Categories: ಲೇಖನ

ರೈತ ಚಳವಳಿಗಳು, ದಲಿತ ಚಳವಳಿಗಳು, ಕನ್ನಡ ಚಳವಳಿಗಳು ಮತ್ತು ಚುನಾವಣಾ ರಾಜಕೀಯದಲ್ಲಿ ಇವುಗಳ ವಿಫಲತೆಗಳು…….

ಮಾಹಿತಿ ಇಲ್ಲದ ಕೆಲವರಿಗೆ ಆಶ್ಚರ್ಯವಾಗಬಹುದು, ಇಲ್ಲಿಯವರೆಗೂ ಪಕ್ಕಾ ರೈತ ಹೋರಾಟದ ನೇತೃತ್ವ ವಹಿಸಿದ್ದ ಕೇವಲ ಮೂರು ಜನ ಮಾತ್ರ ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗಿದ್ದಾರೆ. ಎಂ.ಡಿ.ನಂಜುಂಡ ಸ್ವಾಮಿ, ಬಾಬಾ ಗೌಡ ಪಾಟೀಲ್,ಕೆ.ಎಸ್. ಪುಟ್ಟಣ್ಣಯ್ಯ….

ಪಕ್ಕಾ ಕನ್ನಡ ಹೋರಾಟಗಾರರಲ್ಲಿ ವಾಟಾಳ್ ನಾಗರಾಜ್,
ಜಿ. ನಾರಾಯಣ ಕುಮಾರ್….

ದಲಿತ ಹೋರಾಟದಲ್ಲಿ ಮೀಸಲಾತಿ ಕ್ಷೇತ್ರ ಹೊರತುಪಡಿಸಿ ಮತ್ತು ಯಾವುದೇ ಪಕ್ಷದ ಬೆಂಬಲವಿಲ್ಲದೆ ಸಾಮಾನ್ಯ ಕ್ಷೇತ್ರದಲ್ಲಿ ಒಬ್ಬರೂ ಆಯ್ಕೆಯಾಗಿಲ್ಲ.

( ನನ್ನ ನೆನಪಿನಲ್ಲಿ ದಾಖಲಾಗಿರುವುದು ಇಷ್ಟು ಮಾತ್ರ. ಇನ್ನೂ ಒಂದೆರಡು ಇದ್ದರೆ ದಯವಿಟ್ಟು ನೆನಪು ಮಾಡಿ )

ಇಷ್ಟು ಬಿಟ್ಟರೆ ಇನ್ನೇನು ಹೆಚ್ಚಿನ ‌ಸಾಧನೆ ಮಾಡಲು ಸಾಧ್ಯವಾಗಿಲ್ಲ. ಕೆಲವು ರೈತ ನಾಯಕರು, ಕನ್ನಡ ಹೋರಾಟಗಾರರು, ದಲಿತ ನಾಯಕರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಕೆಲವರು ನಮಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ ಕೇವಲ ಹೋರಾಟ ಮಾತ್ರ ಎಂದು ಸಮರ್ಥಿಸಬಹುದು. ಆದರೆ ಈ ಚುನಾವಣಾ ರಾಜಕೀಯದ ಪ್ರಯೋಗಗಳು ನಡೆದು ಸೋಲು ಅನುಭವಿಸಿರುವುದು ನಿಜ. ತೀರಾ ಇತ್ತೀಚೆಗೆ ಮಹದಾಯಿ ನದಿ ನೀರಿನ ಹೋರಾಟಗಾರರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡರು.

ರಾಜ್ಯದಲ್ಲಿ ರೈತರೇ ಬಹುಸಂಖ್ಯಾತರು, ಕನ್ನಡಿಗರದೇ ಸಾರ್ವಭೌಮತ್ವ, ದಲಿತ ಬಂಡಾಯ ಚಳವಳಿಗಳೇ ಶೋಷಿತರ ಧ್ವನಿ, ಆದರೂ ಚುನಾವಣಾ ರಾಜಕೀಯದಲ್ಲಿ ಇವು ಹೀನಾಯ ವಿಫಲತೆಯನ್ನು ಕಾಣುತ್ತಿವೆ.

