
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ.
ಕೆಐಎಡಿಬಿಯಿಂದ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ಸುಮಾರು 1,200ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟಕ್ಕೆ ಮಣಿದ ಸರ್ಕಾರ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ.
ವಿಧಾನಸೌಧದಲ್ಲಿ ಇಂದು(ಮಂಗಳವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಚನ್ನರಾಯಪಟ್ಟಣ ಹೋಬಳಿಯ ರೈತರ ಹೋರಾಟಕ್ಕೆ ಮಣಿದಿರುವ ರಾಜ್ಯ ಸರ್ಕಾರ ಕೊನೆಗೂ ಭೂ ಸ್ವಾಧೀನ ಪ್ರಕ್ರಿಯೆ ಕೈಬಿಡಲು ನಿರ್ಧರಿಸಿದೆ. ಈ ಹಿನ್ನೆಲೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ದೇವನಹಳ್ಳಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಚನ್ನರಾಯಪಟ್ಟಣ ಹೋಬಳಿ ರೈತರೊಂದಿಗೆ ವಿವಿಧ ಸಂಘಟನೆಯ ರಾಜ್ಯ ಮುಖಂಡರು ತಮಟೆ ಸದ್ದಿಗೆ ನೃತ್ಯ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ.
ದೇವನಹಳ್ಳಿ ಪಟ್ಡಣದ ಪ್ರವಾಸಿ ಮಂದಿರದಲ್ಲಿ ಬೆಂಗಳೂರಿನಿಂದ ಆಗಮಿಸಿದ ರೈತರ ನಿಯೋಗ ಕುಣಿದು ಕುಪ್ಪಳಿಸಿದ್ದಾರೆ.
ಹೋರಾಟದ ಹಿನ್ನೆಲೆ
ರೈತರು ಅನ್ನ ಕೊಡುವ ಭೂಮಿಯ ಉಳಿವಿಗಾಗಿ ಸತತ 1198 ದಿನಗಳಿಂದ ಸರ್ಕಾರದೊಂದಿಗೆ ತೀವ್ರ ಸಂಘರ್ಷ ಮಾಡುತ್ತಿದ್ದರು. ರೈತರ ಜೊತೆ ರಾಜ್ಯ ಮಟ್ಟದ ವಿವಿಧ ಸಂಘಟನೆಗಳ ಪ್ರಭಾವಿ ಹೋರಾಟಗಾರರು ದೇವನಹಳ್ಳಿಗೆ ಲಗ್ಗೆ ಇಟ್ಟು, ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ್ದರು.
ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ ರಾಷ್ಟ್ರ ಮಟ್ಟದ ನಾಯಕರಾದ ರಾಕೇಶ್ ಟಿಕಾಯತ್, ನಿವೃತ್ತ ನ್ಯಾಯಮೂರ್ತಿಗಳಾದ ಗೋಪಾಲಗೌಡರು, ನಾಗಮೋಹನ್ ದಾಸ್, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಂಸದ ವೀರಪ್ಪ ಮೊಯಿಲಿ, ಸಂಸದ ಡಾ.ಕೆ.ಸುಧಾಕರ್, ಮಾಜಿ ಸಚಿವ ಎಂಟಿಬಿ ನಾಗರಾಜ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಸೇರಿದಂತೆ ಎಲ್ಲಾ ಪಕ್ಷದ ನಾಯಕರು, ಸಿನಿಮಾ ನಟರು, ವಿವಿಧ ಸಂಘಟನೆಗಳ ಮುಖಂಡರು ಧರಣಿ ವೇದಿಕೆ ಹಂಚಿಕೊಂಡು ರೈತರ ಪರವಾಗಿ ಹೋರಾಟ ನಡೆಸಿದರು.
ಭೂಮಿ ಸ್ವಾಧೀನಕ್ಕೆ ಏಕೆ ವಿರೋಧ?
