ಪ್ರತೀ ಹಂತದಲ್ಲೂ ಅಭಿಮಾನಿಗಳ ಕುತೂಹಲ ಕೆರಳಿಸಿದ್ದ ಭಾರತ – ಆಫ್ಘಾನಿಸ್ತಾನದ ಮೂರನೇ ಪಂದ್ಯ ಎರಡು ಸೂಪರ್ ಓವರ್ ಗಳಿಗೆ ಸಾಕ್ಷಿಯಾಗಿದ್ದಲ್ಲದೆ ಭಾರತಕ್ಕೆ 3-0 ಅಂತರದಿಂದ ಗೆಲುವು ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಗರಿ ಮುಡಿಗೇರಿಸಿಕೊಂಡಿತು.
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ, ಬ್ಯಾಟಿಂಗ್ ಆರಂಭಿಸಿತು. ಆದರೆ, ನಾಯಕ ರೋಹಿತ್ ಶರ್ಮಾ ಅವರ ನಿರೀಕ್ಷೆಗೆ ತಕ್ಕಂತೆ ಆಟ ನಡೆಯಲಿಲ್ಲ, ಕೇವಲ 22 ರನ್ ಗಳಿಸುವ ವೇಳೆಗೆ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (4), ವಿರಾಟ್ ಕೊಹ್ಲಿ (೦), ಆಲ್ ರೌಂಡರ್ ಶಿವಂ ದುಬೆ (1) ಹಾಗೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ (೦) ವಿಕೆಟ್ ಒಪ್ಪಿಸಿದರು.
ಆದರೂ ನಾಯಕ ರೋಹಿತ್ ಶರ್ಮಾ 11 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ (121) ರನ್ ಹಾಗೂ ರಿಂಕು ಸಿಂಗ್ 2 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 69 ರನ್ ಗಳಿಸಿ ದಾಖಲೆಯ 190 ರನ್ ಜೊತೆಯಾಟ ನಡೆಸಿ 212 ರನ್ ಗಳ ಬೃಹತ್ ಮೊತ್ತ ಕಲೆಹಾಕಿದರು.
ಆಫ್ಘಾನಿಸ್ತಾನದ ಪರವಾಗಿ ಅಹ್ಮದ್ ಮೂರು ವಿಕೆಟ್ ಕಬಳಿಸಿದರೆ ಅಜ್ಮತ್ ಉಲ್ಲಾ ಒಂದು ವಿಕೆಟ್ ಪಡೆದರು, ಉಳಿದ ಯಾವುದೇ ಬೌಲರ್ ಗಳು ವಿಕೆಟ್ ಪಡೆಯಲು ಪರದಾಡಿದರು ಹಾಗೂ ದುಬಾರಿಯಾದರು.
ಗುರಿ ಬೆನ್ನತ್ತಿದ್ದ ಆಫ್ಘನ್ ಪಡೆ ಉತ್ತಮ ಆರಂಭವನ್ನು ಪಡೆಯಿತು, ಆರಂಭಿಕ ಆಟಗಾರರಾದ ಗುಬಾ೯ಜ್ (50), ನಾಯಕ ಇಬ್ರಾಹಿಂ ಜದ್ರಾನ್ (50) ಮೊದಲ ವಿಕೆಟ್ ಗೆ 93 ರನ್ ಗಳಿಸಿದರು. ನಂತರ ಬಂದ ಗುಲ್ಬದ್ದಿನ್ (55) ಗಳಿಸಿ ಬಲ ತುಂಬಿದರು.
ಮಧ್ಯಮ ಕ್ರಮಾಂಕದ ಆಟಗಾರರಾದ ಮೊಹಮ್ಮದ್ ನಬಿ ಬಿರುಸಿನ 34 ರನ್ ಗಳಿಸುವ ಮೂಲಕ ತಂಡ ಮೊತ್ತವನ್ನು ಗೆಲುವಿನ ಕಡೆ ಕೊಂಡೊಯ್ದರು ಸಹ ಗೆಲುವು ಸಿಗಲಿಲ್ಲ, ಕೇವಲ ಡ್ರಾಗೆ ತೃಪ್ತಿ ಪಡಬೇಕಾಯಿತು.
ನಂತರ ನಡೆದ ಸೂಪರ್ ಓವರ್ ನಲ್ಲಿ ಭಾರತಕ್ಕೆ 17 ರನ್ ಗುರಿ ನೀಡಲಾಯಿತು, ಭಾರತ ತಂಡ 16 ರನ್ ಗಳಿಸಿ ಮತ್ತೊಮ್ಮೆ ಸೂಪರ್ ಓವರ್ ನತ್ತ ಪಂದ್ಯ ಹೆಜ್ಜೆ ಹಾಕಿತು, ಎರಡನೇ ಸೂಪರ್ ಓವರ್ ನಲ್ಲಿ ಭಾರತ ಕೇವಲ 11 ರನ್ ಗಳಿಸಿ ಎರಡು ವಿಕೆಟ್ ಕಳೆದುಕೊಂಡಿತು.
ಆದರೆ ಭಾರತಕ್ಕೆ ಆಪತ್ಕಾಲದಲ್ಲಿ ಕೇವಲ 1 ರನ್ ನೀಡಿ ಎರಡು ವಿಕೆಟ್ ಪಡೆದು ರವಿ ಬಿಷ್ಣೋಯಿ ಭಾರತಕ್ಕೆ ಗೆಲುವಿನ ಉಡುಗೊರೆ ನೀಡಿದರು, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು, ಆಲ್ ರೌಂಡರ್ ಪ್ರದರ್ಶನ ನೀಡಿದ್ದ ಶಿವಂ ದುಬೆ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.