ಈ ಸಂಘಟನೆಗಳ ಹೋರಾಟದ ವಿಷಯಗಳೇ ಅತ್ಯಂತ ರೋಮಾಂಚನಕಾರಿ, ನಿಸ್ವಾರ್ಥ ಮತ್ತು ಬಹುಸಂಖ್ಯಾತ ಜನರ ನಿಜವಾದ ಬೇಡಿಕೆಗಳೇ ಆಗಿರುತ್ತವೆ. ಸಾಮಾನ್ಯ ಜನರ ಹಿತಾಸಕ್ತಿಗೆ ಪೂರಕವಾಗಿರುತ್ತದೆ. ಬಹುತೇಕ ಜಾತಿ ಧರ್ಮ ವರ್ಗ ರಹಿತವಾಗಿರುತ್ತದೆ. ಆದರೂ ಮತ ಚಲಾವಣೆ ಸಂದರ್ಭದಲ್ಲಿ ಮಾತ್ರ ಬೆರಳುಗಳು ಪಕ್ಷ ರಾಜಕಾರಣಿಗಳಿಗೆ ಒತ್ತುತ್ತವೆ.

ಹಾಗಾದರೆ ಕೊರತೆ ಇರುವುದು ನಾಯಕರಲ್ಲಿಯೇ, ಸಂಘಟನೆಯಲ್ಲಿಯೇ,
ಹೋರಾಟದ ವಿಷಯಗಳ ಆಯ್ಕೆಯಲ್ಲಿಯೇ,
ಅದನ್ನು ತಲುಪಿಸುವಲ್ಲಿಯೇ,
ಜನರ ಮನೋಭಾವದಲ್ಲಿಯೇ,
ಒಟ್ಟು ವ್ಯವಸ್ಥೆಯಲ್ಲಿಯೇ……?

ಚುನಾವಣಾ ರಾಜಕೀಯದಲ್ಲಿ ಹಣ ಹೆಂಡ ಜಾತಿ ಧರ್ಮ ತಂತ್ರ ಕುತಂತ್ರಗಳು ಮತ್ತು ಸುಳ್ಳು ಭರವಸೆಗಳದು ಮುಖ್ಯ ಪಾತ್ರ ಎಂಬುದು ಸ್ವಲ್ಪ ಮಟ್ಟಿಗೆ ನಿಜ. ಆದರೆ ಈ ಚಳವಳಿಗಳು ಅಧಿಕಾರದ ಹಂತಕ್ಕೆ ತಲುಪಬಹುದು ಸಾಧ್ಯವೇ ಆಗುತ್ತಿಲ್ಲ ಎಂಬುದಕ್ಕೆ ಇದು ಒಂದು ನೆಪವಷ್ಟೆ.

ನಮ್ಮ ಜನರ ಮಾನಸಿಕ ಸ್ಥಿತಿ ಇದಕ್ಕೆ ಬಹುಮುಖ್ಯ ಕಾರಣ. ಮಾತುಗಳಲ್ಲಿ ಏನೇ‌ ಹೇಳಿದರು ಅಂತಿಮವಾಗಿ ತಮಗೆ ವೈಯಕ್ತಿಕವಾಗಿ ಆಗುವ ಲಾಭಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ತಾವು ಮತ್ತು ತಮ್ಮವರು ಮಾತ್ರ ಇತರರಿಗಿಂತ ಒಳ್ಳೆಯವರು ಎಂಬ ಸ್ವಾರ್ಥ ಮನೋಭಾವ ಹೆಚ್ಚಾಗಿದೆ. ವಿಷಯಗಳನ್ನು ದೇಶ ಅಥವಾ ರಾಜ್ಯದ ಒಟ್ಟು ಹಿತಾಸಕ್ತಿಯಿಂದ ನೋಡದೆ ತಮ್ಮ ಒಳಿತನ್ನು ಮಾತ್ರ ಗಣನೆಗೆ ತೆಗೆದುಕೊಳ್ಳುವುದರಿಂದ ಭ್ರಷ್ಟರಾದರು ರಾಜ್ಯದ ಹಿತಕ್ಕೆ ಮಾರಕವಾದರೂ ತಮ್ಮವರನ್ನೇ ಬೆಂಬಲಿಸುತ್ತಾರೆ.