ಚನ್ನರಾಯಪಟ್ಟಣ ಭಾಗದಲ್ಲಿ ಕೃಷಿ ಭೂಮಿ ಹೆಚ್ಚು ಫಲವತ್ತಾಗಿದ್ದು, ಬೆಂಗಳೂರು ಮಹಾನಗರಕ್ಕೆ ನಿತ್ಯ ಟನ್ ಗಟ್ಟಲೇ ಹಣ್ಣು, ತರಕಾರಿ, ಹೂವು, ಹಾಲುನ್ನು ಸರಬರಾಜು ಮಾಡುತ್ತಿದೆ. ಇಲ್ಲಿ ಬೆಳೆಯುವ ರೇಷ್ಮೆ, ಬೆಂಗಳೂರು ಬ್ಲೂ ದ್ರಾಕ್ಷಿಗಳು ವಿದೇಶಕ್ಕೆ ರಫ್ತಾಗುತ್ತಿದೆ. ತಲೆಮಾರುಗಳಿಂದ ಕೃಷಿಯನ್ನೇ ನಂಬಿರುವ ಸಮುದಾಯಗಳಿದ್ದು, ಅನ್ನ ಕೊಡುವ ಭೂಮಿಯ ಮಣ್ಣನ್ನು ಮಾರುವುದಿಲ್ಲ, ಜೀವಾಮೃತ ಬೆಳೆಯುವ ಮಣ್ಣಿನ ಮೇಲೆ ಕೈಗಾರಿಕೆಗಳು ನಿರ್ಮಿಸಬೇಡಿ ಎಂದು ಪಟ್ಟು ಹಿಡಿದು ವಿರೋಧ ವ್ಯಕ್ತಪಡಿಸಿದ್ದರು.
ಇದೇ ಕೃಷಿ ಭೂಮಿಯಲ್ಲಿ ಸರ್ಕಾರ ನೀಡುವ ಪರಿಹಾರದ ಹಣಕ್ಕಿಂತ ಹತ್ತು ಪಟ್ಟು ಹೆಚ್ಚಿನ ಆದಾಯವನ್ನು ಕೃಷಿ ಕ್ಷೇತ್ರದಲ್ಲಿಯೇ ಸಂಪಾದಿಸುವ ಕೌಶಲ್ಯತೆಯನ್ನು ಇಲ್ಲಿನ ರೈತರು ಸಾಧಿಸಿದ್ದಾರೆ. ಹೈನುಗಾರಿಕೆ ಮತ್ತು ರೇಷ್ಮೆ ಸಾಕಾಣಿಕೆಯಲ್ಲಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುವವರ ಸಂಖ್ಯೆಯೂ ಹೆಚ್ಚಾಗಿದೆ.
ಈಗಾಗಲೇ ಕೃಷಿ ಭೂಮಿಯನ್ನು ಕಳೆದುಕೊಂಡ ಜನರು ಸರ್ಕಾರವೂ ನೀಡುವ ಪರಿಹಾರವನ್ನು ಪಡೆಯಲು ನ್ಯಾಯಾಲಯಗಳಿಗೆ ಅಲೆದಾಡಿ, ಬಂದ ಹಣವನ್ನು ಕಳೆದುಕೊಂಡು ಬೀದಿ ಪಾಲಾಗಿ, ಭೂ ರಹಿತರಾಗಿರುವ ಉದಾಹರಣೆಗಳು ಇಲ್ಲಿನ ರೈತರು ತಮ್ಮ ಭೂಮಿಯನ್ನು ಸರ್ಕಾರಕ್ಕೆ ನೀಡದಂತೆ ಮಾಡಿದೆ.
ಪಾಳ್ಯ, ಹರಳೂರು, ಪೋಲನಹಳ್ಳಿ, ಚೀಮಾಚನಹಳ್ಳಿ, ಮಟ್ಟಬಾರ್ಲು, ಮುದ್ದೇನಹಳ್ಳಿ, ಚನ್ನರಾಯಪಟ್ಟಣ, ಶ್ರೋತ್ಇಯ ತೆಲ್ಲೋಹಳ್ಳಿ ಮತ್ತು ಹ್ಯಾಡಾಳ ಗ್ರಾಮದಲ್ಲಿ ಸುಮಾರು 10 ಸಾವಿರ ಟನ್ ರಾಗಿ, 2 ಸಾವಿರ ಟನ್ ದ್ರಾಕ್ಷಿ, 150 ಟನ್ ಮಾವು, ತರಕಾರಿ, ಹೂವು ಬೆಳೆಯುತ್ತಿದ್ದು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ 6 ಸಾವಿರ ಜನರಿಗೆ ಉದ್ಯೋಗ ಒದಗಿಸಿದೆ. ಇವರಲ್ಲಿ ಬಡವರು, ರೈತರು, ಕೃಷಿಕರು, ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ತಮ್ಮ ಭೂಮಿ ಉಳಿಸಿಕೊಳ್ಳಲು ಮಾಡಿದ ಪ್ರಾಮಾಣಿಕ ಹೋರಾಟಗಳ ಫಲವಾಗಿ ದೇವನಹಳ್ಳಿ ಟೌನ್ ಠಾಣೆಯಲ್ಲಿ 2 ಎಫ್‌ಐಆರ್ ದಾಖಲಾಗಿತ್ತು, 80ಕ್ಕೂ ಹೆಚ್ಚು ರೈತರು, ಮಹಿಳೆಯರು ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ನ್ಯಾಯ ಕೇಳಿದಕ್ಕಾಗಿ 75ನೇ ಸ್ವಾತಂತ್ರೋತ್ಸವದ ಜಿಲ್ಲಾ ಮಟ್ಟದ ಸಮಾರಂಭದಲ್ಲಿಯೇ ರೈತರ ಮೇಲೆ ಲಾಠಿ ಚಾರ್ಚ್ ಮಾಡಿ, ಯುವಕನೊಬ್ಬನ ಕಣ್ಣು ಕಿತ್ತು ಹಾಕಿದಂತಹ ಅಮಾನವೀಯ ಘಟನೆಗಳು ರೈತರ ಮನಸ್ಸಿನಲ್ಲಿ ದೊಡ್ಡ ಗಾಯ ಮಾಡಿದೆ.

