ್ಕೆ ಅವಕಾಶ ನೀಡದೇ ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಎಂದರು.

ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ಕೊಟ್ಟ ಆಶ್ವಾಸನೆಗಳನ್ನು ಅಧಿಕಾರಕ್ಕೆ ಬಂದ ನಂತರ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವ ವಹಿಸಲಾಗಿದೆ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳು ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಕೊಟ್ಟಿದ್ದೇವೆ ಈಗಾಗಲೇ ಕೋಲಾರ ಜಿಲ್ಲೆಗೆ ಗ್ಯಾರಂಟಿ ಯೋಜನೆಯ ಮೂಲಕ 830 ಕೋಟಿ ಹಣ ಬಿಡುಗಡೆಯಾಗಿದೆ ರಾಜ್ಯದಲ್ಲಿ ಪ್ರತಿ ವರ್ಷ 58 ಸಾವಿರ ಕೋಟಿ ಹಣ ಬಜೆಟ್ ನಲ್ಲಿ ನಿಗದಿ ಮಾಡಲಾಗಿದೆ ಮತ್ತೆ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುತ್ತಿದೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾರಾಯಣಸ್ವಾಮಿ, ತಾಪಂ ಇಒ ಮಂಜುನಾಥ್, ಸಿಡಿಪಿಒ ವಿನೋದ್, ಅಧಿಕಾರಿಗಳಾದ ವಂಶಿಕೃಷ್ಣ, ವಿಶ್ವನಾಥ್ ಮುಂತಾದವರು ಇದ್ದರು.

Leave a Reply

Your email address will not be published. Required fields are marked *