ಅಸೂಯೆ ಅಥವಾ ಹೊಟ್ಟೆ ಉರಿ ನಮ್ಮ ಜನರ ಭಾವನೆಗಳಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಬಡತನ ಅಜ್ಞಾನ ಮೂಢನಂಬಿಕೆಗಳ ಕಾರಣದಿಂದಾಗಿ ಇದು ನಮ್ಮ ಸಮಾಜದ ಸಾಮೂಹಿಕ ಭಾವವಾಗಿ ಅಂತರ್ಗತವಾಗಿದೆ. ಇದರಿಂದಾಗಿ ಚೇಲಾಗಳು, ಚಮಚಾಗಳು, ಹಿಂಬಾಲಕರು, ಪುಡಾರಿಗಳು, ಬಾಲಂಗೋಚಿಗಳು, ಅಭಿಮಾನಿಗಳು ಎಂಬ ಕರೆಯಲ್ಪಡುವ ಹೊಟ್ಟೆ ಪಾಡಿನ ಒಂದು ವರ್ಗವೇ ಸೃಷ್ಟಿಯಾಗಿದೆ. ಇವರಿಗೆ ಹೋರಾಟ ಚಳವಳಿ ಸಮಾಜದ ಪ್ರಗತಿ ಮುಂತಾದ ವಿಷಯಗಳಿಗಿಂತ ವೈಯಕ್ತಿಕ ಲಾಭವೇ ಮುಖ್ಯ. ಚುನಾವಣೆಯಲ್ಲಿ ಇವರದೇ ಬಹುಮುಖ್ಯ ಪಾತ್ರ. ಇದನ್ನು ರಾಜಕೀಯ ಪಕ್ಷಗಳು ತುಂಬಾ ಚೆನ್ನಾಗಿ ಉಪಯೋಗಿಸಿಕೊಳ್ಳುತ್ತವೆ.

ಇನ್ನು ಸಂಘಟನೆಗಳ ನಾಯಕರಲ್ಲಿ ಅಧ್ಯಯನ, ದಕ್ಷತೆ, ಆಡಳಿತಾತ್ಮಕ ವಿಷಯಗಳ ಕೊರತೆ ಸ್ವಲ್ಪ ಮಟ್ಟಿಗೆ ಕಾರಣವಾದರೆ ಒಡೆದು ಆಳುವ ನೀತಿಯ ರಾಜಕಾರಣಿಗಳ ಕುತಂತ್ರದಿಂದ ಈ ಸಂಘಟನೆಗಳು ಕವಲುಗಳಾಗಿ ಬೇರ್ಪಡುತ್ತವೆ. ಹಣ ಜಾತಿ ಮತ್ತು ಅಧಿಕಾರದ ಆಸೆಗೆ ಸಂಘಟನೆಗಳ ಎರಡನೆಯ ದರ್ಜೆಯ ನಾಯಕರು ಸುಲಭವಾಗಿ ಬಲಿಯಾಗುತ್ತಾರೆ. ಅದಕ್ಕೆ ನೆಪ ಮಾತ್ರದ ಕಾರಣಗಳನ್ನು ನೀಡಿ ಲೆಟರ್ ಹೆಡ್ ಸಂಸ್ಥೆಗಳನ್ನು ಸ್ಥಾಪಿಸಿ ಕೇವಲ ಮಾಧ್ಯಮಗಳ ಪೇಪರ್ ಟೈಗರ್ ಗಳಂತಾಗುತ್ತಾರೆ. ಇದು ಜನರಲ್ಲಿ ಭ್ರಮನಿರಸನ ಉಂಟು ಮಾಡಿ ಎಲ್ಲರೂ ಕಳ್ಳರೆ ಎಂಬ ಸಿನಿಕತನ ಮನೆ ಮಾಡಿದೆ.
ಇದರಿಂದಾಗಿ ಅನೇಕ ಹೋರಾಟಗಾರರದು ಹೊಟ್ಟೆ ಪಾಡಿನ ಕಾಯಕ ಎಂದೇ ಜನ ಭಾವಿಸುವಂತಾಗಿದೆ.

