ನಗರದಾದ್ಯಂತ ಶಾಂತಿ-ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ನಗರ ಪೊಲೀಸ್ ಠಾಣಾ ಆವರಣದಲ್ಲಿಂದು ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ ನೇತೃತ್ವದಲ್ಲಿ ರೌಡಿ ಶೀಟರ್ ಗಳ ಪರೇಡ್ ನಡೆಸಿ, ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದಂತೆ ರೌಡಿಶೀಟರ್ ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರ ವ್ಯಾಪ್ತಿಯ 22 ರೌಡಿ ಶೀಟರ್ ಗಳು ಪರೇಡ್ ನಲ್ಲಿ ಭಾಗವಹಿಸಿದ್ದರು. ಈ ಹಿಂದೆ ದಾಖಲಾಗಿದ್ದ ಪ್ರಕರಣಗಳು, ಪ್ರಸ್ತುತ ಜೀವನ ನಿರ್ವಹಣೆಗೆ ಮಾಡುತ್ತಿರುವ ಕೆಲಸ ಕಾರ್ಯ, ಇತ್ತೀಚೆಗೆ ಭಾಗಿಯಾದ ದೃಷ್ಕೃತ್ಯಗಳ ಕುರಿತಂತೆ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಯಾವುದೇ ಕಾನೂನುಬಾಹಿರ ದುಷ್ಕೃತ್ಯಗಳಲ್ಲಿ ಭಾಗಿಯಾಗಬಾರದು. ಸಮಾಜದಲ್ಲಿ ಸನ್ನಡತೆಯಿಂದ ಇದ್ದರೆ ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲು ಶಿಫಾರಸ್ಸು ಮಾಡಲಾಗುವುದು. ಒಂದು ವೇಳೆ ದುಷ್ಕೃತ್ಯಗಳಲ್ಲಿ ಭಾಗಿಯಾಗುವುದು ಮುಂದುವರಿದರೆ ಕಠಿಣ ಕಾನೂನು ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಪೊಲೀಸರು ರೌಡಿ ಶೀಟರ್ ಗಳಿಗೆ ನೀಡಿದ್ದಾರೆ.
ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಇತ್ತೀಚಿಗೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು, ಕ್ಷುಲ್ಲಕ ಕಾರಣಗಳಿಗೆ ಕೊಲೆ, ಹೊಡೆದಾಟ, ಬಡಿದಾಟ ನಡೆಯುತ್ತಿರುವುದರಿಂದ ಸಮಾಜದಲ್ಲಿ ಶಾಂತಿ ಹಾಳಾಗುತ್ತಿದೆ. ಪುಂಡರ ಹಾವಳಿಯನ್ನ ತಡೆಯಲು ಪೊಲೀಸ್ ಇಲಾಖೆ ಸದಾ ಸನ್ನದ್ಧವಾಗಿರುತ್ತದೆ ಎಂದು ಖಡಕ್ ಸೂಚನೆ ನೀಡಿದರು.