ಕೋಲಾರ: ಕೃಷಿ ಕಾಯ್ದೆಗಳು ಮತ್ತು ಕಾರ್ಮಿಕ ಸಂಹಿತೆಗಳನ್ನು ವಾಪಸು ಪಡೆದು, ರೈತರು, ಕಾರ್ಮಿಕರು, ಕೃಷಿ ಕೂಲಿಕಾರರ ಪರವಾದ ನೀತಿಗಳನ್ನು ಜಾರಿ ಮಾಡಲು ಒತ್ತಾಯಿಸಿ ಸಿಐಟಿಯು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ರೈತರು ಮತ್ತು ಕಾರ್ಮಿಕರು ಶುಕ್ರವಾರ ನಗರದ ತಹಶೀಲ್ದಾರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಜಮಾಗೊಂಡು ಅಲ್ಲಿಂದ ಮೆರವಣಿಗೆಯಲ್ಲಿ ಸರಕಾರದ ನೀತಿಗಳ ವಿರುದ್ದ ಘೋಷಣೆಗಳನ್ನು ಕೂಗಿ ತಹಶಿಲ್ದಾರ್ ಕಚೇರಿಗೆ ಆಗಮಿಸಿ ಧರಣಿ ನಡೆಸಿದರು
ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ ಮಾತನಾಡಿ, ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದು, ಭ್ರಷ್ಟಾಚಾರವನ್ನು ನಿಯಂತ್ರಣ ಮಾಡುವುದಾಗಿ, ಸ್ವಾಮಿನಾಥನ್ ಆಯೋಗ ವರದಿಯನ್ನು ಜಾರಿ ಮಾಡುವುದಾಗಿಯೂ ಹೇಳಿ ಅಧಿಕಾರಕ್ಕೆ ಬಂದ ಮೋದಿರವರ ಕಳೆದ ಹತ್ತು ವರ್ಷಗಳಿಂದ ರೈತರು, ಕಾರ್ಮಿಕರ ವಿರೋಧಿ ನೀತಿಗಳನ್ನು ನಿರಂತರವಾಗಿ ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾರ್ಪೋರೇಟ್ ಕಂಪನಿಗಳು ಲಾಭಕ್ಕಾಗಿ ರೈತರು, ಕಾರ್ಮಿಕರು ಅಲ್ಪಸ್ವಲ್ಪ ಪ್ರಯೋಜನವಾಗಿದ್ದ ಕಾಯ್ದೆಗಳನ್ನು ತಿದ್ದುಪಡಿ ಮಾಡಲಾಗುತ್ತಿದೆ. ಅಲ್ಲದೇ ದೇಶದ ಹೆಮ್ಮೆಯ ಸಾರ್ವಜನಿಕ ಉದ್ದಿಮೆಗಳು, ಬ್ಯಾಂಕ್‌ಗಳು, ವಿಮೆ ಸಂಸ್ಥೆಗಳು, ವಿದ್ಯುತ್ ಕಂಪನಿಗಳು, ರಸ್ತೆಗಳು, ಕ್ರೀಡಾಂಗಣಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಅಲ್ಲದೇ ಕಾರ್ಮಿಕರಿಗೆ ಈಗಿನ ಬೆಲೆ ಏರಿಕೆಗೆ ತಕ್ಕಂತೆ ಕನಿಷ್ಠ ಕೂಲಿಯನ್ನು ರೂ. 32 ಸಾವಿರ ರೂ. ವೇತನ ನೀಡಬೇಕು, ಎಲ್ಲಾ ಸ್ಕೀಂ ನೌಕರರನ್ನು ಖಾಯಂ ಮಾಡಬೇಕು, ಗುತ್ತಿಗೆ, ಹೊರ ಗುತ್ತಿಗೆ ನೌಕರರನ್ನು ಖಾಯಂ ಮಾಡಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್ ಮಾತನಾಡಿ, ರೈತ ವಿರೋಧಿ ಮೂರು ಕೃಷಿ ಕಾನೂನುಗಳನ್ನು ವಾಪಸು ಪಡೆಯುವುದಾಗಿ ರೈತರಿಗೆ ಲಿಖಿತವಾಗಿ ಭರವಸೆ ನೀಡಿದ್ದ ಪ್ರಧಾನಿ ಮೋದಿರವರು ಈ ಕಾನೂನುಗಳನ್ನು ಹಿಂಬಾಗಿಲಿನಿಂದ ಜಾರಿ ಮಾಡಲು ಹೊರಟಿರುವುದು ಖಂಡನೀಯ. ರೈತರ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ ಶೇಕಡಾ 50 ರಷ್ಟು ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಗೆ ಕಾನೂನು ಮಾಡುವಂತೆ ಒತ್ತಾಯಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಹೊರಟಿರುವ ರೈತರಿಗೆ ಕೇಂದ್ರ ಸರ್ಕಾರವು ನಿರಂತರವಾಗಿ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದರು..
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ರೈತರ ಶಾಂತಿಯುತ ಹೋರಾಟದ ಮೇಲೆ ಪೊಲೀಸ್ ಹಾಗೂ ಸಶಸ್ತ್ರ ಭದ್ರತಾ ಪಡೆಗಳನ್ನು ಭೂ ಬಿಟ್ಟಿರುವುದಲ್ಲದೇ, ಲಾಠಿ ಪ್ರಹಾರ, ರಬ್ಬರ್ ಬುಲೆಟ್, ಆಶ್ರುವಾಯು ಸಿಡಿತದಂತಹ ಪೈಶಾಚಿಕ ದೌರ್ಜನ್ಯವನ್ನು ರೈತರ ಮೇಲೆ ಎಸಗಿರುವುದು ನಾಚಿಕೆಗೇಡಿನ ವಿಷಯ. ಕೂಡಲೇ ಕೇಂದ್ರ ಸರ್ಕಾರವು ರೈತರು ಹೋರಾಟ ನಡೆಸಲು ಅವಕಾಶ ಕಲ್ಪಿಸಬೇಕು, ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಖಜಾಂಚಿ ಹೆಚ್.ಬಿ.ಕೃಷ್ಣಪ್ಪ, ತಾಲ್ಲೂಕು ಸಂಚಾಲಕ ಎಂ.ಭೀಮರಾಜ್, ಮುಖಂಡರಾದ ಎನ್.ಕಲ್ಪನಾ, ವಿ.ಮಂಜುಳ, ಎಸ್.ಆಶಾ, ಲಕ್ಷ್ಮೀದೇವಮ್ಮ ರಾಜಮ್ಮ, ಜಯಲಕ್ಷೀ, ನಾಗರತ್ನ, ಉಮ, ಗೌರಮ್ಮ, ಶಾಂತಮ್ಮ, ಲೋಕೇಶ್ವರಿ, ರುಕ್ಮಣಿ, ರೈತ ಸಂಘದ ಮುಖಂಡರಾದ ಎನ್.ಎನ್.ಶ್ರೀರಾಮ್, ವಿ.ನಾರಾಯಣರೆಡ್ಡಿ, ಆಲಹಳ್ಳಿ ವೆಂಕಟೇಶಪ್ಪ, ಹೊಲ್ಲಂಬಳಿ ವೆಂಕಟೇಶಪ್ಪ, ಎನ್.ಯಲ್ಲಪ್ಪ, ನಾರಾಯಣಸ್ವಾಮಿ ಮತ್ತಿತರರು ವಹಿಸಿದ್ದರು.