ಹುಡುಕುತ್ತಾ ಹೋದರೆ ಇನ್ನೂ ಅನೇಕ ಕಾರಣಗಳು ನಮಗೆ ಸಿಗುತ್ತದೆ. ಆದರೆ ಇದಕ್ಕೆ ಅಪವಾದ ಎಂಬಂತೆ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲಿ ಮೂಡಿಬಂದ ಅರವಿಂದ್ ಕೇಜ್ರಿವಾಲ್ ಚುನಾವಣಾ ರಾಜಕೀಯದಲ್ಲಿ ಯಶಸ್ವಿಯಾಗಿ ಎರಡನೆಯ ಬಾರಿ ಆಯ್ಕೆಯಾದ ಒಂದು ಮಾದರಿ ಉದಾಹರಣೆ ಸಹ ನಮ್ಮ ಮುಂದಿದೆ.

ರೈತರು, ಕಾರ್ಮಿಕರು, ಶೋಷಿತರು, ಕನ್ನಡ ಪರ ಹೋರಾಟಗಾರರು, ಮಹಿಳಾ ಪರ ಚಿಂತಕರು ಕೇವಲ ಹೋರಾಟ, ಪ್ರದರ್ಶನ ಮತ್ತು ನಾಯಕತ್ವಕ್ಕೆ ಮಾತ್ರ ಪ್ರಾಮುಖ್ಯತೆ ಕೊಡದೆ ತಮ್ಮ ನಿಜವಾದ ಬೇಡಿಕೆಗಳು ಈಡೇರಬೇಕಾದರೆ ಅಧಿಕಾರ ಕೇಂದ್ರದ ಮೇಲೆ ನಿಯಂತ್ರಣ ಸಾಧಿಸುವುದು ಮುಖ್ಯ. ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಇಲ್ಲಿ ಜನರ ಬಹುಮತವೇ ಮುಖ್ಯ ಮತ್ತು ಅದು ಚುನಾವಣೆಯಲ್ಲಿ ಸಾಬೀತಾಗಬೇಕು. ಇಲ್ಲದಿದ್ದರೆ ಕೇವಲ ದೀರ್ಘ ಅವಧಿಯಲ್ಲಿ ಹೋರಾಟಗಳು ಕೇವಲ ಸಾಂಕೇತಿಕ ಪ್ರತಿಭಟನೆ ಮಾತ್ರವಾಗಿ ಉಳಿಯುತ್ತದೆ.

ಹಾಗೆಂದು ಹೋರಾಟಗಳನ್ನು ಹಗುರವಾಗಿ ಪರಿಗಣಿಸುತ್ತಿಲ್ಲ. ಈ ಚಳವಳಿಗಳೇ ಸಮಾಜ ಸುಧಾರಣೆಯ ಮೊದಲ ಹೆಜ್ಜೆಗಳು. ಕಾಗೋಡು ಸತ್ಯಾಗ್ರಹ, ನರಗುಂದ ರೈತ ಬಂಡಾಯ, ಗೋಕಾಕ್ ಚಳವಳಿ, ಸಮಾಜವಾದಿ ಒಕ್ಕೂಟ, ಶೋಷಿತರ ಬಂಡಾಯ ಸಾಹಿತ್ಯ ಸಮ್ಮೇಳನ ಮುಂತಾದ ಉದಾಹರಣೆಗಳು ನಮ್ಮ ಮುಂದಿವೆ. ಆದರೆ ಬದಲಾದ ಕಾಲಘಟ್ಟದಲ್ಲಿ ಹೋರಾಟಗಳು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ ಜನರ ಮನಗಳಲ್ಲಿ,
ಮನೆಗಳಲ್ಲಿ,
ಮತಗಳಲ್ಲಿ,
ಬದಲಾವಣೆ ಉಂಟುಮಾಡಿ ಅಧಿಕಾರ ಕೇಂದ್ರಕ್ಕೆ ಹತ್ತಿರವಾದರೆ ಹೋರಾಟಗಳ ಸಾರ್ಥಕತೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಚಳವಳಿಗಳು ರೂಪಗೊಳ್ಳಲಿ, ಪ್ರಜಾಪ್ರಭುತ್ವದ ನಿಜವಾದ ಆಶಯ ‌ಸಾಕಾರಗೊಳ್ಳುವ ದಿನಗಳು ಬರಲಿ,
ನಮ್ಮ ಕಣ್ಣ ಮುಂದಿನ ಅನೇಕ ಬಡತನದ ಬವಣೆಳಿಗೆ ಪರಿಹಾರ ಸಿಗಲಿ ಎಂದು ಆಶಿಸುತ್ತಾ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು- ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮಿ .ವಿ

