ಗೌರಿ ಗಣೇಶ ಹಬ್ಬ ಹಿನ್ನೆಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ರೌಡಿಶೀಟರ್ ಗಳ ಪರೇಡ್ ನಡೆಸಿ ಅವರೊಂದಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ವಿದ್ಯಾರ್ಥಿಗಳು, ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಜೊತೆಗೂಡಿ ಠಾಣೆ ಆವರಣದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು ಎಂದು ಗ್ರಾಮಾಂತರ ಠಾಣಾ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ತಿಳಿಸಿದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರೌಡಿ ಪರೇಡ್ ನಂತರ ಎಸ್.ಎಸ್.ಎಸ್ ವಿದ್ಯಾರ್ಥಿಗಳ ಜೊತೆಗೆ ರೌಡಿಶೀಟರ್ ಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ದೊಡ್ಡಬಳ್ಳಾಪುರ ಪೊಲೀಸ್ ವಸತಿ ನಿಲಯ ಸುತ್ತಮುತ್ತ ಸ್ವಚ್ಛಗೊಳಿಸುವಾಗ ಸುಮಾರು ನಾಲ್ಕು ಹಾವುಗಳು ಕಂಡುಬಂದಿದ್ದು, ಕೂಡಲೇ ಉರಗ ತಜ್ಞ ರಾಮಾಂಜಿನಿ ಅವರನ್ನು ಕರೆಯಿಸಿ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡಲಾಯಿತು ಎಂದರು.
ಹಬ್ಬದ ಹೆಸರಲ್ಲಿ ಪುಂಡಾಟಿಕೆ, ರೌಡಿಸಂ ತೋರಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟು ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ ಎಂದರು.
ಈ ವೇಳೆ ನಗರ ಠಾಣಾ ಇನ್ಸ್ ಪೆಕ್ಟರ್ ಅಮರೇಶ್ ಗೌಡ, ಎನ್ಎಸ್ಎಸ್ ಅಧಿಕಾರಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸದಾಶಿವರಾಮಚಂದ್ರ ಗೌಡ, ಪ್ರೊ.ಪ್ರಕಾಶ್ ಮಂಟೇದ, ಉಪನ್ಯಾಸಕರು, ಇಲಾಖೆ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.