ಒಂದೇ ಭಾಗದಲ್ಲಿ ಪದೇ ಪದೇ ಭೂ ಸ್ವಾಧೀನ
ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಭಾಗದಲ್ಲಿಯೇ ಪದೇ ಪದೇ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ವಿಮಾನ ನಿಲ್ದಾಣಕ್ಕೆ, ಎಸ್‌ಟಿಆರ್‌ಆರ್ ರಸ್ತೆಗಾಗಿ, ಎಸ್‌ಇಝೆಡ್, ಏರೋ ಸ್ಪೇಸ್ ಕೈಗಾರಿಕೆ ವಲಯ, ಡಿಫೆನ್ಸ್ ಕಾರಿಡಾರ್ ಕೈಗಾರಿಕೆ ವಲಯ, ಹರಳೂರು ಕೈಗಾರಿಕೆ ಪ್ರದೇಶಗಳಿಗೆ ನಾಲ್ಕು ಬಾರಿ ಭೂ ಸ್ವಾಧೀನಗೊಂಡಿದ್ದು, ಒಂದೇ ಹೋಬಳಿಯ 6000 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಇಷ್ಟು ಸಾಲದು ಎಂದು ಮತ್ತೆ 1777 ಎಕರೆ ಭೂಮಿಯನ್ನು ವಶಕ್ಕೆ ಪಡೆಯಲು ಸರ್ಕಾರ ಮುಂದಾಗಿರುವುದಕ್ಕೆ ಇಲ್ಲಿನ ರೈತರು ವಿರೋಧಪಡಿಸಿದ್ದರು.
ನೀರಾವರಿ ಭೂಮಿ ಸ್ವಾಧೀನಕ್ಕೆ ಅವಕಾಶವಿಲ್ಲ
ಕೇಂದ್ರದಲ್ಲಿದ್ದ ಯುಪಿಎ ಸರ್ಕಾರವೇ ಜಾರಿಗೆ ತಂದಿರುವ 2013ರ ಭೂ ಸ್ವಾಧೀನ ಕಾಯಿದೆಯ ಅಡಿಯಲ್ಲಿ ನೀರಾವರಿ ಕೃಷಿ ಭೂಮಿಯನ್ನು ಭೂ ಸ್ವಾಧೀನ ಮಾಡಲು ಅವಕಾಶವಿಲ್ಲ, ಯಾವುದೇ ಯೋಜನೆಗೆ ಭೂ ಸ್ವಾಧೀನ ಮಾಡಬೇಕಿದ್ದರೇ ಅಲ್ಲಿನ ಶೇ 51 ರಷ್ಟು ಜನರ ಸಮ್ಮತಿ ಬೇಕಿದೆ. ಆದರೆ, ಚನ್ನರಾಯಪಟ್ಟಣ ಹೋಬಳಿಯಲ್ಲಿ ಶೇ.80 ರಷ್ಟು ರೈತರು ತಮ್ಮ ಪಹಣಿ, ಗುರುತಿನ ದಾಖಲೆಗಳನ್ನು ನೀಡಿ ಲಿಖಿತವಾಗಿ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇಲ್ಲಿ ಶೇ. 33 ರಷ್ಟು ನೀರಾವರಿ, ಶೇ. 50 ರಷ್ಟು ಖುಷ್ಕಿ ಭೂಮಿಯಿದ್ದು, 224 ಬೋರ್‌ವೆಲ್, 162 ಕೃಷಿ ಹೊಂಡಗಳನ್ನು ಹೊಂದಿರುವ ಸಮೃದ್ಧ ಕೃಷಿ ಯೋಗ್ಯ ಭೂಮಿಯಾಗಿರುವುದರಿಂದ ರೈತರು ಭೂಮಿ ನೀಡಲು ನಿರಾಕರಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಭಾಂಗಣದಲ್ಲಿ ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮಾತುಗಳು:
• ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ.
• ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಿದ್ದರೂ ಕೆಲವು ರೈತರು ಜಮೀನು ನೀಡಲು ಸಿದ್ಧರಿರುವುದಾಗಿ ಮುಂದೆ ಬಂದಿದ್ದಾರೆ. ಜಮೀನು ನೀಡಲು ಇಚ್ಚಿಸುವವರ ಜಮೀನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದ್ದು, ಅವರಿಗೆ ಹೆಚ್ಚಿನ ಪರಿಹಾರ ಮತ್ತು ಅಭಿವೃದ್ಧಿಪಡಿಸಿದ ಜಮೀನು ನೀಡಲಾಗುವುದು.
• ಅಂತಹ ರೈತರಿಗೆ ಮಾರ್ಗಸೂಚಿ ದರಕ್ಕಿಂತ ಹೆಚ್ಚುವರಿ ದರವನ್ನು ನೀಡಲಿದೆ. ಅಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರೆಸಲು ಬಯಸುವ ರೈತರು ಕೃಷಿ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಹೋಗಬಹುದಾಗಿದೆ.
• ದೇವನಹಳ್ಳಿ ತಾಲೂಕು ಬೆಂಗಳೂರಿಗೆ ಹತ್ತಿರದ್ದಲ್ಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಲ್ಲಿಯೇ ಇದೆ. ರಾಜ್ಯದ ಪ್ರತಿಯೊಬ್ಬರ ವರಮಾನ ಹೆಚ್ಚಳವಾಗಬೇಕಿದ್ದರೆ ಅಭಿವೃದ್ದಿ ಕಾರ್ಯ ನಡೆಯಬೇಕಾಗಿದೆ. ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ, ಬಂಡವಾಳ ಹೂಡಿಕೆಗೆ ಜಮೀನಿನ ಅಗತ್ಯವಿದೆ. ಜಮೀನು ಸ್ವಾಧೀನಪಡಿಸಿ ಕೈಗಾರಿಕೆಗಳನ್ನು ಪ್ರಾರಂಭಿಸಲು ಸರ್ಕಾರ ನೀಡಬೇಕಾಗುತ್ತದೆ.
• 1777 ಎಕ್ರೆ ಜಮೀನು ದೇವನಹಳ್ಳಿ ತಾಲೂಕಿನಲ್ಲಿ ಸ್ವಾಧೀನಪಡಿಸಿಕೊಂಡು, ಅಲ್ಲಿ ಏರೋಸ್ಪೇಸ್ ಪ್ರಾರಂಭಿಸುವುದು ಸರ್ಕಾರದ ಉದ್ದೇಶ. ಬೆಂಗಳೂರಿನ ಸಮೀಪದಲ್ಲಿ ಇದಕ್ಕೆ ಜಮೀನು ಒದಗಿಸಲು ಕೋರಿಕೆ ಸ್ವೀಕರಿಸಲಾಗಿತ್ತು.
• ರಾಜ್ಯದಲ್ಲಿ ಭೂಸ್ವಾಧೀನ ವಿರುದ್ಧ ಈ ಮಟ್ಟದ ಪ್ರತಿಭಟನೆ ನಡೆದಿಲ್ಲ. ಅದು ಫಲವತ್ತಾದ ವ್ಯವಸಾಯಕ್ಕೆ ಯೋಗ್ಯವಾದ ಭೂಮಿ. ಅಲ್ಲಿನ ರೈತರು ಆ ಜಮೀನಿನ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ. ಆದ್ದರಿಂದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
• ಸರ್ಕಾರ ರೈತರು, ಜಮೀನುದಾರರು ಸೇರಿದಂತೆ ಎಲ್ಲರ ಅಹವಾಲುಗಳನ್ನು ಆಲಿಸಿದೆ. ರಾಜ್ಯದ ಅಭಿವೃದ್ದಿಗೆ, ಬೆಳವಣಿಗೆಗೆ ಕೈಗಾರಿಕೆ ಉತ್ತೇಜನ ನೀಡುವುದು ಅಗತ್ಯವಿದೆ.
• ಯಾವುದೇ ಕಾರಣಕ್ಕೂ ಜಮೀನು ಸ್ವಾಧೀನ ಕೈಬಿಟ್ಟರೆ ಈ ಕೈಗಾರಿಕೆ ಬೇರೆ ಕಡೆ ಹೋಗುವ ಸಾಧ್ಯತೆ ಇದೆ. ಆದರೂ ಸರ್ಕಾರ ರೈತಪರವಾಗಿದ್ದು, ಅವರ ಬೇಡಿಕೆಗಳನ್ನು ಪರಿಗಣಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲು ನಿರ್ಧರಿಸಿದೆ.