ದೊಡ್ಡಬಳ್ಳಾಪುರ: ಮಹಿಳಾ ದಿನ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಮಹಿಳೆಯರ ಸಮಾನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತ ಎಂದು…

5 hours ago

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 87ನೇ ಸ್ಥಾಪನಾ ದಿನಾಚರಣೆ: ಉಚಿತ ಆರೋಗ್ಯ ಶಿಬರ ಮತ್ತು ರಕ್ತದಾನ ಶಿಬಿರ ಆಯೋಜನೆ

ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 87ನೇ ಸ್ಥಾಪನಾ ದಿನಾಚರಣೆ ಹಿನ್ನೆಲೆ ಕರ್ನಾಟಕ ಮತ್ತು ಕೇರಳ ವಲಯದ CRPF ಬೆಂಗಳೂರು…

5 hours ago

ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ: ದೊಡ್ಡಬಳ್ಳಾಪುರಕ್ಕೆ ಕಳೆದ ಒಂದು ವಾರದಿಂದ ಬಾರದ ವಾಣಿಜ್ಯ ಸಿಲಿಂಡರ್ ಗಳು: ನಗರದ ಹೋಟೆಲ್ ಗಳು, ಘಾಟಿ ಕ್ಷೇತ್ರಕ್ಕೂ ತಟ್ಟಿದ ಬಿಸಿ: ಸೌದೆ ಒಲೆ ಮೊರೆ ಹೋದ ಜನ

ಮದ್ಯಪ್ರಾಚ್ಯಗಳ ದೇಶಗಳಲ್ಲಿ ನಡೆಯುತ್ತಿರುವ ಯುದ್ದಗಳಿಂದಾಗಿ ಎಲ್.ಪಿ.ಜಿ ಕೊರತೆ ದೇಶಕ್ಕೆ ಎದುರಾಗಿದೆ. ಹೋಟೆಲ್ ಗಳಲ್ಲಿ ವಾಣಿಜ್ಯ ಸಿಲಿಂಡರ್ ಗಳ ಅಭಾವ ಸೃಷ್ಟಿಯಾಗಿ…

6 hours ago

ಮಧ್ಯಪ್ರಾಚ್ಯದಲ್ಲಿ ಯುದ್ಧ ಹಿನ್ನೆಲೆ: ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವ: ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಇಲ್ಲ- ಆಹಾರ ಸಚಿವ ಕೆ.ಎಚ್. ಮುನಿಯಪ್ಪ

ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವದ ಪರಿಸ್ಥಿತಿ ಸೃಷ್ಟಿಯಾಗಿರುವ ವರದಿಗಳ ನಡುವೆ ಗೃಹ ಬಳಕೆಯ…

9 hours ago

Arizona’s New Wave of Home‑Buying Assistance: What Buyers Need to Know

The desert sun has always promised a bright future for Arizona residents, but the rising…

15 hours ago

ರಾಜಕೀಯ ಮತ್ತು ಸಾಂಸ್ಕೃತಿಕ ಜನಜೀವನದಲ್ಲಿ ಅತಿಮುಖ್ಯ ಪಾತ್ರವಹಿಸಿದ ಕೆಲವೇ ಪ್ರಮುಖರಲ್ಲಿ ಲಂಕೇಶ್ ಒಬ್ಬರು

ಪಿ. ಲಂಕೇಶ್........ ಮಾರ್ಚ್ 8, 1935, ಜನವರಿ 25, 2000.... ಎರಡು ವೈರುಧ್ಯಗಳ ಚಿಂತನೆಯ ಜನರಲ್ಲಿ ಪ್ರೀತಿ - ದ್ವೇಷ…

16 hours ago